ADVERTISEMENT

ನಿತೀಶ್‌, ಲಾಲು ಆಯ್ಕೆ: ಕಾಂಗ್ರೆಸ್‌ ಡೋಲಾಯಮಾನ

ರಾಜ್ಯ ವಾರ್ತಾಪತ್ರ ಬಿಹಾರ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2013, 19:30 IST
Last Updated 22 ಡಿಸೆಂಬರ್ 2013, 19:30 IST

ಪಟ್ನಾ: ಆರು ತಿಂಗಳ ಹಿಂದೆ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಬಿಹಾರದ ನಳಂದಕ್ಕೆ ಅಧಿ-­ಕೃತ ಭೇಟಿ ನೀಡಿದ್ದರು. ಹಿಂದಿರುಗುವಾಗ  ತಾಂತ್ರಿಕ ತೊಂದರೆಯಿಂದಾಗಿ ಹೆಲಿಕಾಪ್ಟರ್‌ ಪ್ರಯಾಣಕ್ಕೆ ಲಭ್ಯವಾಗಲಿಲ್ಲ. ಅದೇ ಸಭೆಯಲ್ಲಿ ಭಾಗವಹಿಸಿದ್ದ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಜತೆ ಚಿದಂಬರಂ ಕಾರಿನಲ್ಲಿ ಪ್ರಯಾಣಿಸಬೇಕಾಯಿತು.

ನೂರು ಕಿ.ಮೀ.ಗಳ, ಎರಡು ತಾಸುಗಳ ಈ ಪ್ರಯಾಣ ಇಬ್ಬರು ನಾಯಕರ ನಡುವೆ ಮುಕ್ತ ಮಾತುಕತೆಗೆ ಕಾರಣವಾಯಿತು. ಈ ಚರ್ಚೆಯೇ ಕಾಂಗ್ರೆಸ್‌ ಮತ್ತು ಜೆಡಿಯು ಮೈತ್ರಿಯ ಬೀಜವನ್ನೂ ಬಿತ್ತಿತು ಎಂಬ ನಂಬಿಕೆ ರಾಜಕೀಯ ವಲಯದಲ್ಲಿದೆ. ಮೇ 2013ರಲ್ಲಿ ಈ ಘಟನೆ ನಡೆದಾಗ ಬಿಹಾರ­ದಲ್ಲಿ ಜೆಡಿಯು ಮತ್ತು ಬಿಜೆಪಿಯ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿತ್ತು.

ಆನಂತರ ನಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ ಬಿಜೆಪಿಯೊಂದಿಗಿನ ಸಂಬಂಧವನ್ನು ನಿತೀಶ್‌ ಕಡಿದು­ಕೊಂಡರು. ಜನಪ್ರಿಯತೆಯ ತುತ್ತತುದಿ­ಯಲ್ಲಿದ್ದ ನಿತೀಶ್‌ ಕಾಂಗ್ರೆಸ್‌ಗೆ ಹತ್ತಿರವಾಗತೊಡಗಿದ್ದರು. ಆದರೆ ಅದಾಗಿ ಏಳು ತಿಂಗಳ ನಂತರ ಈ ಎರಡು ಪಕ್ಷಗಳ ನಡುವಣ ಸಂಬಂಧ ಈಗ ತೂಗುಯ್ಯಾಲೆ­ಯಲ್ಲಿದೆ. ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್‌ ಈಗ ಜೆಡಿಯುಗೆ ಅಸ್ಪೃಶ್ಯ ಎನಿಸುತ್ತಿದೆ. ಹಗರಣಗಳ ಕಳಂಕ ಮತ್ತು ಭಾರಿ ಆಡಳಿತ ವಿರೋಧಿ ಅಲೆ ಎದು­ರಿ­ಸುತ್ತಿರುವ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳುವ ವಿಚಾರದಲ್ಲಿ ನಿತೀಶ್‌ಗೆ ಈಗ ಯಾವ ಆಸಕ್ತಿಯೂ ಉಳಿದಂತಿಲ್ಲ.

ಬಿಹಾರಕ್ಕೆ ವಿಶೇಷ ಸ್ಥಾನ ನೀಡಬೇಕು ಎಂದು ಜೆಡಿಯು ನಾಯಕ ಬಹಳ ಕಾಲದಿಂದ ಆಗ್ರಹಿ­ಸುತ್ತಿದ್ದಾರೆ. ಆದರೆ, ಈ ವಿಷಯದಲ್ಲಿ ಕಾಂಗ್ರೆಸ್‌ ‘ಮೋಸ’ ಮಾಡಿರುವುದು ಆ ಪಕ್ಷದ ಬಗ್ಗೆ ನಿತೀಶ್ ಅತೃಪ್ತಿ ಹೆಚ್ಚುವುದಕ್ಕೆ ಕಾರಣ ಎಂದು ಅವರ ನಿಕಟವರ್ತಿಗಳು ಹೇಳುತ್ತಾರೆ.
ಕಾಂಗ್ರೆಸ್‌ಗೂ ಕಾರಣಗಳು...: ನಿತೀಶ್‌ರಿಂದ ದೂರ ಸರಿಯುವುದಕ್ಕೆ ಕಾಂಗ್ರೆಸ್‌ಗೂ ಕಾರಣಗಳಿವೆ.

