ADVERTISEMENT

ನೌಕಾಪಡೆಗೆ ಬಲ ತುಂಬಲು ಬರಲಿದೆ ಐಎನ್‌ಎಸ್ ಕಲ್ವರಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2017, 19:52 IST
Last Updated 8 ಆಗಸ್ಟ್ 2017, 19:52 IST
ನೌಕಾಪಡೆಗೆ ಬಲ ತುಂಬಲು ಬರಲಿದೆ ಐಎನ್‌ಎಸ್ ಕಲ್ವರಿ
ನೌಕಾಪಡೆಗೆ ಬಲ ತುಂಬಲು ಬರಲಿದೆ ಐಎನ್‌ಎಸ್ ಕಲ್ವರಿ   

ಸ್ಕಾರ್ಪೀನ್‌ ಸರಣಿಯ ಮೊದಲ ಜಲಾಂತರ್ಗಾಮಿ ನೌಕೆ ಐಎನ್‌ಎಸ್‌ ಕಲ್ವರಿ ಇದೇ ತಿಂಗಳ ಮೂರು ಅಥವಾ ನಾಲ್ಕನೇ ವಾರದಲ್ಲಿ ನೌಕಾಪಡೆಗೆ ಹಸ್ತಾಂತರವಾಗಲಿದೆ ಎಂದು ಮೂಲಗಳು ತಿಳಿಸಿವೆ.

ನಿರ್ಮಾಣ ಸಂಸ್ಥೆಯೇ ಎಲ್ಲಾ ಹಂತದ ಪರೀಕ್ಷೆಗಳು ಮತ್ತು ಪ್ರಾಯೋಗಿಕ ಕಾರ್ಯಾಚರಣೆಯನ್ನು ಪೂರೈಸಿರುವುದರಿಂದ ಐಎನ್‌ಎಸ್‌ ಕಲ್ವರಿ ನೌಕಾಪಡೆಗೆ ಹಸ್ತಾಂತರವಾಗುತ್ತಿದ್ದಂತೆಯೇ ಸೇವೆಗೆ ನಿಯೋಜನೆ ಆಗಲಿದೆ.

‘ಹಿಂದೂ ಮಹಾಸಾಗರಕ್ಕೆ ತನ್ನ ಯುದ್ಧ ನೌಕೆಗಳು ಮತ್ತು ಜಲಾಂತರ್ಗಾಮಿನೌಕೆಗಳನ್ನು ಕಳುಹಿಸುವ ಮೂಲಕ ಚೀನಾ ಈ ಪ್ರದೇಶದಲ್ಲಿ ತನ್ನ ಇರುವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಸದ್ಯ ಭಾರತ ಮತ್ತು ಚೀನಾ ಮಧ್ಯೆ ದೋಕಲಾ ಪಾಸ್‌ ವಿವಾದ ಇರುವುದರಿಂದ ನೌಕಾಪಡೆಗೆ ಐಎನ್‌ಎಸ್‌ ಕಲ್ವರಿ ಸೇರ್ಪಡೆ ಭಾರಿ ಮಹತ್ವ ಪಡೆದಿದೆ’ ಎಂದು ಪೂಷಣ್ ದಾಸ್ ಎಂಬ ಸಂಶೋಧನಾ ವಿದ್ಯಾರ್ಥಿ ಹೇಳಿದ್ದಾರೆ.

ADVERTISEMENT

ಅವರು ರಾಷ್ಟ್ರೀಯ ಭದ್ರತಾ ವ್ಯವಸ್ಥೆ ಕುರಿತು ದೆಹಲಿಯ ‘ಅಬ್ಸರ್ವರ್ ರಿಸರ್ಚ್ ಫೌಂಡೇಶನ್‌’ನಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.

