ADVERTISEMENT

ನಾಳೆಯಿಂದ ಬಜೆಟ್ ಅಧಿವೇಶನ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2012, 19:30 IST
Last Updated 22 ಏಪ್ರಿಲ್ 2012, 19:30 IST

 ನವದೆಹಲಿ (ಐಎಎನ್‌ಎಸ್):  ಮಂಗಳವಾರದಿಂದ ಪುನರಾರಂಭ ವಾಗಲಿರುವ ಬಜೆಟ್ ಅಧಿವೇಶನದಲ್ಲಿ ನಿಯಂತ್ರಣಕ್ಕೆ ಬಾರದ ಹಣದುಬ್ಬರ, ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ನಿಗ್ರಹ ಘಟಕ ಸ್ಥಾಪನೆಯ ಪ್ರಸ್ತಾವ ಇವೇ ಮೊದಲಾದ ವಿಚಾರಗಳನ್ನು ಪ್ರತಿಪಕ್ಷಗಳು ಪ್ರಬಲ ಅಸ್ತ್ರಗಳನ್ನಾಗಿ ಬಳಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ.

2012-13ನೇ ಸಾಲಿನ ಬಜೆಟ್ ಪ್ರಸ್ತಾವಗಳಿಗೆ ಸಂಸತ್ತಿನ ಅಂಗೀಕಾರ ಪಡೆಯುವ ಸಂದರ್ಭದಲ್ಲಿ ವಿರೋಧ ಪಕ್ಷಗಳು ಸರ್ಕಾರವನ್ನು ಹಣಿಯಲು ಸಜ್ಜಾಗಿವೆ.

 ನೆನೆಗುದಿಗೆ ಬಿದ್ದಿರುವ ಲೋಕಪಾಲ ಮಸೂದೆ ಸೇರಿದಂತೆ ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳು ಸಿದ್ಧತೆ ನಡೆಸುತ್ತಿವೆ. ಹಣದುಬ್ಬರವನ್ನು ನಿಯಂತ್ರಿಸಲು ವಿಫಲಾಗಿರುವ ಸರ್ಕಾರದ ತರಾಟೆಗೆ ಎಡಪಕ್ಷಗಳು ತುದಿಗಾಲಲ್ಲಿ ನಿಂತಿರುವುದರಿಂದ ಸದನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ಭಾರಿ ಜಟಾಪಟಿ ನಡೆಯುವ ನಿರೀಕ್ಷೆ ಇದೆ.

ಲೋಕಪಾಲ ಮಸೂದೆಗೆ ಸೂಚಿಸಿರುವ ತಿದ್ದುಪಡಿಯನ್ನು ಸೇರಿಸಿಕೊಳ್ಳಬೇಕು ಎಂದು ಬಿಜೆಪಿ ಹಟ ಹಿಡಿಯಲಿರುವುದರಿಂದ ಕಾವೇರಿದ ಚರ್ಚೆ ನಡೆಯಬಹುದು ಎಂ ಬ ನಿರೀಕ್ಷೆ ಇದೆ. ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಬೆಲೆ ಏರಿಕೆ ವಿಚಾರವನ್ನು ಪ್ರಸ್ತಾಪಿಸಿ ವಿವರವಾದ ಚರ್ಚೆಗೆ ಒತ್ತಾಯಿಸಲಿದ್ದಾರೆ.

ರಾಜ್ಯಗಳಲ್ಲಿ ಭಯೋತ್ಪಾದಕ ನಿಗ್ರಹ ಘಟಕ ಸ್ಥಾಪನೆ ಮೂಲಕ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿರುವ ವಿಚಾರ ಮತ್ತು ಹತ್ತಿ ರಫ್ತು ನಿಷೇಧದಂತಹ ಕ್ರಮದ ಬಗ್ಗೆ ಕಾಂಗ್ರೆಸ್‌ನ ಮಿತ್ರ ಪಕ್ಷಗಳೂ ತವ್ಮ ಜತೆ  ಧ್ವನಿಗೂಡಿಸಬಹುದು ಎಂಬುದು ಬಿಜೆಪಿ ಮುಖಂಡರ ನಿರೀಕ್ಷೆಯಾಗಿದೆ.

ಲೋಕಪಾಲ ಮಸೂದೆಯ ಬಗ್ಗೆ ಒಮ್ಮತ ಮೂಡಿಸುವ ಉದ್ದೇಶದಿಂದ ಸರ್ಕಾರವು 23ರಂದು ಸರ್ವ ಪಕ್ಷಗಳ ಸಭೆಯನ್ನು ಕರೆದಿದೆಯಾದರೂ ಈ ಸಭೆಯಲ್ಲಿ ಒಮ್ಮತ ಮೂಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.