ADVERTISEMENT

ನೇತಾಜಿಗೆ ಗೌರವ: ಮುಖಂಡರು ವಿಫಲ

​ಪ್ರಜಾವಾಣಿ ವಾರ್ತೆ
Published 23 ಜನವರಿ 2011, 19:30 IST
Last Updated 23 ಜನವರಿ 2011, 19:30 IST

ಕೋಲ್ಕತ್ತ (ಪಿಟಿಐ): ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸೂಕ್ತ ಗೌರವ ನೀಡುವಲ್ಲಿ ದೇಶದ ರಾಜಕೀಯ ಮುಖಂಡರು ವಿಫಲವಾಗಿದ್ದಾರೆ ಎಂದು ವಿಷಾದಿಸಿರುವ ಇನ್‌ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ‘ಈ ತಪ್ಪನ್ನು ತಿದ್ದಿಕೊಳ್ಳಲು ಇದು ಸಕಾಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ನೇತಾಜಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ಇಲ್ಲಿನ ನೇತಾಜಿ ಸಂಶೋಧನಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ನೇತಾಜಿ ಅವರಿಗೆ ನಾವು ಸೂಕ್ತ ಗೌರವ ನೀಡಿಲ್ಲ. ಆ ತಪ್ಪನ್ನು ತಿದ್ದಿಕೊಳ್ಳಲು ಇದು ಸಕಾಲ’ ಎಂದರು.

‘ನನಗೆ ತಿಳಿದ ಮಟ್ಟಿಗೆ ದೆಹಲಿಯಲ್ಲಿ ನೇತಾಜಿ ಸ್ಮರಣಾರ್ಥ ಯಾವುದೇ ಸ್ಮಾರಕಗಳೂ ಇಲ್ಲ’ ಎಂದು ಕಳವಳ ವ್ಯಕ್ತಪಡಿಸಿದ ಅವರು, ಈ ಲೋಪವನ್ನು ಪ್ರಧಾನ ಮಂತ್ರಿಗಳು ಸರಿಪಡಿಸುವರು ಎನ್ನುವ ವಿಶ್ವಾಸ ಇದೆ ಎಂದರು. ಆ ಕಾಲದಲ್ಲಿ ನೇತಾಜಿ ಕೆಚ್ಚೆದೆಯ ವ್ಯಕ್ತಿ ಎಂದು ಬಣ್ಣಿಸಿದ ನಾರಾಯಣಮೂರ್ತಿ, ಈ ಸಂದರ್ಭದಲ್ಲಿ ಅವರು ಜೀವಂತವಾಗಿದ್ದಿದ್ದರೆ, ಚೀನಾವನ್ನೂ ಮೀರಿ ಭಾರತ ವಿಶ್ವದಲ್ಲಿ ಎರಡನೇ ದೊಡ್ಡ ಆರ್ಥಿಕ ಶಕ್ತಿಯಾಗುತ್ತಿತ್ತು ಎಂದು ಹೇಳಿದರು.

ಅಲ್ಲದೇ ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ನೆಹರು, ರಾಜಾಜಿ, ಪಟೇಲ್ ಮತ್ತು ಶ್ಯಾಮ್ ಪ್ರಸಾದ್ ಮುಖರ್ಜಿ ಅವರೊಂದಿಗೆ ನೇತಾಜಿ ಇದ್ದಿದ್ದರೆ ಭಾರತದ ಘನತೆ ಇನ್ನಷ್ಟು ಹೆಚ್ಚುತ್ತಿತ್ತು. ಜನಸಂಖ್ಯಾ ಹೆಚ್ಚಳದ ಹೊರತಾಗಿಯೂ ನಿರ್ವಹಣಾ ಕ್ಷೇತ್ರದಲ್ಲಿ ಇನ್ನಷ್ಟು ಉದ್ಯೋಗ ಸೃಷ್ಟಿ ಸಾಧ್ಯವಾಗುತ್ತಿತ್ತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.