ADVERTISEMENT

ನರೇಂದ್ರ ಮೋದಿ ಯುಗಾರಂಭ

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 6:52 IST
Last Updated 10 ಜೂನ್ 2013, 6:52 IST

ಪಣಜಿ (ಗೋವಾ): ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರ ವಿರೋಧ ಕಡೆಗಣಿಸಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪಕ್ಷದ `ಚುನಾವಣಾ ಪ್ರಚಾರ ಸಮಿತಿ' ಅಧ್ಯಕ್ಷರಾಗಿ ಭಾನುವಾರ ನೇಮಿಸಲಾಯಿತು. ಇದರಿಂದಾಗಿ ಪಕ್ಷದ ನಾಯಕತ್ವಕ್ಕಾಗಿ `ಗುರು- ಶಿಷ್ಯ'ರ ಮಧ್ಯೆ ಕಳೆದ ಕೆಲವು ತಿಂಗಳಿಂದ ನಡೆದಿದ್ದ `ಹೋರಾಟ' ಕೊನೆಗೊಂಡಿತು.

ಗೋವಾ ರಾಜಧಾನಿ ಪಣಜಿಯಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ `ರಾಷ್ಟ್ರೀಯ ಕಾರ್ಯಕಾರಿಣಿ' ಕೊನೆಯಲ್ಲಿ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್, ಚುನಾವಣಾ ಸಮಿತಿ ಅಧ್ಯಕ್ಷರಾಗಿ ಮೋದಿ ಅವರನ್ನು ನೇಮಿಸುವ ನಿರ್ಣಯ ಮಂಡಿಸಿದರು. ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಮತ್ತು ಕೇಂದ್ರದ ಮಾಜಿ ಸಚಿವ ರಾಜಗೋಪಾಲ್ ಬೆಂಬಲಿಸಿದರು.

ರಾಜನಾಥ್ ಸಿಂಗ್ ವೇದಿಕೆ ಮೇಲೆ ಮೋದಿ ಅವರನ್ನು ಬರಮಾಡಿಕೊಂಡು ಪಕ್ಷದ ನಿರ್ಧಾರ ಪ್ರಕಟಿಸಿದರು. ಪಕ್ಷದ ಕಾರ್ಯಕರ್ತರು ಹಾಗೂ ಕೆಲವು ಮುಖಂಡರು ಬಹು ದಿನದಿಂದ ಕಾತರದಿಂದ ನಿರೀಕ್ಷಿಸಿದ್ದ ಪ್ರಕಟಣೆ ಹೊರ ಬೀಳುತ್ತಿದ್ದಂತೆ ಜೈಕಾರದ ಘೋಷಣೆಗಳು ಮೊಳಗಿದವು. ಪಕ್ಷದ ಮಾಜಿ ಅಧ್ಯಕ್ಷರು, ಬಿಜೆಪಿ ರಾಜ್ಯಗಳ ಮುಖ್ಯಮಂತ್ರಿಗಳು ವೇದಿಕೆಗೆ ಬಂದು ಮೋದಿ ಅವರನ್ನು ಅಭಿನಂದಿಸಿದರು.

ಪ್ರಚಾರದ ನೇತೃತ್ವ: `ಮಧ್ಯಪ್ರದೇಶ, ಛತ್ತೀಸಗಡ, ದೆಹಲಿ, ರಾಜಸ್ತಾನ ವಿಧಾನಸಭೆ ಚುನಾವಣೆ ಹಾಗೂ ಮುಂದಿನ ವರ್ಷದ ಲೋಕಸಭೆ ಚುನಾವಣೆ ಪ್ರಚಾರದ ನೇತೃತ್ವವನ್ನು ಮೋದಿ ಅವರು ವಹಿಸಲಿದ್ದಾರೆ. ಇವರ ನೇತೃತ್ವದಲ್ಲಿ ಪಕ್ಷ ಯಶಸ್ಸು ಪಡೆಯಲಿದೆ' ಎಂದು ರಾಜನಾಥ್‌ಸಿಂಗ್ ವಿಶ್ಲೇಷಿಸಿದರು.