ಬೋಧ್‌ ಗಯಾದಲ್ಲಿ ಸರಣಿ ಬಾಂಬ್‌ ಸ್ಫೋಟ, ಸರನ್‌ನಲ್ಲಿ ವಿಷಯುಕ್ತ ಬಿಸಿಯೂಟ ಸೇವಿಸಿದ ಹಲವು ಮಕ್ಕಳ ದಾರುಣ ಸಾವಿನ ಪ್ರಕರಣಗಳು ನಿತೀಶ್‌ ಆಡಳಿತಕ್ಕೆ ಕಪ್ಪು ಚುಕ್ಕೆಗಳಾದವು. ಉತ್ತಮ ಆಡಳಿತದ ಅವರ ಹಿರಿಮೆ ಪ್ರಶ್ನಾರ್ಹವಾಯಿತು. ವಿಷಯುಕ್ತ ಆಹಾರ ಸೇವಿಸಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದ ವಿದ್ಯಾರ್ಥಿಗಳ ಕ್ಷೇಮ ವಿಚಾರಿಸಲು ನಿತೀಶ್‌ ಆಸ್ಪತ್ರೆಗೂ ಹೋಗಲಿಲ್ಲ.

ಕಾಶ್ಮೀರದಲ್ಲಿ ಪಾಕಿಸ್ತಾನದ ನುಸುಳುಕೋರ­ರೊಂದಿಗೆ ಹೋರಾಡಿ ಹುತಾತ್ಮರಾದ ಯೋಧರ ಮೃತ ದೇಹಗಳನ್ನು ಬಿಹಾರಕ್ಕೆ ತಂದಾಗಲೂ ನಿತೀಶ್‌ ಅಲ್ಲಿ ಕಾಣಿಸಿಕೊಳ್ಳಲಿಲ್ಲ. ಮೊದಲ ಅವಧಿಗೆ ಮುಖ್ಯಮಂತ್ರಿ ಆಗಿದ್ದಾಗ ಇಲ್ಲದಿದ್ದ ಅಸಡ್ಡೆಯೊಂದು ಈಗ ನಿತೀಶ್‌ರಲ್ಲಿ ಕಾಣತೊಡಗಿತು.

ಪಟ್ನಾದಲ್ಲಿ ನಡೆದ ನರೇಂದ್ರ ಮೋದಿ ಸಮಾ­ವೇಶದಲ್ಲಿನ ಸರಣಿ ಬಾಂಬ್‌ ಸ್ಫೋಟ ಬಿಹಾರ ಮುಖ್ಯಮಂತ್ರಿಯ ಜನಪ್ರಿಯತೆಯನ್ನು ಪಾತಾಳಕ್ಕೆ ತಳ್ಳಿತು. ಇದು ಉತ್ತಮ ಆಡಳಿತಗಾರ ಎಂಬ ಅವರ ಹೆಸರಿಗೂ ಘಾಸಿ ಉಂಟು ಮಾಡಿತು. ಏರುತ್ತಿದೆ ಲಾಲು ಜನಪ್ರಿಯತೆ: ಈ ಮಧ್ಯೆ ಬೇರೆ ಕೆಲವು ಬೆಳವಣಿಗೆ­ಗಳೂ ನಡೆದವು. ಕಾಂಗ್ರೆಸ್‌­ನೊಂದಿಗೆ ಗಾಢ ಗೆಳೆತನ ಹೊಂದಿರುವ ಲಾಲು ಪ್ರಸಾದ್‌ ಮೇವು ಹಗರಣದಲ್ಲಿ ಜೈಲು ಸೇರಿದರು.

2004ರ ಲೋಕಸಭಾ ಚುನಾವಣೆ ಮಾದರಿಯ ಮೈತ್ರಿ ಅಗತ್ಯ ಎಂದು ಲಾಲು ಒತ್ತಾಯಿಸುತ್ತಲೇ ಇದ್ದಾರೆ. ಆಗ ರಾಮ್‌ವಿಲಾಸ್‌ ಪಾಸ್ವಾನ್‌ ಅವರ ಎಲ್‌ಜೆಪಿ ಚುನಾವಣಾಪೂರ್ವ ಮೈತ್ರಿಕೂಟದ ಭಾಗವಾಗಿತ್ತು. ಬಿಜೆಪಿಯೊಂದಿಗಿನ ಸಂಬಂಧ ಕಡಿದು­ಕೊಂಡ ನಂತರ ನಿತೀಶ್‌ ಜನ­ಪ್ರಿಯತೆ ಪಾತಾಳಕ್ಕಿಳಿಯ­ತೊಡಗಿದರೆ, ಜೈಲು ಸೇರಿದ ನಂತರ ಲಾಲು ಜನಪ್ರಿಯತೆ ಹೆಚ್ಚುತ್ತಿದೆ.

