ADVERTISEMENT

ನಾಲ್ವರು ಶಂಕಿತ ಮುಜಾಹಿದೀನ್ ಭಯೋತ್ಪಾದಕರ ಬಂಧನ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2014, 10:00 IST
Last Updated 23 ಮಾರ್ಚ್ 2014, 10:00 IST
ನಾಲ್ಕು ಶಂಕಿತ ಇಂಡಿಯನ್ ಮುಜಾಹಿದ್ದೀನ್ ಉಗ್ರರಲ್ಲಿ ಒಬ್ಬನನ್ನು ದೆಹಲಿ ಪೊಲೀಸ್  ನ ವಿಶೇಷ ಘಟಕದ ಅಧಿಕಾರಿಗಳು ಜೋಧಪುರ್ ನಲ್ಲಿ ಭಾನುವಾರ  ಬಂಧಿಸಿದರು –ಪಿಟಿಐ ಚಿತ್ರ
ನಾಲ್ಕು ಶಂಕಿತ ಇಂಡಿಯನ್ ಮುಜಾಹಿದ್ದೀನ್ ಉಗ್ರರಲ್ಲಿ ಒಬ್ಬನನ್ನು ದೆಹಲಿ ಪೊಲೀಸ್ ನ ವಿಶೇಷ ಘಟಕದ ಅಧಿಕಾರಿಗಳು ಜೋಧಪುರ್ ನಲ್ಲಿ ಭಾನುವಾರ ಬಂಧಿಸಿದರು –ಪಿಟಿಐ ಚಿತ್ರ   

ನವದೆಹಲಿ(ಪಿಟಿಐ): ಓರ್ವ ಪಾಕಿಸ್ತಾನಿ ಸೇರಿದಂತೆ ನಾಲ್ವರು ಶಂಕಿತ ಭಯೋತ್ಪಾದಕರನ್ನು ದೆಹಲಿ ಪೊಲೀಸ್ ವಿಶೇಷ ದಳವು ಭಾನುವಾರ ರಾಜಸ್ತಾನದಲ್ಲಿ ಬಂಧಿಸಿದೆ. ಬಂಧಿತರು ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಗೆ (ಐಎಂ) ಸೇರಿದವರು ಎನ್ನಲಾಗಿದ್ದು, ವಿವಿಧ ಬಾಂಬ್ ಸ್ಪೋಟಗಳಿಗೆ ಸಂಬಂಧಿಸಿದಂತೆ ಬೇಕಾಗಿದ್ದವರು ಎಂದು ಪೊಲೀಸರು ತಿಳಿಸಿದ್ದಾರೆ.

‘‘ನಾಲ್ವರನ್ನು ಶಂಕಿತ ಭಯೋತ್ಪಾದಕರನ್ನು ಬಂಧಿಸಲಾಗಿದ್ದು ಅವರಲ್ಲಿ ಒಬ್ಬನನ್ನು ವಕಾಸ್ ಎಂಬುದಾಗಿ ಗುರುತಿಸಲಾಗಿದೆ’’ ಎಂದು ವಿಶೇಷ ಆಯುಕ್ತ (ವಿಶೇಷ ದಳ) ಎಸ್ ಎಂ ಶ್ರೀವಾತ್ಸವ ಪತ್ರಕರ್ತರಿಗೆ ತಿಳಿಸಿದರು.

2011 ಜುಲೈ 12ರಂದು ಮುಂಬೈನ ಝವೇರಿ ಬಜಾರ್ ಸರಣಿ ಸ್ಪೋಟ ಸೇರಿದಂತೆ ಹಲವು ಸ್ಪೋಟಗಳಿಗೆ  ಸಂಬಂಧಿಸಿದಂತೆ ಪಾಕಿಸ್ತಾನದ ವಕಾಸ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಬಂಧಿತರು ರಾಜಸ್ತಾನದ ಜೋಧಪುರದಿಂದ ಕಾರ್ಯಾಚರಿಸುತ್ತಿದ್ದು  ಮುಂಬರುವ ಲೋಕಸಭಾ ಚುನಾವಣಾ ವೇಳೆ ವಿಧ್ವಂಸಕ ಕೃತ್ಯಗಳನ್ನು ಎಸಗಲು ಯೋಜನೆ ರೂಪಿಸುತ್ತಿದ್ದರು ಎಂದು  ಮೂಲಗಳು ತಿಳಿಸಿವೆ.