ಕಾರ್ಯಕರ್ತರ ಸಂಭ್ರಮ: ಅನಂತರ ಲೋಕಸಭೆ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಹಾಗೂ ಮನೋಹರ್ ಪರಿಕ್ಕರ್ ಅವರೊಂದಿಗೆ ಕಾರ್ಯಕಾರಿಣಿಯಿಂದ ಹೊರಬಂದ ರಾಜನಾಥ್ ಸಿಂಗ್ ಮಾಧ್ಯಮ ಪ್ರತಿನಿಧಿಗಳ ಮುಂದೆ ಮೋದಿ ನೇಮಕ ಪ್ರಕಟಿಸಿದರು. ಈ ಸಮಯದಲ್ಲಿ ಅನೇಕ ಹಿರಿಯ ನಾಯಕರು ಹಾಜರಿದ್ದರು. ಕಾರ್ಯಕಾರಿಣಿ ನಡೆಯುತ್ತಿದ್ದ ಹೋಟೆಲ್ ಆವರಣದಲ್ಲಿ ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.

ಸರ್ವಸಮ್ಮತ ನೇಮಕ: ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮೋದಿ ಅವರನ್ನು ಸರ್ವಸಮ್ಮತವಾಗಿ ನೇಮಕ ಮಾಡಲಾಗಿದೆ. ರಾಜನಾಥ್‌ಸಿಂಗ್ ಎರಡು ದಿನಗಳಿಂದ ಎಲ್ಲ ಮುಖಂಡರ ಜತೆ ಸಮಾಲೋಚಿಸಿದ್ದಾರೆ. ಅಡ್ವಾಣಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಮೋದಿ ಅವರ ನೇಮಕಕ್ಕೆ ಎಲ್ಲರ ಸಹಮತವಿದೆ. ಅಡ್ವಾಣಿ ಅವರ ಒಪ್ಪಿಗೆ ಇದೆ. ಕಾರ್ಯಕಾರಿಣಿ ತೀರ್ಮಾನವನ್ನು ಮಾಜಿ ಉಪ ಪ್ರಧಾನಿಗೆ ತಿಳಿಸಲಾಗಿದೆ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

`ನಮ್ಮದು ಪ್ರಜಾಸತ್ತಾತ್ಮಕ ಪಕ್ಷ. ಎಲ್ಲರ ಒಪ್ಪಿಗೆಯೊಂದಿಗೆ ನಿರ್ಧಾರಗಳನ್ನು ಮಾಡಲಾಗುತ್ತದೆ. ಪಕ್ಷ ಕೈಗೊಳ್ಳುವ ನಿರ್ಣಯಕ್ಕೆ ಯಾವುದೇ ನಾಯಕರ ಅಪಸ್ವರವಿದ್ದರೂ ತೀರ್ಮಾನ ಮುಂದೂಡಲಾಗುತ್ತದೆ. ಇದು ನಾವು ಪಾಲಿಸಿಕೊಂಡು ಬಂದಿರುವ ಸಂಪ್ರದಾಯ. ಹೊಸ ಪ್ರಚಾರ ಸಮಿತಿ ಅಧ್ಯಕ್ಷರು ದೆಹಲಿಗೆ ಹೋಗಿ ಅಡ್ವಾಣಿ ಅವರನ್ನು ಕಂಡು ಅವರ ಆಶೀರ್ವಾದ ಪಡೆಯಲಿದ್ದಾರೆ. ಬಿಜೆಪಿ ಅಧ್ಯಕ್ಷರು ಮೋದಿ ಜತೆ ಹೋಗಲಿದ್ದಾರೆ. ಆದರೆ, ಯಾವಾಗ ಭೇಟಿ ಮಾಡಲಿದ್ದಾರೆ ಎನ್ನುವುದು ಗೊತ್ತಿಲ್ಲ' ಎಂದು ಮೂಲಗಳು ವಿವರಿಸಿವೆ.

ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮೋದಿ ಅವರನ್ನು ನೇಮಕ ಮಾಡುವ ಕುರಿತು ಭಾನುವಾರ ಅಂತಿಮ ಕ್ಷಣದವರೆಗೂ ಅನುಮಾನ ತಲೆದೋರಿತ್ತು. ಅಡ್ವಾಣಿ ಮತ್ತು ಮೋದಿ ನಡುವಿನ `ಜಟಾಪಟಿ' ಕೆಲವು ದಿನಗಳಿಂದ ತೀವ್ರಗೊಂಡಿದ್ದು ಸಂಶಯಕ್ಕೆ ಕಾರಣವಾಗಿತ್ತು. ಅಡ್ವಾಣಿ ಪಣಜಿಗೆ ಬರದೆ ದೆಹಲಿಯಲ್ಲೇ ಉಳಿದಿದ್ದರಿಂದ ಹಿರಿಯ ನಾಯಕರು ಗೊಂದಲಕ್ಕೆ ಸಿಕ್ಕಿದ್ದರು. ಆದರೆ, ಸಂಘ- ಪರಿವಾರದ ನಾಯಕರು ಗುಜರಾತ್ ಮುಖ್ಯಮಂತ್ರಿ ಬೆಂಬಲಕ್ಕೆ ಗಟ್ಟಿಯಾಗಿ ನಿಂತಿದ್ದರಿಂದ ತೀರ್ಮಾನ ಸರಳವಾಯಿತು.

ನೇಮಕ ಮುಂದೂಡಲು ಸುಷ್ಮಾ ಒತ್ತಾಯ: ಅಡ್ವಾಣಿ ಅವರಿಗೆ ಆತ್ಮೀಯರಾದ ಸುಷ್ಮಾ ಸ್ವರಾಜ್ ಪ್ರಚಾರ ಸಮಿತಿ ನೇಮಕ ಮುಂದಕ್ಕೆ ಹಾಕುವಂತೆ ಶುಕ್ರವಾರ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಒತ್ತಾಯ ಮಾಡಿದ್ದರು. ಹಿರಿಯ ನಾಯಕನನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪ ಮಾಡಿದ್ದರು. ಎಲ್ಲ ವಿರೋಧ, ಆಕ್ಷೇಪ ಹಾಗೂ ಆರೋಪಗಳನ್ನು ಬದಿಗೊತ್ತಿ ಮೋದಿ ಅವರಿಗೆ ಪ್ರಚಾರ ಸಮಿತಿ ನಾಯಕತ್ವ ವಹಿಸಲಾಯಿತು.

ಗೋವಾ ಕಾರ್ಯಕಾರಿಣಿಯಲ್ಲಿ ಮೋದಿ ಅವರೇ ಕೇಂದ್ರ ಬಿಂದುವಾಗಿದ್ದರು. ಗುಜರಾತ್ ಮುಖ್ಯಮಂತ್ರಿಗೆ ಪ್ರಚಾರ ಸಮಿತಿ ನಾಯಕತ್ವ ಸಿಗುವುದೇ ಎಂಬ ಒಂದೇ ಒಂದು ಪ್ರಶ್ನೆ ಎಲ್ಲ ಕಡೆಗಳಿಂದಲೂ ಕೇಳಿಬರುತಿತ್ತು. ಬಿಜೆಪಿ ನಾಯಕತ್ವ ಕೊನೆ ಗಳಿಗೆವರೆಗೂ ಗುಟ್ಟು ಬಿಡದೆ ಎಲ್ಲವನ್ನು ಗೌಪ್ಯವಾಗಿಟ್ಟು ಎಲ್ಲರನ್ನು ತುದಿಗಾಲ ಮೇಲೆ ನಿಲ್ಲಿಸಿತ್ತು. ಮೋದಿ ಅವರ ನೇಮಕವನ್ನು ರಾಜನಾಥ್‌ಸಿಂಗ್ ಅಧಿಕೃತವಾಗಿ ಪ್ರಕಟಿಸುವುದರೊಂದಿಗೆ ಪಕ್ಷದ ಮುಖಂಡರು- ಕಾರ್ಯಕರ್ತರ ನಿರೀಕ್ಷೆಗಳಿಗೆ ಸ್ಪಂದಿಸಿದರು.

