ADVERTISEMENT

ನಟಿ ಮೇಲೆ ದೌರ್ಜನ್ಯ: ಖಳನಾದ ನಾಯಕ ನಟ

ಪಿಟಿಐ
Published 12 ಜುಲೈ 2017, 19:30 IST
Last Updated 12 ಜುಲೈ 2017, 19:30 IST
ಬಂಧಿತ ನಟ ದಿಲೀಪ್‌
ಬಂಧಿತ ನಟ ದಿಲೀಪ್‌   

ಕೊಚ್ಚಿ: ಮಲಯಾಳದ ಪ್ರಸಿದ್ಧ ನಟಿಯೊಬ್ಬರನ್ನು ಅಪಹರಿಸಿ ದೌರ್ಜನ್ಯ ಎಸಗಲು ಅಲ್ಲಿನ ಜನಪ್ರಿಯ ನಟ ದಿಲೀಪ್‌ ಅವರ ವೈಯಕ್ತಿಕ ದ್ವೇಷವೇ ಕಾರಣ ಎಂದು ಪೊಲೀಸರು ಹೇಳಿದ್ದಾರೆ.

ನಟಿ ಕಾವ್ಯಾ ಮಾಧವನ್‌ ಜತೆಗೆ ಹೊಂದಿದ್ದ ನಂಟಿನ ಬಗ್ಗೆ ಪತ್ನಿ ಮಂಜು ವಾರಿಯರ್‌ಗೆ (ಈಗ ಮಾಜಿ ಪತ್ನಿ) ಮಾಹಿತಿ ನೀಡಿದ್ದರು ಎಂಬ ಕಾರಣಕ್ಕೆ ಅಪರಣಕ್ಕೆ ಒಳಗಾದ ನಟಿಯ ಮೇಲೆ ದಿಲೀಪ್‌ಗೆ ಭಾರಿ ಸಿಟ್ಟಿತ್ತು. ನಟಿಯ ಮೇಲೆ ಪ್ರತೀಕಾರಕ್ಕೆ 2013ರಲ್ಲಿಯೇ ಅವರು ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. (ಕಾವ್ಯಾ ಅವರನ್ನು ಈಗ ದಿಲೀಪ್‌ ಮದುವೆಯಾಗಿದ್ದಾರೆ).

ನಟಿಯ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯದ ವಿಡಿಯೊ ತಿರುಚಿದ್ದು ಅಥವಾ ನಕಲಿ ಎಂದು ಅನಿಸಲೇಬಾರದು.  ಆ ರೀತಿಯಲ್ಲಿ ಚಿತ್ರೀಕರಿಸಬೇಕು ಎಂದು ಪ್ರಮುಖ ಆರೋಪಿ ಪಲ್ಸರ್‌ ಸುನಿಗೆ ದಿಲೀಪ್‌ ಹೇಳಿದ್ದರು.

ADVERTISEMENT

ಸುನಿಯನ್ನು ಭೇಟಿಯೇ ಆಗಿಲ್ಲ ಎಂದು ದಿಲೀಪ್‌ ವಾದಿಸುತ್ತಿದ್ದಾರೆ. ಆದರೆ ಅದು ಸುಳ್ಳು. ಕಳೆದ ನವೆಂಬರ್‌ 13ರಂದು ಸುನಿಯನ್ನು ಅವರು ಭೇಟಿಯಾಗಿರುವುದಕ್ಕೆ ದಾಖಲೆ ಇದೆ. ನಟಿಯ ಮೇಲೆ ದೌರ್ಜನ್ಯ ಎಸಗುವ ಸಂಚನ್ನು ಎರ್ನಾಕುಲಂನ ಹೋಟೆಲ್‌ನಲ್ಲಿ 2013ರಲ್ಲಿ ಹೆಣೆಯಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಸುನಿಯ ತಪ್ಪೊಪ್ಪಿಗೆ ಹೇಳಿಕೆ ಆಧಾರದಲ್ಲಿ ಇದನ್ನು ಪುಷ್ಟೀಕರಿಸುವ ದಾಖಲೆಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.

