ADVERTISEMENT

ನಡೆಯದ ಸಂಸತ್‌ ಕಲಾಪ ಚರ್ಚೆಯಾಗದ ‘ಅವಿಶ್ವಾಸ’

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 19:43 IST
Last Updated 19 ಮಾರ್ಚ್ 2018, 19:43 IST
ನಡೆಯದ ಸಂಸತ್‌ ಕಲಾಪ ಚರ್ಚೆಯಾಗದ ‘ಅವಿಶ್ವಾಸ’
ನಡೆಯದ ಸಂಸತ್‌ ಕಲಾಪ ಚರ್ಚೆಯಾಗದ ‘ಅವಿಶ್ವಾಸ’   

ನವದೆಹಲಿ: ಸಂಸತ್ತಿನ ಉಭಯ ಸದನಗಳ ಕಲಾಪವು ಸತತ 11ನೇ ದಿನವೂ ವಿರೋಧ ಪಕ್ಷಗಳ ಗದ್ದಲಕ್ಕೆ ಬಲಿಯಾಗಿದೆ. ಎನ್‌ಡಿಎ ಸರ್ಕಾರದ ವಿರುದ್ಧ ತೆಲುಗು ದೇಶಂ ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ ಮಂಡಿಸಿದ್ದ ಅವಿಶ್ವಾಸ ನಿರ್ಣಯ ಸೋಮವಾರವೂ ಚರ್ಚೆಗೆ ಬರಲಿಲ್ಲ.

ಲೋಕಸಭೆಯ ಕಲಾಪ ಆರಂಭವಾಗುತ್ತಿದ್ದಂತೆಯೇ ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಟಿಆರ್‌ಎಸ್‌, ಎಐಎಡಿಎಂಕೆ, ವೈಎಸ್‌ಆರ್‌ ಕಾಂಗ್ರೆಸ್‌ ಮತ್ತು ಆರ್‌ಜೆಡಿ ಸದಸ್ಯರು ಪ್ರತಿಭಟನೆ ಆರಂಭಿಸಿದರು. ಗದ್ದಲ ನಿಯಂತ್ರಣಕ್ಕೆ ಬಾರದಿದ್ದಾಗ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಿದರು.

ಇಂತಹ ಗದ್ದಲದ ನಡುವೆ ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕಲು ಸಾಧ್ಯವಿಲ್ಲ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.

ADVERTISEMENT

ಚರ್ಚೆಗೆ ಸರ್ಕಾರ ಸಿದ್ಧ:  ‘ಅವಿಶ್ವಾಸ ನಿರ್ಣಯ ಸೇರಿದಂತೆ ವಿರೋಧ ಪಕ್ಷಗಳು ಎತ್ತಿರುವ ಎಲ್ಲ ವಿಷಯಗಳ ಬಗ್ಗೆ ಚರ್ಚೆಗೆ ಸರ್ಕಾರ ಸಿದ್ಧವಿದೆ’ ಎಂದು ಗೃಹ ಸಚಿವ ರಾಜನಾಥ್ ಸಿಂಗ್‌ ಲೋಕಸಭೆಗೆ ತಿಳಿಸಿದರು.

ಪ್ರತಿಭಟನೆ ಕೈಬಿಟ್ಟು ಚರ್ಚೆಗೆ ಅವಕಾಶ ಮಾಡಿಕೊಡುವಂತೆ ಅವರು ಮನವಿ ಮಾಡಿದರು. ಸರ್ಕಾರದ ಮನವಿಗೆ ವಿರೋಧ ಪಕ್ಷಗಳು ಸ್ಪಂದಿಸಿದರೆ ಮಂಗಳವಾರ ಅವಿಶ್ವಾಸ ನಿರ್ಣಯ ಚರ್ಚೆಗೆ ಬರುವ ಸಾಧ್ಯತೆ ಇದೆ. 

ನಾಲ್ಕು ವರ್ಷದಲ್ಲಿ ಇದೇ ಮೊದಲ ಬಾರಿಗೆ ಅವಿಶ್ವಾಸ ನಿರ್ಣಯ ಮಂಡಿಸಲಾಗಿದ್ದು, ಇದರಿಂದ ಸರ್ಕಾರ ತೀವ್ರ ಮುಜುಗರಕ್ಕೀಡಾಗಿದೆ.

ಸದ್ಯ 539 ಸದಸ್ಯರಿರುವ ಲೋಕಸಭೆಯಲ್ಲಿ ಸರಳ ಬಹುಮತಕ್ಕಿಂತ (270) ಹೆಚ್ಚಿನ ಸದಸ್ಯರ ಬಲವನ್ನು (315) ಎನ್‌ಡಿಎ ಹೊಂದಿದೆ. ಹೀಗಾಗಿ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ.

* ಅವಿಶ್ವಾಸ ನಿರ್ಣಯವನ್ನು ಚರ್ಚೆಗೆ ಎತ್ತಿಕೊಳ್ಳುವುದು ನನ್ನ ಕರ್ತವ್ಯ. ಆದರೆ ಇಷ್ಟೊಂದು ಗದ್ದಲದ ನಡುವೆ ಅದು ಸಾಧ್ಯವೇ ಇಲ್ಲ

– ಸುಮಿತ್ರಾ ಮಹಾಜನ್‌, ಲೋಕಸಭೆ ಸ್ಪೀಕರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.