ಅಡ್ವಾಣಿ ಆಶೀರ್ವಾದ ಪಡೆದ ಮೋದಿ
ನವದೆಹಲಿ (ಪಿಟಿಐ): ಚುನಾವಣಾ ಪ್ರಚಾರ ಸಮಿತಿ ನೇತೃತ್ವ ವಹಿಸಿಕೊಂಡ ಬಳಿಕ ಪಕ್ಷದ ಹಿರಿಯ ನಾಯಕ ಅಡ್ವಾಣಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವುದಾಗಿ ಶಪಥ ಮಾಡಿದರು.

` ಅಡ್ವಾಣಿಜಿ ಜತೆ ಮಾತನಾಡಿದೆ. ಅವರು ನನ್ನನ್ನು ಆಶೀರ್ವದಿಸಿದರು. ಅವರ ಆಶೀರ್ವಾದ ಪಡೆಯುವುದಕ್ಕೆ ನಿಜಕ್ಕೂ ಪುಣ್ಯ ಮಾಡಿದ್ದೆ. ಹಿರಿಯ ನಾಯಕರು ನನ್ನಲ್ಲಿ ನಂಬಿಕೆ ಇಟ್ಟಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸದೆ ಬಿಡುವುದಿಲ್ಲ. ನಿಮ್ಮ ಬೆಂಬಲ ಹಾಗೂ ಆಶೀರ್ವಾದಕ್ಕೆ ಕೃತಜ್ಞತೆಗಳು' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.


`ಹೊಟ್ಟೆನೋವು ಕಾರಣ'
ಜೈಪುರ (ಪಿಟಿಐ): ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಗೆ ಗೈರು ಹಾಜರಾದ ಕುರಿತು ಮೊದಲ ಬಾರಿಗೆ ಮೌನ ಮುರಿದಿರುವ ಪಕ್ಷದ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ, ಹೊಟ್ಟೆನೋವಿನಿಂದಾಗಿ ತಾವು ಗೈರುಹಾಜರಾಗಿದ್ದಾಗಿ ಸ್ಪಷ್ಟಪಡಿಸಿದ್ದಾರೆ. `ಮೂರು ದಿನಗಳಿಂದ ನಾನು ಹೊಟ್ಟೆನೋವಿನಿಂದ ಬಳಲುತ್ತಿದ್ದೇನೆ. ಹೀಗಾಗಿಯೇ ಬಹು ಮಹತ್ವದ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ನನಗೆ ಸಾಧ್ಯವಾಗಲಿಲ್ಲ' ಎಂದು ಅಡ್ವಾಣಿ ತಿಳಿಸಿದ್ದಾರೆ.

ADVERTISEMENT


ವರ್ಚಸ್ಸು ಕೆಲಸ ಮಾಡಲಿದೆ
ಮೋದಿ ವರ್ಚಸ್ಸು ಮುಂದಿನ ಚುನಾವಣೆಯಲ್ಲಿ ಬಹುದೊಡ್ಡ ಕೆಲಸ ಮಾಡಲಿದೆ. ಕರ್ನಾಟಕವೂ ಸೇರಿ ಎಲ್ಲ ಕಡೆ ಪಕ್ಷದ ಕಾರ್ಯಕರ್ತರಲ್ಲಿ ಹೆಚ್ಚಿನ ಉತ್ಸಾಹ ಮೂಡಿಸಿದೆ.   
- ಪ್ರಹ್ಲಾದ ಜೋಶಿ, ಅಧ್ಯಕ್ಷರು,
ಬಿಜೆಪಿ ರಾಜ್ಯ ಘಟಕ
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.