ADVERTISEMENT

ನೀತಿ ಸಂಹಿತೆ: ಬಿರಿಯಾನಿ ಕೂಟಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2011, 19:30 IST
Last Updated 3 ಮಾರ್ಚ್ 2011, 19:30 IST

ಚೆನ್ನೈ: ವಧು-ವರ ಹೊರತುಪಡಿಸಿ ‘ಮದುವೆ ಸಮಾರಂಭ’ಗಳಂತೆಯೇ ತೋರುವ ‘ಬಿರಿಯಾನಿ’ ಔತಣಕೂಟಗಳು ತಮಿಳುನಾಡಿನಲ್ಲಿ ಇತ್ತೀಚಿನ ಉಪ ಚುನಾವಣೆಗಳಲ್ಲಿ ಜನಪ್ರಿಯವಾಗಿವೆ. ಮತದಾರರ ಮನವೊಲಿಕೆಗೆ ಇರುವ ಏಕೈಕ ಮಾರ್ಗ ಇಂತಹ ಅದ್ಧೂರಿ ಕೂಟಗಳು ಎಂಬಂತೆ ಇವು ನಡೆದುಕೊಂಡು ಬಂದಿವೆ.

ಆದರೆ ತಮಿಳುನಾಡು ಮತ್ತು ನೆರೆಯ ಪುದುಚೇರಿಯಲ್ಲಿ ಏಪ್ರಿಲ್ 13ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಈಗಾಗಲೇ ಮಾದರಿ ನೀತಿ ಸಂಹಿತಿ ಜಾರಿಗೆ ಬಂದಿದೆ. ಮತದಾರರನ್ನು ಸೆಳೆಯಲು ಈ ಸಲ ‘ಬಿರಿಯಾನಿ’ ಮತ್ತು ‘ಮದ್ಯದ’ ಮೋಜುವಾನಿ ಅಷ್ಟು ಸುಲಭವಾಗಿ ನಡೆಯಲಾರದು.

ಚುನಾವಣಾ ನೀತಿ ಸಂಹಿತಿ ಜಾರಿಗೆ ಬರುತ್ತಿದ್ದಂತೆಯೇ ರಾಜ್ಯದಾದ್ಯಂತ ಇರುವ ‘ಕಲ್ಯಾಣಮಂಟಪಗಳನ್ನು ಚುನಾವಣೆ ಪೂರ್ಣಗೊಳ್ಳುವ ದಿನಾಂಕದವರೆಗೆ ಕಾಯ್ದಿರಿಸಿರುವ ವಿವರಗಳ ಬಗ್ಗೆ ಮಾಹಿತಿ ಕೇಳಲಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಪ್ರವೀಣ ಕುಮಾರ್ ಗುರುವಾರ ಸ್ಪಷ್ಟಪಡಿಸಿದರು.

ಬೃಹತ್ ಸಂಖ್ಯೆಯಲ್ಲಿ ಮತದಾರರನ್ನು ಸೆಳೆಯಲು ಕೆಲವು ದೊಡ್ಡ ರಾಜಕೀಯ ಪಕ್ಷಗಳು ‘ಬಿರಿಯಾನಿ’ ಕೂಟಗಳಿಗಾಗಿ ನಡೆಸುವ ‘ನಕಲಿ ಮದುವೆ ಸಮಾರಂಭಗಳನ್ನು’ ತಡೆಯಲು ಈ ಕ್ರಮ ನೆರವಾಗುತ್ತದೆ ಎಂದು ಅವರು ವರದಿಗಾರರಿಗೆ ತಿಳಿಸಿದರು.

ಎಲ್ಲಾ 234 ವಿಧಾನಸಭೆ ಕ್ಷೇತ್ರಗಳಲ್ಲಿ ‘ವಿಡಿಯೊ ಕಣ್ಗಾವಲು ತಂಡ’ ಇರುತ್ತದೆ. ಮತದಾನದ ಎಲ್ಲಾ ಚಟುವಟಿಕೆಗಳನ್ನು ಈ ತಂಡ ಸಮಗ್ರವಾಗಿ ಚಿತ್ರೀಕರಿಸಿ ಕೊಂಡು  ಚುನಾವಣಾ ಆಯೋಗಕ್ಕೆ ವರದಿ ನೀಡುತ್ತದೆ.

ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ದಿನದಿಂದ ಅವರು ವೆಚ್ಚ ಮಾಡುವ ಹಣದ ಬಗ್ಗೆ ನಿಗಾ ಇಡಲು ಪ್ರತ್ಯೇಕ ತಂಡ ಇರುತ್ತದೆ. ಎಷ್ಟು ವೆಚ್ಚ ಮಾಡಬಹುದು ಎಂಬ ಪಟ್ಟಿಯನ್ನು ಅಭ್ಯರ್ಥಿಗಳಿಗೆ ನೀಡಲಾಗುತ್ತದೆ ಎಂದು ಹೇಳಿದರು.

ಅಭ್ಯರ್ಥಿಗಳ ಪ್ರಚಾರ ವಾಹನಗಳಿಗೂ ಅನುಮತಿ ಪಡೆಯಬೇಕು. ಇದನ್ನು ಉಲ್ಲಂಘಿಸುವ ವಾಹನಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ವಿವಿಧ ಪಕ್ಷಗಳು ಆತುರದಲ್ಲಿ ಚುನಾವಣಾ ದಿನಾಂಕ ನಿಗದಿಪಡಿಸಲಾಗಿದೆ ಎಂದು ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಈ ಪ್ರಕಟಿಸಿರುವ ವೇಳಾಪಟ್ಟಿಯನ್ನು ಪುನರ್‌ಪರಿಶೀಲಿಸುವ ಪ್ರಶ್ನೆಯೇ ಇಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.