ADVERTISEMENT

ನಿರ್ದಿಷ್ಟ ದಾಳಿ ಎಂದರೇನು?

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2016, 19:30 IST
Last Updated 29 ಸೆಪ್ಟೆಂಬರ್ 2016, 19:30 IST
ನಿರ್ದಿಷ್ಟ ದಾಳಿ ಎಂದರೇನು?
ನಿರ್ದಿಷ್ಟ ದಾಳಿ ಎಂದರೇನು?   

ಇದು ನಿರ್ದಿಷ್ಟ ಗುರಿಗಳನ್ನು ಗುರುತಿಸಿ ನಿಖರವಾಗಿ ನಡೆಸಲಾಗುವ ದಾಳಿ. ಸಾಮಾನ್ಯವಾಗಿ ಇಂತಹ ಗುರಿಗಳ ಮೇಲೆ ವಾಯುದಾಳಿ ನಡೆಸಲಾಗುತ್ತದೆ. ಗುರಿ ಹೊರತುಪಡಿಸಿ ಇತರೆಡೆ ಹೆಚ್ಚಿನ ಹಾನಿಯನ್ನು ತಡೆಯಲು ನಿಖರವಾದ ಸ್ಥಳದ ಮೇಲಷ್ಟೇ ದಾಳಿ ನಡೆಸಲಾಗುತ್ತದೆ. ಜತೆಗೆ ದಾಳಿ ನಡೆಸುವ ತುಕಡಿಗೆ ಯಾವುದೇ ಹಾನಿ ಉಂಟಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ.

ವಿಶೇಷ ತರಬೇತಿ ಪಡೆದು ಕಮಾಂಡೊಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿ, ವೈರಿಗಳನ್ನು ಅವರದ್ದೇ ನೆಲದಲ್ಲಿ ಹೊಡೆದುರುಳಿಸುತ್ತಾರೆ.

ಇಂಗ್ಲಿಷ್‌ನಲ್ಲಿ ಈ ದಾಳಿಗೆ ವೈದ್ಯಕೀಯ ಪರಿಭಾಷೆಯ ‘ಸರ್ಜಿಕಲ್‌’ ಎಂಬ ಪದ ಬಳಸುತ್ತಾರೆ. ಸರ್ಜಿಕಲ್‌ ಎಂದರೆ ದೇಹದ ಯಾವುದಾದರೂ ಭಾಗದಲ್ಲಿ ಆಗಿರುವ ಸಮಸ್ಯೆಯನ್ನು ಅಲ್ಲಷ್ಟೇ ಶಸ್ತ್ರಕ್ರಿಯೆ ನಡೆಸಿ ಸರಿಪಡಿಸುವುದು. ಅದೇ ರೀತಿಯಲ್ಲಿ ಸಮಸ್ಯೆ ಇರುವ ಜಾಗಕ್ಕೆ ದಾಳಿ ನಡೆಸಿ ಸಮಸ್ಯೆಯನ್ನು ನಿರ್ಮೂಲನ ಮಾಡುವುದನ್ನು ಸರ್ಜಿಕಲ್‌ ದಾಳಿ ಅಥವಾ ‘ನಿರ್ದಿಷ್ಟ ದಾಳಿ’ ಎನ್ನಲಾಗುತ್ತದೆ.

ತರಬೇತಿ ಪಡೆದಿರುವ ಪಡೆಗಳು
ಪ್ಯಾರಾ ವಿಶೇಷ ಪಡೆ:
 1965ರ ಭಾರತ–ಪಾಕಿಸ್ತಾನ ಯುದ್ಧದ ನಂತರ 1966ರಲ್ಲಿ ಈ ವಿಶೇಷ ಪಡೆಯನ್ನು ರೂಪಿಸಲಾಯಿತು. ಈ ಪಡೆಯು 1984ರಲ್ಲಿ ನಡೆದ ಬ್ಲೂಸ್ಟಾರ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು. 1980ರ ದಶಕದಲ್ಲಿ ಶ್ರೀಲಂಕಾದಲ್ಲಿ ಆಂತರಿಕ ಯುದ್ಧದ ಸಂದರ್ಭದಲ್ಲಿ ‘ಪವನ್‌ ಕಾರ್ಯಾಚರಣೆ’ ಎಂಬ ರಹಸ್ಯ ಹೆಸರಿನ ಕಾರ್ಯಾಚರಣೆಯಲ್ಲಿ ಈ ತಂಡ ಭಾಗಿಯಾಗಿತ್ತು. 1988ರಲ್ಲಿ ಮಾಲ್ಡೀವ್ಸ್‌ನಲ್ಲಿ ‘ಆಪರೇಷನ್‌ ಕ್ಯಾಕ್ಟಸ್‌’ ಎಂಬ ಹೆಸರಿನಲ್ಲಿ ಈ ತಂಡ ಕಾರ್ಯಾಚ್ಣೆ ನಡೆಸಿತ್ತು. 1999ರಲ್ಲಿ ಕಾರ್ಗಿಲ್‌ ಯುದ್ದದಲ್ಲಿ ಮಹತ್ವದ ಪಾತ್ರ ವಹಿಸಿತ್ತು.

