ADVERTISEMENT

ನೀಟ್‌ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್‌ ಬಾರದ್ದಕ್ಕೆ ನಿರಾಸೆ: ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

ಏಜೆನ್ಸೀಸ್
Published 5 ಜೂನ್ 2018, 14:32 IST
Last Updated 5 ಜೂನ್ 2018, 14:32 IST

ಹೈದರಾಬಾದ್‌: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್‌) ನಿರೀಕ್ಷಿಸಿದಷ್ಟು ಉತ್ತಮ ರ್ಯಾಂಕ್‌ ಬಾರದ ಕಾರಣ ಮನನೊಂದಿದ್ದ ವಿದ್ಯಾರ್ಥಿನಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ವಿದ್ಯಾರ್ಥಿನಿಯನ್ನು ಕಾಚಿಗುಡದ ಜಲ್ಸೀನಾ ಕೌರ್‌(18) ಎಂದು ಗುರುತಿಸಲಾಗಿದ್ದು, ಶಾಪಿಂಗ್‌ ಕಾಂಪ್ಲೆಕ್ಸ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಕರಣ ಕುರಿತು ಮಾಹಿತಿ ನೀಡಿರುವ ಪೊಲೀಸರು, ‘ನೀಟ್‌ ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟವಾಗಿತ್ತು. ಇದರಲ್ಲಿ ನಿರೀಕ್ಷಿಸಿದಷ್ಟು ಉತ್ತಮ ರ್ಯಾಂಕ್‌ ಬಾರದ ಕಾರಣ ವಿದ್ಯಾರ್ಥಿನಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು’ ಎಂದು ತಿಳಿಸಿದ್ದಾರೆ.

ADVERTISEMENT

‘ಬೆಳಿಗ್ಗೆ 10.30ರ ವೇಳೆಗೆ ಮಯೂರಿ ಕಾಂಪ್ಲೆಕ್ಸ್‌ ಬಳಿ ತಲುಪಿದ ಜಲ್ಸೀನಾ, ತಮ್ಮ ಸ್ಕೂಟರ್‌ ಅನ್ನು ನಿಲ್ಲಿಸಿ ಕಟ್ಟಡದ ಮೇಲೇರಿದರು. ಈ ವೇಳೆ ಕೆಲವರು ಆತಂಕ ವ್ಯಕ್ತಪಡಿಸಿದರೂ ಅವರು ಕಟ್ಟಡದಿಂದ ಜಿಗಿದರು’ ಎಂದು ಜಲ್ಸೀನಾ ನೆರೆಮನೆಯವರೊಬ್ಬರು ಹೇಳಿದ್ದಾರೆ.

ಜೀನ್ಸ್‌ ಟೀ–ಶರ್ಟ್‌ ಧರಿಸಿದ್ದ ಯುವತಿ ಸ್ಟೇರ್‌ಕೇಸ್‌ ಮೂಲಕ ಕಟ್ಟವೇರುತ‌್ತಿರುವುದು ಹಾಗೂ ಕಟ್ಟಡದಿಂದ ಜಿಗಿದಿರುವುದು ಸಿಸಿಟಿವಿಯಲ್ಲಿಯೂ ಸೆರೆಯಾಗಿವೆ.

ಕಟ್ಟಡದಿಂದ ಜಿಗದ ನಂತರ ಯುವತಿ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.