ನೌಕಾಪಡೆಗೆ ತರಲಿದೆ ಬಲ

‘1996ರ ನಂತರ ನೌಕಾಪಡೆಯ ಸೇವೆಯಿಂದ ಹಲವು ಜಲಾಂತರ್ಗಾಮಿ ನೌಕೆಗಳು ನಿವೃತ್ತಿಯಾದರೂ ಹೊಸ ನೌಕೆಗಳು ಸೇರ್ಪಡೆಯಾಗಿರಲಿಲ್ಲ. ಹೀಗಾಗಿ ನೌಕಾಪಡೆಯ ಜಲಾಂತರ್ಗಾಮಿ ವಿಭಾಗದ ಬಲ ನಿಜಕ್ಕೂ ಕುಂದಿತ್ತು. ನಿವೃತ್ತಿಯಾದ ನೌಕೆಗಳ ಬದಲಿಗೆ ಸ್ಕಾರ್ಪೀನ್‌ ಸರಣಿಯ ಆರು ನೌಕೆಗಳನ್ನು ಸೇವೆಗೆ ನಿಯೋಜಿಸಲು ನಿರ್ಧರಿಸಲಾಗಿತ್ತು. ಎಲ್ಲವೂ ಪೂರ್ವನಿಗದಿಯಂತೆ ನಡದಿದ್ದರೆ ಈ ಹೊತ್ತಿಗೆ ಮೂರು ನೌಕೆಗಳಾದರೂ ಸೇವೆಗೆ ಸೇರ್ಪಡೆ ಆಗಬೇಕಿತ್ತು. ಆದರೆ ತಡವಾದರೂ ಮಹತ್ವದ ಸಮಯದಲ್ಲಿ ಐಎನ್‌ಎಸ್‌ ಕಲ್ವರಿ ಸೇವೆಗೆ ನಿಯೋಜನೆ ಆಗುತ್ತಿದೆ’ ಎಂದು ಸೇನಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

* 21 1996ರಲ್ಲಿ ಭಾರತೀಯ ನೌಕಾಪಡೆಯಲ್ಲಿ ಇದ್ದ ಜಲಾಂತರ್ಗಾಮಿಗಳ ಸಂಖ್ಯೆ

* 13 ಈಗ ನೌಕಾಪಡೆ ಬಳಿ ಇರುವ ಜಲಾಂತರ್ಗಾಮಿಗಳ ಸಂಖ್ಯೆ

* 6 ಸೇವೆಗೆ ನಿಯೋಜನೆ ಆಗಬೇಕಿರುವ ಸ್ಕಾರ್ಪೀನ್‌ ಸರಣಿಯ ಜಲಾಂತರ್ಗಾಮಿಗಳು
* 54 ಚೀನಾ ಬಳಿ ಇರುವ ಡೀಸೆಲ್ ಚಾಲಿತ ಜಲಾಂತರ್ಗಾಮಿಗಳ ಸಂಖ್ಯೆ

* 6 ಚೀನಾ ಬಳಿ ಇರುವ ಪರಮಾಣು ಚಾಲಿತ ಜಲಾಂತರ್ಗಾಮಿಗಳು

ಸದ್ಯಕ್ಕೆ ದೊಡ್ಡ ಅಪಾಯವೇನಿಲ್ಲ

‘ಭಾರತಕ್ಕಿಂತ ಚೀನಾ ಬಳಿ ಹೆಚ್ಚಿನ ಜಲಾಂತರ್ಗಾಮಿಗಳು ಇದ್ದರೂ ಹಿಂದೂ ಮಹಾಸಾಗರದಲ್ಲಿ ಭಾರತದ್ದೇ ಬಲ ಹೆಚ್ಚು’ ಎಂದು ಪೂಷಣ್ ದಾಸ್ ಅಭಿಪ್ರಾಯಪಟ್ಟಿದ್ದಾರೆ.

