ADVERTISEMENT

ನಟ ದಿಲೀಪ್‌ಗೆ ಜಾಮೀನು

ಪಿಟಿಐ
Published 3 ಅಕ್ಟೋಬರ್ 2017, 19:30 IST
Last Updated 3 ಅಕ್ಟೋಬರ್ 2017, 19:30 IST
ನಟ ದಿಲೀಪ್‌ಗೆ ಜಾಮೀನು
ನಟ ದಿಲೀಪ್‌ಗೆ ಜಾಮೀನು   

ಕೊಚ್ಚಿ : ನಟಿ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಜುಲೈನಲ್ಲಿ ಬಂಧನಕ್ಕೊಳಗಾಗಿದ್ದ ಮಲಯಾಳಂ ನಟ ದಿಲೀಪ್‌ ಅವರಿಗೆ ಕೇರಳ ಹೈಕೋರ್ಟ್‌ ಮಂಗಳವಾರ ಜಾಮೀನು ನೀಡಿದೆ.

ಅವರು ಈ ಹಿಂದೆ ಸಲ್ಲಿಸಿದ್ದ ನಾಲ್ಕು ಜಾಮೀನು ಅರ್ಜಿಗಳನ್ನು ನ್ಯಾಯಾಲಯ ತಳ್ಳಿಹಾಕಿತ್ತು. ಪಾಸ್‌ಪೋರ್ಟ್‌ ವಾಪಸ್‌ ಮಾಡುವುದು, ಒಂದು ಲಕ್ಷ ಠೇವಣಿ ಮತ್ತು ಇದೇ ಮೊತ್ತಕ್ಕೆ ಇಬ್ಬರು ವ್ಯಕ್ತಿಗಳ ಭದ್ರತೆ ನೀಡುವುದು ಸೇರಿದಂತೆ ಕಠಿಣ ಷರತ್ತುಗಳನ್ನು ಮುಂದಿಟ್ಟು ನ್ಯಾಯಮೂರ್ತಿ ಸುನಿಲ್‌ ಥಾಮಸ್‌ ಜಾಮೀನು ನೀಡಿದರು.

ಸಾಕ್ಷ್ಯ ನಾಶ ಮಾಡಬಾರದು ಮತ್ತು ಅಗತ್ಯವಿದ್ದಾಗಲೆಲ್ಲ ತನಿಖಾಧಿಕಾರಿಗಳ ಎದುರು ಹಾಜರಾಗಬೇಕು ಎಂಬ ಷರತ್ತನ್ನೂ ವಿಧಿಸಲಾಗಿದೆ.

ADVERTISEMENT

‘ದಿಲೀಪ್‌ ವಿರುದ್ಧದ ತನಿಖೆ ಅಂತಿಮ ಹಂತದಲ್ಲಿದೆ. ಆದ್ದರಿಂದ ಅವರನ್ನು ವಶದಲ್ಲಿ ಇಟ್ಟುಕೊಳ್ಳುವ ಅಗತ್ಯವಿಲ್ಲ’ ಎಂದು ನ್ಯಾಯಮೂರ್ತಿ ಹೇಳಿದರು.

ಜುಲೈ 10ರಂದು ಬಂಧಿಸಲಾಗಿದ್ದ ದಿಲೀಪ್‌ ಅವರನ್ನು ಅಲುವಾ ಉಪ ಕಾರಾಗೃಹದಲ್ಲಿ 85 ದಿನಗಳಿಂದ ಇರಿಸಲಾಗಿತ್ತು.

’ಈ ಪ್ರಕರಣದಲ್ಲಿ ನಾನು ಸಂಪೂರ್ಣವಾಗಿ ಅಮಾಯಕ. ನನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ. ಚಿತ್ರರಂಗದಿಂದ ನನ್ನನ್ನು ಹೊರದೂಡಲು ಈ ಉದ್ದಿಮೆಯಲ್ಲಿರುವ ಪ್ರಬಲ ವ್ಯಕ್ತಿಗಳು ದೊಡ್ಡ ಮಟ್ಟದ ಸಂಚು ರೂಪಿಸಿದ್ದಾರೆ. ಪ್ರಮುಖ ಆರೋಪಿ ಪಲ್ಸರ್‌ ಸುನಿಯ ತಪ್ಪೊಪ್ಪಿಗೆಯ ಮೇರೆಗೆ ನನ್ನನ್ನು ಬಂಧಿಸಲಾಯಿತು. ಆದರೆ ಸುನಿಯನ್ನು ನಾನು ನೋಡಿಯೂ ಇಲ್ಲ, ಆತನ ಬಗ್ಗೆ ಕೇಳಿಯೂ ಇರಲಿಲ್ಲ ಮತ್ತು ಎಂದಿಗೂ ಆತನೊಂದಿಗೆ ಮಾತನ್ನೂ ಆಡಿಲ್ಲ. ಈ ತಪ್ಪೊಪ್ಪಿಗೆ ಸಹ ಉದ್ದೇಶಪೂರ್ವಕವಾದುದು’ ಎಂದು ದಿಲೀಪ್‌ ಜಾಮೀನು ಅರ್ಜಿಯಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.