ADVERTISEMENT

ಅಪರಾಧ ಕೃತ್ಯಕ್ಕೆ ಬಳಸಲಾಗುವ ಸಾಧನಗಳನ್ನು ಭಾರಿ ಪ್ರಮಾಣದಲ್ಲಿ ಬಂಧಿತರಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಶಂಕಿಸಿ  ಅವರನ್ನು ಬಂಧಿಸಲಾಗಿದೆ ಎಂದು ಎಸ್ ಪಿ, ಎಟಿಎಸ್ ರವಿ ತಿಳಿಸಿದರು. 

ಮೂವರು ಶಂಕಿತರನ್ನು ಜೈಪುರದ ಸಂಗನೇರ್ ಹಾಗೂ ಜೋತ್ವಾರ ಮತ್ತು ಒಬ್ಬನನ್ನು  ಜೋಧಪುರದಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ. ನಾಲ್ವರನ್ನೂ ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ರಾಜಸ್ತಾನದ ಡಿಜಿಪಿ ಓಮೇಂದ್ರ ಭಾರದ್ವಾಜ್ ತಿಳಿಸಿದರು.

ಇದೊಂದು ದೊಡ್ಡ ಗೆಲುವು (ಮುಂಬೈ ವರದಿ): ಶಂಕಿತ ಮುಜಾಹಿದ್ದೀನ್ ಸಂಘಟನೆಯ ನಾಲ್ವರು ಉಗ್ರರ ಬಂಧನ ‘ದೊಡ್ಡ ಗೆಲುವು’ ಎಂದು  ಬಣ್ಣಿಸಿರುವ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್‌ ಶಿಂಧೆ, ಇತರ ಭಯೋತ್ಪಾದಕರನ್ನು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಇದರಿಂದ  ಮತ್ತಷ್ಟು ಸಂಪರ್ಕಗಳನ್ನು ಅರಿಯಲು ಸಹಾಯವಾಗಲಿದೆ ಎಂದಿದ್ದಾರೆ.

‘ಪಾಕಿಸ್ತಾನಿ ಉಗ್ರನಾಗಿರುವ ವಕಾಸ್‌, ದೇಶದಲ್ಲಿ ನಡೆದ ಹಲವು ಭಯೋತ್ಪಾದಕ ದಾಳಿ ಪ್ರಕರಣಗಳಲ್ಲಿ ಬೇಕಾಗಿದ್ದ. ಕಳೆದ 8–10  ದಿನಗಳಿಂದ ನಾವು  ಅವನನ್ನು ಹಿಂಬಾಲಿಸುತ್ತಿದ್ದೆವು’ ಎಂದು ಅವರು ಇಲ್ಲಿ ನುಡಿದರು.

‘ಸೂಕ್ತ ಸಮಯದಲ್ಲಿ ಇದನ್ನು ಬಹಿರಂಗ ಪಡಿಸುವುದಾಗಿ ಹೇಳಿದ್ದೆವು. ಈ ಬಂಧನ ತುಂಬಾ ಮಹತ್ವದ್ದಾಗಿದೆ. ಮತ್ತಷ್ಟು ಸಂಪರ್ಕಗಳ ಬಗ್ಗೆ ಮಾಹಿತಿ ಒದಗಿಸುವಲ್ಲಿ ಅವನ (ವಕಾಸ್‌) ಬಂಧನ ನಮಗೆ ಸಹಾಯವಾಗಲಿದೆ. ಇನ್ನು 23 ಭಯೋತ್ಪಾದಕರನ್ನು ವಶಕ್ಕೆ ಪಡೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ’ ಎಂದೂ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.