ADVERTISEMENT

ನಿವೃತ್ತ ಸೇನಾ ಮುಖ್ಯಸ್ಥರೇ ಹಗರಣದಲ್ಲಿ ಭಾಗಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2017, 19:30 IST
Last Updated 9 ಜುಲೈ 2017, 19:30 IST
ನಿವೃತ್ತ ಸೇನಾ ಮುಖ್ಯಸ್ಥರೇ ಹಗರಣದಲ್ಲಿ ಭಾಗಿ
ನಿವೃತ್ತ ಸೇನಾ ಮುಖ್ಯಸ್ಥರೇ ಹಗರಣದಲ್ಲಿ ಭಾಗಿ   

ನವದೆಹಲಿ: ಮುಂಬೈನ ಆದರ್ಶ ಹೌಸಿಂಗ್ ಸೊಸೈಟಿ ಹಗರಣದಲ್ಲಿ ಸೇನೆಯ ನಿವೃತ್ತ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ರಕ್ಷಣಾ ಸಚಿವಾಲಯ ನೇಮಕ ಮಾಡಿದ ಉನ್ನತಾಧಿಕಾರದ ಸಮಿತಿ ವರದಿ ನೀಡಿದೆ.
ಭೂ ಸೇನೆಯ ಮಾಜಿ ಮುಖ್ಯಸ್ಥರಾದ ಜನರಲ್ ಎನ್.ಸಿ.ವಿಜ್,   ಜನರಲ್ ದೀಪಕ್ ಕಪೂರ್, ಲೆಫ್ಟಿನೆಂಟ್‌ ಜನರಲ್‌ ಶಂತನು ಚೌಧರಿ  ಹಾಗೂ ಇನ್ನೂ ಕೆಲವು ನಿವೃತ್ತ ಸೇನಾಧಿಕಾರಿಗಳು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿ ಹೇಳಿದೆ.
ಹಿರಿಯ ಅಧಿಕಾರಿಗಳಾದ ಲೆಫ್ಟಿನೆಂಟ್‌ ಜನರಲ್‌ ಜಿ.ಎಸ್.ಸಿಹೊಟಾ,  ಮೇಜರ್‌ ಜನರಲ್‌ಗಳಾದ ತೇಜೇಂದರ್ ಸಿಂಗ್, ಟಿ.ಕೆ.ಕೌಲ್‌,   ಎ.ಆರ್.ಕುಮಾರ್, ವಿ.ಎಸ್.ಯಾದವ್ ಮತ್ತು ಆರ್‌.ಕೆ. ಹೂಡಾ ಅವರ ಹೆಸರುಗಳೂ ವರದಿಯಲ್ಲಿ ಇವೆ.ಕಾರ್ಗಿಲ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಯೋಧರಿಗಾಗಿ ನಿರ್ಮಿಸಲಾಗಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಮನೆ ಪಡೆಯಲು ಸೇನೆಯ ಹಿರಿಯ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು 199  ಪುಟಗಳ ವರದಿಯಲ್ಲಿ ಹೇಳಲಾಗಿದೆ. ಹಗರಣದಲ್ಲಿ ಭಾಗಿಯಾದ ನಿವೃತ್ತ ಅಧಿಕಾರಿಗಳಿಗೆ ಸರ್ಕಾರದಲ್ಲಿ ಯಾವುದೇ ಹುದ್ದೆ ನೀಡಬಾರದು ಎಂದು ಶಿಫಾರಸು ಮಾಡಲಾಗಿದೆ.

50 ಜನರ ವಿರುದ್ಧ ಸಿಬಿಐ ಆರೋಪ ಪಟ್ಟಿ

ಆದರ್ಶ ಹೌಸಿಂಗ್ ಸೊಸೈಟಿ ಹಗರಣದತನಿಖೆ ನಡೆಸಿದ ಸಿಬಿಐ, ಆರು ಸೇನಾಧಿಕಾರಿಗಳು ಸೇರಿದಂತೆ 50  ಆರೋಪಿಗಳ ವಿರುದ್ಧ 2012ರಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು.

ADVERTISEMENT

ನಂತರ ಬಾಂಬೆ ಹೈಕೋರ್ಟ್‌ ನಿರ್ದೇಶನದ ಮೇರೆಗೆ  ರಕ್ಷಣಾ ಇಲಾಖೆ,  ನಿವೃತ್ತ ಅಧಿಕಾರಿ ರಾಜನ್‌ ಕಟೋಚ್ ಮತ್ತು ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ರವಿ ಥೋಡ್ಗೆ  ಅವರನ್ನು ಒಳಗೊಂಡ ಉನ್ನತಾಧಿಕಾರ ಸಮಿತಿ ನೇಮಕ ಮಾಡಿತ್ತು.

ಸ್ವಹಿತಾಸಕ್ತಿಗಾಗಿ ಸೇನೆಯ ವಿಶ್ವಾಸಾರ್ಹತೆ, ವರ್ಚಸ್ಸಿಗೆ ಧಕ್ಕೆ ತಂದಿರುವ ಈ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಮಿತಿ ಶಿಫಾರಸು ಮಾಡಿದೆ.
ಇಸ್ರೊದ ವಾಣಿಜ್ಯ ಅಂಗಸಂಸ್ಥೆಯಾದ ಅಂತರಿಕ್ಷ–ದೇವಾಸ್‌ ಹಗರಣದಲ್ಲಿ ಬಾಹ್ಯಾಕಾಶ ಇಲಾಖೆ ಮಾಜಿ ಕಾರ್ಯದರ್ಶಿ ವಿರುದ್ಧ 2012ರಲ್ಲಿ ಕೈಗೊಂಡಿದ್ದ ಕಠಿಣ ಕ್ರಮವನ್ನು ಈ ಅಧಿಕಾರಿಗಳ ವಿರುದ್ಧವೂ ತೆಗೆದುಕೊಳ್ಳಬೇಕು ಎಂದು ಹೇಳಿದೆ.  ಆದರ್ಶ ಹೌಸಿಂಗ್ ಸೊಸೈಟಿ ಹಗರಣದ ವಿಚಾರಣೆ ಇನ್ನಷ್ಟೇ ಆರಂಭವಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.