ADVERTISEMENT

ನಿವೃತ್ತ ಸೇನಾಧಿಕಾರಿಯನ್ನು ಬಾಂಗ್ಲಾದೇಶಿ ಅಕ್ರಮ ವಲಸಿಗ ಎಂದು ಬಿಂಬಿಸಿದ ಅಸ್ಸಾಂ ಪೊಲೀಸರು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 10:08 IST
Last Updated 1 ಅಕ್ಟೋಬರ್ 2017, 10:08 IST
ನಿವೃತ್ತ ಸೇನಾಧಿಕಾರಿಯನ್ನು ಬಾಂಗ್ಲಾದೇಶಿ ಅಕ್ರಮ ವಲಸಿಗ ಎಂದು ಬಿಂಬಿಸಿದ ಅಸ್ಸಾಂ ಪೊಲೀಸರು
ನಿವೃತ್ತ ಸೇನಾಧಿಕಾರಿಯನ್ನು ಬಾಂಗ್ಲಾದೇಶಿ ಅಕ್ರಮ ವಲಸಿಗ ಎಂದು ಬಿಂಬಿಸಿದ ಅಸ್ಸಾಂ ಪೊಲೀಸರು   

ಗುವಾಹಟಿ: ಮೂವತ್ತು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅಧಿಕಾರಿಯೊಬ್ಬರನ್ನು ಅಸ್ಸಾಂ ಪೊಲೀಸರು ಬಾಂಗ್ಲಾದೇಶಿ ಅಕ್ರಮ ವಲಸಿಗ ಎಂದು ಬಿಂಬಿಸಿದ ಘಟನೆ ಬೆಳಕಿಗೆ ಬಂದಿದೆ.

ಕಳೆದ ವರ್ಷ ಜ್ಯೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ಆಗಿ ಸೇವೆಯಿಂದ ನಿವೃತ್ತರಾಗಿರುವ ಮೊಹಮ್ಮದ್ ಅಜ್ಮಲ್ ಹಖ್ ಗುವಾಹಟಿಯಲ್ಲಿ ಕುಟುಂಬದವರ ಜತೆ ವಾಸವಿದ್ದಾರೆ. ಇವರಿಗೆ, ಭಾರತೀಯ ಪೌರತ್ವ ಸಾಬೀತುಪಡಿಸುವಂತೆ ವಿದೇಶೀಯರ ನ್ಯಾಯಾಧಿಕರಣದಿಂದ (ಅಕ್ರಮ ವಲಸೆ ಕುರಿತು ಗಮನಹರಿಸಲು ಈಶಾನ್ಯ ರಾಜ್ಯಗಳಲ್ಲಿ ಸ್ಥಾಪಿಸಲಾಗಿರುವ ನ್ಯಾಯಾಧಿಕರಣ) ಕಳೆದ ತಿಂಗಳು ನೋಟಿಸ್ ನೀಡಲಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಅಕ್ರಮ ವಲಸೆ ಬಗ್ಗೆ ತಪಾಸಣೆ ನಡೆಸಲು ಅಸ್ಸಾಂನಲ್ಲಿ ಸುಮಾರು 100 ವಿದೇಶೀಯರ ನ್ಯಾಯಾಧಿಕರಣಗಳನ್ನು ಸ್ಥಾಪಿಸಲಾಗಿದೆ. ಇವು ವಿಶೇಷವಾಗಿ ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ಬಂದವರನ್ನು ಪತ್ತೆ ಮಾಡುವ ಕೆಲಸ ಮಾಡುತ್ತವೆ.

ADVERTISEMENT

1971ರ ಮಾರ್ಚ್ 25ರಂದು ಮೊಹಮ್ಮದ್ ಅಜ್ಮಲ್ ಅವರು ಅಸ್ಸಾಂ ಪ್ರವೇಶಿಸಿದ್ದಾರೆ ಎಂದು ಜಿಲ್ಲಾ ಪೊಲೀಸರು ಪ್ರಕರಣ ದಾಖಲಿಸಿರುವುದಾಗಿ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿ ತಿಳಿಸಿದೆ. ಜುಲೈ 6ರಂದು ಹೊರಡಿಸಲಾಗಿರುವ ಈ ನೋಟಿಸ್‌ನಲ್ಲಿ, ಸೆಪ್ಟೆಂಬರ್ 11ರಂದು ದಾಖಲೆಗಳ ಜತೆ ನ್ಯಾಯಾಧಿಕರಣದ ಮುಂದೆ ಹಾಜರಾಗುವಂತೆ ಅಜ್ಮಲ್ ಅವರಿಗೆ ಸೂಚಿಸಲಾಗಿದೆ. ಆದರೆ, ನೋಟಿಸ್ ತಡವಾಗಿ ತಲುಪಿದ್ದರಿಂದ ಅವರು ನ್ಯಾಯಧಿಕರಣದ ಮುಂದೆ ಹಾಜರಾಗಿಲ್ಲ. ಇದೀಗ ಅಕ್ಟೋಬರ್ 13ರಂದು ಅವರು ನ್ಯಾಯಾಧಿಕರಣದ ಮುಂದೆ ಹಾಜರಾಗಬೇಕಿದೆ.

‘ಘಟನೆಯಿಂದ ಬಹಳ ಬೇಸರವಾಗಿದೆ. ದೇಶಕ್ಕಾಗಿ 30 ವರ್ಷ ಸೇವೆ ಸಲ್ಲಿಸಿದ ನಂತರವೂ ಪೌರತ್ವ ಸಾಬೀತುಪಡಿಸುವಂತೆ ಹೇಳಲಾಗಿದೆ. ಇದು ಅನವಶ್ಯಕ ದೌರ್ಜನ್ಯ’ ಎಂದು ಮೊಹಮ್ಮದ್ ಅಜ್ಮಲ್ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಇದೇ ರೀತಿ ಅಜ್ಮಲ್ ಅವರ ಪತ್ನಿ ಮಮ್ತಾಜ್ ಬೇಗಂ ಅವರಿಗೂ ಪೌರತ್ ಸಾಬೀತುಪಡಿಸುವಂತೆ 2012ರಲ್ಲಿ ನ್ಯಾಯಾಧಿಕರಣ ಸೂಚಿಸಿತ್ತು ಎನ್ನಲಾಗಿದೆ.

1966ರ ಚುನಾವಣಾ ಗುರುತುಚೀಟಿಯಲ್ಲೇ ಅಜ್ಮಲ್ ಅವರ ತಂದೆಯ ಹೆಸರು ಉಲ್ಲೇಖಿಸಲಾಗಿತ್ತು. 1951ರ ರಾಷ್ಟ್ರೀಯ ಪೌರತ್ವ ನೋಂದಣಿಯಲ್ಲಿ (ಎನ್‌ಆರ್‌ಸಿ) ಅಜ್ಮಲ್ ಅವರ ತಾಯಿಯ ಹೆಸರು ಉಲ್ಲೇಖಗೊಂಡಿತ್ತು ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.