ಮಾರ್ಕೋಸ್‌: ಭಾರತೀಯ ನೌಕಾಪಡೆ 1987ರಲ್ಲಿ ಈ ತುಕಡಿಯನ್ನು ರೂಪಿಸಿತು. 1988ರ ‘ಆಪರೇಷನ್‌ ಪವನ್‌’ ಮತ್ತು ಆಪರೇಷನ್‌ ಕ್ಯಾಕ್ಟಸ್‌ನಲ್ಲಿ ಭಾಗಿಯಾಗಿತ್ತು. ಕಾಶ್ಮೀರದಲ್ಲಿ ಉಗ್ರರ ನುಸುಳುವಿಕೆಯ ಪ್ರಮುಖ ತಾಣವಾದ ಉಲಾರ್‌ ಸರೋವರದಲ್ಲಿಯೂ ಈ ತುಕಡಿಯನ್ನು ನಿಯೋಜಿಸಲಾಗಿದೆ.

ಗರುಡ ಕಮಾಂಡೊ: ಇದು 2004ರಲ್ಲಿ ರೂಪುಗೊಂಡ ತುಕಡಿ. ಉಗ್ರರ ದಾಳಿಯಿಂದ ಸೇನಾ ವಾಯುಪಡೆ ನೆಲೆಗಳನ್ನು ರಕ್ಷಿಸುವುದು ಈ ತುಕಡಿಯ ಮುಖ್ಯ ಗುರಿ. 2008ರ ಮುಂಬೈ ದಾಳಿಕೋರರನ್ನು ಹಿಮ್ಮೆಟ್ಟಿಸಲು ನಡೆದ ಕಾರ್ಯಾಚರಣೆಯಲ್ಲಿ ಮಾರ್ಕೋಸ್‌, ಎನ್‌ಎಸ್‌ಜಿ ಕಮಾಂಡೊಗಳ ಜತೆ ಗರುಡ ಕಾಮಾಂಡೊ ಕೂಡ ಭಾಗಿಯಾಗಿತ್ತು.

ವಾಯುನೆಲೆ ಮತ್ತು ವಾಯುಪಡೆಯ ಆಸ್ತಿಯನ್ನು ರಕ್ಷಿಸುವ ಹೊಣೆಯ ಜತೆಗೆ, ಈ ತುಕಡಿಯು ಸೇನೆಯ ಪ್ಯಾರಾ ಕಮಾಂಡೊ ಜವಾಬ್ದಾರಿಯನ್ನೂ ನಿರ್ವಹಿಸುತ್ತದೆ. ವೈರಿ ದೇಶದಲ್ಲಿ ಕಾರ್ಯಾಚರಣೆ ನಡೆಸುವ ವಿಶೇಷ ತರಬೇತಿಯನ್ನು  ಈ ಕಮಾಂಡೊಗಳಿಗೆ ನೀಡಲಾಗುತ್ತದೆ.

ಆಪರೇಷನ್‌ ನೆಪ್ಚೂನ್‌ ಸ್ಪಿಯರ್‌
ಅಮೆರಿಕ ಮತ್ತು ಇಸ್ರೇಲ್‌ಗಳು ಹಲವು ಪ್ರಮುಖ ನಿಖರ ದಾಳಿಗಳನ್ನು ನಡೆಸಿವೆ. ಅಮೆರಿಕದ ನೌಕಾಪಡೆಯ ಸೀಲ್‌ ಪಡೆಯು ಪಾಕಿಸ್ತಾನದ ಅಬೋಟಾಬಾದ್‌ ಮೇಲೆ ದಾಳಿ ನಡೆಸಿ ಉಗ್ರ ಒಸಾಮಾ ಬಿನ್‌ ಲಾಡೆನ್‌ನನ್ನು ಹತ್ಯೆ ಮಾಡಿದೆ. ಇದು ‘ಆಪರೇಷನ್‌ ನೆಪ್ಚೂನ್‌ ಸ್ಪಿಯರ್‌’ ಎಂದು ಪ್ರಸಿದ್ಧವಾಗಿದೆ.

ಅಲ್‌ ಕೈದಾ ಉಗ್ರಗಾಮಿ ಸಂಘಟನೆ ಸ್ಥಾಪಕನನ್ನು ಹತ್ಯೆ ಮಾಡಲು 2011ರ ಮೇ 2ರಂದು ಈ ದಾಳಿ ನಡೆಸಲಾಯಿತು.

ಆಪರೇಷನ್‌ ಎಂಟೆಬ್ಬೆ: ಇನ್ನೊಂದು ಪ್ರಮುಖ ಯಶಸ್ವೀ ದಾಳಿ ನಡೆಸಿದ ಹಿರಿಮೆ ಇಸ್ರೇಲ್‌ ದೇಶದ್ದಾಗಿದೆ. 1976ರ ಜುಲೈ 4ರಂದು ಉಗಾಂಡಾದ ಎಂಟೆಬ್ಬೆ ವಿಮಾನ ನಿಲ್ದಾಣದ ಮೇಲೆ ಈ ದಾಳಿ ನಡೆಸಲಾಯಿತು. ಉಗ್ರರನ್ನು ಸದೆಬಡಿದು ಒತ್ತೆಯಾಳುಗಳನ್ನು ರಕ್ಷಿಸಲು  ಇಸ್ರೇಲ್‌ನ ರಕ್ಷಣಾ ಪಡೆ ಈ ದಾಳಿ ನಡೆಸಿದೆ. ‘ಆಪರೇಷನ್‌ ಎಂಟೆಬ್ಬೆ’ ಈ ದಾಳಿಯ ಹೆಸರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.