‘ಈ ಬಾರಿಯ ಮಲಬಾರ್ ಸಮರಾಭ್ಯಾಸದಲ್ಲಿ ಭಾರತ, ಜಪಾನ್ ಮತ್ತು ಅಮೆರಿಕಗಳ ನೌಕಾಪಡೆಗಳು ಜಲಾಂತರ್ಗಾಮಿ ನಿರೋಧಕ ತಂತ್ರಗಾರಿಕೆ ಮತ್ತು ದಾಳಿಯ ಅಭ್ಯಾಸ ನಡೆಸಿದವು. ಮೇ ತಿಂಗಳಿನಲ್ಲಿ ಚೀನಾದ ಜಲಾಂತರ್ಗಾಮಿ ನೌಕೆ ಹಿಂದೂ ಮಹಾಸಾಗರವನ್ನು ಪ್ರವೇಶಿಸಿ ನಂತರ ಪಾಕಿಸ್ತಾನ ತಲುಪಿತ್ತು. ಅದನ್ನು ಭಾರತದ ಕರಾವಳಿ ಕಣ್ಗಾವಲು ಪಡೆಯ ವಿಮಾನಗಳು ಪತ್ತೆ ಮಾಡಿದ್ದವು. ಹೀಗಾಗಿ ಭಾರತೀಯ ನೌಕಾಪಡೆಯ ಕಣ್ಣುತಪ್ಪಿಸಿ ಚೀನಾದ ಜಲಾಂತರ್ಗಾಮಿಗಳು ಹಿಂದೂ ಮಹಾಸಾಗರ ಪ್ರವೇಶಿಸುವುದು ಮತ್ತು ಭಾರತದ ಕರಾವಳಿಗೆ ಹತ್ತಿರ ಬರುವುದು ಕಷ್ಟಸಾಧ್ಯ’ ಎಂದು ಅವರು ವಿಶ್ಲೇಷಿಸಿದ್ದಾರೆ.

‘ಜತೆಗೆ ಈ ವಲಯದಲ್ಲಿ ಭಾರತದ ಜತೆ ಅಮೆರಿಕ ಮತ್ತು ಜಪಾನ್‌ ನೌಕಾಪಡೆಗಳ ಸಹಕಾರ ಇರುವುದರಿಂದ ಚೀನಾ ಯಾವುದೇ ರೀತಿಯ ಪ್ರಚೋದನಾತ್ಮಕ ನಡೆ ತೋರುವುದು ಸಾಧ್ಯವಿಲ್ಲ. ಈ ಎಲ್ಲಾ ಸಂಗತಿಗಳನ್ನು ಪರಿಗಣಿಸಿದರೆ ಈ ವಲಯದಲ್ಲಿ ಭಾರತಕ್ಕಿಂತ ಚೀನಾ ಹತ್ತು ವರ್ಷದಷ್ಟು ಹಿಂದೆ ಇದೆ ಎಂದೇ ಜಾಗತಿಕ ಭದ್ರತಾ ಪರಿಣತರು ವಿಶ್ಲೇಷಿಸುತ್ತಾರೆ’ ಎಂದು ಅವರು ಹೇಳಿದ್ದಾರೆ.

ಡೀಸೆಲ್ ಜಲಂತರ್ಗಾಮಿ

* ನಿರ್ಮಾಣ ವೆಚ್ಚ ಕಡಿಮೆ
* ನಿರ್ವಹಣಾ ವೆಚ್ಚ ಕಡಿಮೆ
* ಕಡಿಮೆ ಅವಧಿಯಲ್ಲಿ ನಿರ್ಮಾಣ
* ಡೀಸೆಲ್‌ ಚಾಲಿತ ವಿದ್ಯುತ್‌ಜನಕಗಳಿಂದ ಬ್ಯಾಟರಿಗಳನ್ನು ರೀಚಾರ್ಜ್ ಮಾಡಲು ನೀರಿನ ಮೇಲೆ ಬರಬೇಕಾಗುತ್ತದೆ. ಆಗ ಶತ್ರು ದೇಶಗಳ ರೇಡಾರ್‌ಗಳ ‘ಕಣ್ಣಿಗೆ’ ಬೀಳುವ ಅಪಾಯವಿರುತ್ತದೆ
* ಕೆಲವು ಜಲಾಂತರ್ಗಾಮಿಗಳಲ್ಲಿ ಗಾಳಿಯ ಕೊಳವೆಯನ್ನು ಮಾತ್ರ ನೀರಿನಿಂದ ಮೇಲಕ್ಕೆ ಕಳುಹಿಸಿ ಡೀಸೆಲ್‌ ಎಂಜಿನ್ ಚಾಲೂ ಮಾಡುವ ಸವಲತ್ತು ಇದೆ. ಆದರೆ ಜಲಾಂತರ್ಗಾಮಿಗಳ ಡೀಸೆಲ್ ಎಂಜಿನ್‌ ಉಗುಳುವ ಹೊಗೆಯನ್ನು ಪತ್ತೆ ಮಾಡುವ ಪ್ರಬಲ ರೇಡಾರ್‌ಗಳನ್ನು ಕೆಲವು ರಾಷ್ಟ್ರಗಳು ಹೊಂದಿವೆ. ಹೀಗಾಗಿ ಇವೂ ಸಹ ಪೂರ್ಣ ಪ್ರಮಾಣದಲ್ಲಿ ರೇಡಾರ್‌ಗಳಿಗೆ ಅಗೋಚರವಲ್ಲ

