ADVERTISEMENT

ನಮ್ಮದು ಶಿವ ಭಕ್ತ ಕುಟುಂಬ, ನಾವು ಧರ್ಮದ ದಲ್ಲಾಳಿಗಳಲ್ಲ: ರಾಹುಲ್‌ ಗಾಂಧಿ

ಏಜೆನ್ಸೀಸ್
Published 1 ಡಿಸೆಂಬರ್ 2017, 6:52 IST
Last Updated 1 ಡಿಸೆಂಬರ್ 2017, 6:52 IST
ನಮ್ಮದು ಶಿವ ಭಕ್ತ ಕುಟುಂಬ, ನಾವು ಧರ್ಮದ ದಲ್ಲಾಳಿಗಳಲ್ಲ: ರಾಹುಲ್‌ ಗಾಂಧಿ
ನಮ್ಮದು ಶಿವ ಭಕ್ತ ಕುಟುಂಬ, ನಾವು ಧರ್ಮದ ದಲ್ಲಾಳಿಗಳಲ್ಲ: ರಾಹುಲ್‌ ಗಾಂಧಿ   

ಗುಜರಾತ್‌: ‘ನಮ್ಮದು ಶಿವ ಭಕ್ತ ಕುಟುಂಬ, ನಾವು ಧರ್ಮದ ದಲ್ಲಾಳಿಗಳಲ್ಲ’ ಎಂದು ಹೇಳುವ ಮೂಲಕ ಕಾಂಗ್ರೆಸ್‌ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ‘ಹಿಂದೂಯೇತರ’ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಗುಜರಾತ್‌ ವಿಧಾನಸಭಾ ಚುನಾವಣಾ ಪ್ರಚಾರ ವೇಳೆ ರಾಹುಲ್‌ ಗಾಂಧಿ ಎರಡು ದಿನಗಳ ಹಿಂದೆ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ‘ಹಿಂದೂಯೇತರ’ ಎಂದು ಬರೆದು ಪಕ್ಷದ ಮಾಧ್ಯಮ ಸಂಯೋಜಕ ಮನೋಜ್‌ ತ್ಯಾಗಿ ಎಡವಟ್ಟು ಮಾಡಿದ್ದರು. ಈ ಕುರಿತು ಬಿಜೆಪಿ ಟೀಕಿಸಿತ್ತು.

ಈ ಕುರಿತು ಗುರುವಾರ ಪ್ರತಿಕ್ರಿಯಿಸಿರುವ ರಾಹುಲ್‌ ಗಾಂಧಿ ‘ನಮ್ಮದು ಶಿವಭಕ್ತ ಕುಟುಂಬ, ನಾವು ಧರ್ಮದ ದಲ್ಲಾಳಿಗಳಲ್ಲ’ ಎಂದು ಹೇಳಿದ್ದಾರೆ.

ADVERTISEMENT

‘ನನ್ನ ಅಜ್ಜಿ ಹಾಗೂ ಕುಟುಂಬ ಸದಸ್ಯರು ಶಿವಭಕ್ತರಾಗಿದ್ದಾರೆ. ಆದರೆ, ನಾವು ಎಲ್ಲೂ ಹೇಳಿಕೊಳ್ಳುವುದಿಲ್ಲ. ಧರ್ಮ ಎನ್ನುವುದು ನಂಬಿಕೆ ಹಾಗೂ ವೈಯಕ್ತಿಕ ವಿಚಾರ. ಇದರ ಬಗ್ಗೆ ಇತರರಿಂದ ಪ್ರಮಾಣಪತ್ರ ಪಡೆಯುವ ಅಗತ್ಯ ಇಲ್ಲ. ಜತೆಗೆ, ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸೂಕ್ತವಲ್ಲ’ ಎಂದಿದ್ದಾರೆ.

ಏನಿದು ಘಟನೆ: ಸೌರಾಷ್ಟ್ರ ಪ್ರದೇಶದಲ್ಲಿ ಎರಡು ದಿನಗಳ ಚುನಾವಣಾ ಪ್ರಚಾರ ಆರಂಭಿಸುವ ಮೊದಲು ರಾಹುಲ್‌ ಗಾಂಧಿ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದ್ದರು. ಜತೆಗೆ ಕಾಂಗ್ರೆಸ್‌ನ ಹಿರಿಯ ಮುಖಂಡ ಅಹ್ಮದ್‌ ಪಟೇಲ್‌ ಇದ್ದರು. 

ಇದೇ ವೇಳೆ ಪಕ್ಷದ ಮಾಧ್ಯಮ ಸಂಯೋಜಕ ತ್ಯಾಗಿ ಮೊದಲು ಅಹ್ಮದ್‌ ‌ಹೆಸರು ಬರೆದು ನಂತರ ರಾಹುಲ್‌ ಹೆಸರು ಬರೆದರು. ಇಬ್ಬರೂ ‘ಹಿಂದೂಯೇತರರು’ ಎಂದು ನಮೂದಿಸಿದರು ಎಂದು ವರದಿಯಾಗಿತ್ತು.

ಈ ಎಡವಟ್ಟನ್ನು ತನ್ನ ಪ್ರಯೋಜನಕ್ಕೆ ಬಳಸಿಕೊಳ್ಳಲು ಬಿಜೆಪಿ ಪ್ರಯತ್ನಿಸಿದ್ದು, ‘ರಾಹುಲ್‌ ಹಿಂದೂ ಎಂದು ಕಾಂಗ್ರೆಸ್‌ ಬಿಂಬಿಸುತ್ತಾ ಬಂದಿದೆ. ಆದರೆ ವಾಸ್ತವದಲ್ಲಿ ಅವರು ಹಿಂದೂ ಅಲ್ಲ’ ಎಂದು‍ ಬಿಜೆಪಿ ಹೇಳಿದೆ. ಗುಜರಾತಿನ ಇಪ್ಪತ್ತಕ್ಕೂ ಹೆಚ್ಚು ದೇವಾಲಯಗಳಿಗೆ ರಾಹುಲ್‌ ಅಕ್ಟೋಬರ್‌ ಬಳಿಕ ಭೇಟಿ ನೀಡಿದ್ದಾರೆ. ಹಿಂದೂಯೇತರರು ಸೋಮನಾಥ ದೇವಾಲಯಕ್ಕೆ ಭೇಟಿ ನೀಡಬೇಕಿದ್ದರೆ ದೇವಾಲಯದ ಆಡಳಿತ ಮಂಡಳಿಯ ಅನುಮತಿ ಪಡೆದುಕೊಳ್ಳುವುದು ಕಡ್ಡಾಯ ಎಂದು ಬಿಜೆಪಿ ಹೇಳಿತ್ತು. 

ಈ ಎಡವಟ್ಟಿನ ಬಗ್ಗೆ ತ್ಯಾಗಿ ಬಳಿಕ ಸ್ಪಷ್ಟನೆ ನೀಡಿದ್ದರು. ಮಾಧ್ಯಮ ಪ್ರತಿನಿಧಿಗಳನ್ನು ದೇವಾಲಯದ ಒಳಕ್ಕೆ ಕರೆದುಕೊಂಡು ಹೋಗುವುದಕ್ಕಾಗಿ ತಮ್ಮ ಹೆಸರನ್ನು ಮಾತ್ರ ನೋಂದಣಿ ಪುಸ್ತಕದಲ್ಲಿ ಬರೆದಿರುವುದಾಗಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.