ವೇಗವಾಗಿ ಬದಲಾಗುತ್ತಿರುವ ರಾಜಕೀಯ ಚಿತ್ರಣ ಕಾಂಗ್ರೆಸ್‌ ನಾಯಕರ ಚಿಂತೆಗೆ ಕಾರಣ­ವಾ­ಗಿದ್ದೂ ಹೌದು. ಕಾಂಗ್ರೆಸ್‌ನಲ್ಲಿ ರಾಹುಲ್‌ ಗಾಂಧಿ ಗುಂಪು ‘ಕೆಲಸಗಾರ’ ನಿತೀಶ್‌ ಜತೆ ಒಳ ಒಪ್ಪಂದ ಮಾಡಿಕೊಳ್ಳುವುದರ ಪರವಾಗಿದೆ. ಸೋನಿಯಾ ಬೆಂಬಲ ಇರುವ  ಇನ್ನೊಂದು ಗುಂಪು ಲಾಲು ಮತ್ತು ಪಾಸ್ವಾನ್‌ ಜತೆಗೆ ಹೋಗಲು ಬಯಸಿದೆ.

‘ನಿಷ್ಠೆಯ ವಿಚಾರಕ್ಕೆ ಬಂದರೆ ಲಾಲು ಪ್ರಶ್ನಾತೀತ. ಅವರು ನಿರಂತರವಾಗಿ ಸೋನಿಯಾ ಬೆನ್ನಿಗೆ ನಿಂತಿ­ದ್ದಾರೆ. ಆದರೆ, ನಿತೀಶ್‌, ಜಾರ್ಜ್ ಫರ್ನಾಂಡಿಸ್‌ ಜತೆಗೂ ನಿಲ್ಲಲಿಲ್ಲ, ಬಿಜೆಪಿ ಜತೆಗೂ ಉಳಿಯಲಿಲ್ಲ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಹೇಳುತ್ತಾರೆ. ‘ಕಾಂಗ್ರೆಸ್‌, ಆರ್‌ಜೆಡಿ ಮತ್ತು ಎಲ್‌ ಜೆಪಿ ಜತೆಯಾಗಿ ಸ್ಪರ್ಧಿಸಿದರೆ ಬಿಜೆಪಿಯನ್ನು ಹಿಮ್ಮೆಟ್ಟಿಸ­ಬಹುದು. ಜೆಡಿಯು ಏಕಾಂಗಿಯಾಗಿ ಸ್ಪರ್ಧಿಸಿದರೆ ಆ ಪಕ್ಷಕ್ಕೆ ಅತಿ ದೊಡ್ಡ ನಷ್ಟ ಉಂಟಾಗುವುದು ಖಚಿತ.

ಯಾವುದೇ ಮೈತ್ರಿ ನಡೆಯದಿದ್ದರೆ ಪರಿಸ್ಥಿತಿ ಸಂಪೂರ್ಣ ವ್ಯತಿರಿಕ್ತವಾಗುತ್ತದೆ. ಬಹುಕೋನ ಸ್ಪರ್ಧೆ­ಯಲ್ಲಿ ಬಿಜೆಪಿಗೆ ಹೆಚ್ಚಿನ ಲಾಭವಾಗುತ್ತದೆ’ ಎಂದು ಆ ನಾಯಕರು ವಿಶ್ಲೇಷಿಸುತ್ತಾರೆ. ಆದರೆ, ಈತನಕ ವಿಶೇಷ ಸ್ಥಾನದ ಕುರಿತಾಗಲಿ, ಮಿತ್ರ ಪಕ್ಷದ ಆಯ್ಕೆಯ ಕುರಿತಾಗಲಿ ಕಾಂಗ್ರೆಸ್‌ ಏನನ್ನೂ ಹೇಳಿಲ್ಲ.

ADVERTISEMENT

ಜೈಲಿನಿಂದ ಹೊರಬಂದಿರುವ ಲಾಲು ಲೋಕಸಭೆ ಚುನಾವಣೆಯಲ್ಲಿ ಸಕ್ರಿಯರಾ­ಗುತ್ತಾರೆ. ಯಾವುದೇ ಚುನಾವಣಾ ಹೊಂದಾಣಿಕೆ ಮಾಡಿ­ಕೊಳ್ಳುವ ಮೊದಲು ಚುನಾವಣಾ ಲೆಕ್ಕಾ­ಚಾರದ ವಿಶ್ಲೇಷಣೆಯನ್ನು ಕಾಂಗ್ರೆಸ್‌ ನಡೆಸಬೇಕಿದೆ. ಅಲ್ಲಿಯ ತನಕ ಸ್ಪಷ್ಟ ಚಿತ್ರಣ ಸಿಗುವುದೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.