ನಟಿಯ ಮೇಲಿನ ಲೈಂಗಿಕ ದೌರ್ಜನ್ಯದ ವಿಡಿಯೊ ಚಿತ್ರೀಕರಣದ ಪ್ರತಿಯನ್ನು ನೀಡುವುದಕ್ಕಾಗಿ ಸುನಿ ಮತ್ತು ಆತನ ಸಹಚರ ವಿಗೀಶ್‌ ಅವರು  ಕಾವ್ಯಾ ನಡೆಸುತ್ತಿರುವ ಅಂಗಡಿಗೆ ಹೋಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆದಿದೆ.

ಎರಡು ದಿನ ಪೊಲೀಸ್‌ ಕಸ್ಟಡಿ: ಸೋಮವಾರ ಬಂಧಿಸಲಾದ ದಿಲೀಪ್‌ ಅವರನ್ನು ಶುಕ್ರವಾರದ ವರೆಗೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ. ಅವರು ಸಲ್ಲಿಸಿರುವ ಜಾಮೀನು ಅರ್ಜಿ ಕೂಡ ಅಂದೇ ವಿಚಾರಣೆಗೆ ಬರಲಿದೆ.

ವಿಚಾರಣೆಗಾಗಿ ದಿಲೀಪ್‌ ಅವರನ್ನು ಆಲುವಾ ಪೊಲೀಸ್‌ ಕ್ಲಬ್‌ಗೆ ಕರೆದೊಯ್ಯಲಾಗಿದೆ.

ಅಲ್ಲದೇ ಕೊಚ್ಚಿ ಮತ್ತು ಸುತ್ತಲಿನ ಪ್ರದೇಶಗಳಿಗೆ ಕರೆದೊಯ್ದು ಪೊಲೀಸರು ತನಿಖೆ ನಡೆಸಿದ್ದಾರೆ.

ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಂದರ್ಭದಲ್ಲಿ ಹೊರಗೆ ನೂರಾರು ಜನರು ಸೇರಿದ್ದರು. ಮಲಯಾಳದ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರಾಗಿರುವ ದಿಲೀಪ್‌ ಅವರಿಗೆ ಬಹುದೊಡ್ಡ ಅಭಿಮಾನಿ ವರ್ಗ ಇದೆ. ಆದರೆ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಜನರು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕಲಾವಿದರ ಸಂಘದಿಂದ ವಜಾ: ಬಂಧನದ ನಂತರ ದಿಲೀಪ್‌ ಅವರನ್ನು ಮಲಯಾಳ ಚಲನಚಿತ್ರ ಕಲಾವಿದರ ಸಂಘದ (ಅಮ್ಮ)  ಖಜಾಂಚಿ ಸ್ಥಾನ ಮತ್ತು ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡಲಾಗಿದೆ. ದೌರ್ಜನ್ಯಕ್ಕೆ ಒಳಗಾದ ನಟಿಗೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಸಂಘಟನೆ ಹೇಳಿದೆ.

ಕನ್ನಡ ಸೇರಿ ದಕ್ಷಿಣ ಭಾರತದ ಬಹುತೇಕ ಭಾಷೆಗಳಲ್ಲಿ ಅಭಿನಯಿಸಿರುವ ಪ್ರಸಿದ್ಧ ನಟಿಯನ್ನು ಅವರದ್ದೇ ಕಾರಿನಲ್ಲಿ ಫೆಬ್ರುವರಿ 17ರಂದು ಅಪಹರಿಸಲಾಗಿತ್ತು.   ಸುಮಾರು ಎರಡು ತಾಸು ಕಾರಿನಲ್ಲಿ ಸುತ್ತಾಡಿಸಿ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು. ಅದನ್ನು ಚಿತ್ರೀಕರಿಸಿಕೊಳ್ಳಲಾಗಿತ್ತು. ನಂತರ ನಟಿ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಓಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.