ಪರಮಾಣು ಚಾಲಿತ ಜಲಾಂತರ್ಗಾಮಿ
* ನಿರ್ಮಾಣ ವೆಚ್ಚ ದುಬಾರಿ
* ನಿರ್ವಹಣಾ ವೆಚ್ಚ ದುಬಾರಿ
* ನಿರ್ಮಾಣ ಅವಧಿಯೂ ಹೆಚ್ಚು
* ಆದರೆ ವರ್ಷಗಟ್ಟಲೆ ನೀರಿನಡಿಯಲ್ಲಿ ಕಾರ್ಯಾಚರಣೆ ನಡೆಸಬಹುದು
* ಸಿಬ್ಬಂದಿಗೆ ಅಗತ್ಯವಿರುವ ಆಹಾರ ಸಾಮಗ್ರಿ ಮತ್ತು ಶಸ್ತ್ರಾಸ್ತ್ರಗಳು ಖಾಲಿಯಾಗಿದ್ದಲ್ಲಿ ಅವನ್ನು ಭರ್ತಿ ಮಾಡಿಕೊಳ್ಳಲಷ್ಟೇ ನೀರಿನಿಂದ ಮೇಲಕ್ಕೆ ಬರಬೇಕಾಗುತ್ತದೆ

* ಅತ್ಯಂತ ಪ್ರಬಲ ಸೋನಾರ್‌ ವ್ಯವಸ್ಥೆ ಹೊಂದಿದೆ

* ಅತ್ಯಾಧುನಿಕ ಟಾರ್ಪೆಡೊ ಮತ್ತು ಗುರಿ ನಿರ್ದೇಶಿತ ಖಂಡಾಂತರ ಕ್ಷಿಪಣಿಗಳನ್ನು ಉಡಾವಣೆ ಮಾಡುವ ಸಾಮರ್ಥ್ಯ
* ಕಣ್ಗಾವಲು ವ್ಯವಸ್ಥೆ
* ಕಡಿಮೆ ಶಬ್ದದ ಡೀಸೆಲ್ ಜನರೇಟರ್‌ಗಳು

ಏರ್ ಇಂಡಿಪಿಂಡೆಂಟ್ ಪ್ರಪಲ್ಷನ್

ಸ್ಕಾರ್ಪೀನ್‌ ಸರಣಿಯ ಜಲಾಂತರ್ಗಾಮಿಗಳಿಗಂದೇ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಏರ್ ಇಂಡಿಪಿಂಡೆಂಟ್ ಪ್ರಪಲ್ಷನ್ (ಎಐಪಿ) ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ. ಈ ವ್ಯವಸ್ಥೆ ಇದ್ದಲ್ಲಿ ಬ್ಯಾಟರಿಗಳನ್ನು ಒಮ್ಮೆ ಚಾರ್ಜ್ ಮಾಡಿದರೆ ನೌಕೆ ಗರಿಷ್ಠ 21 ದಿನಗಳವರೆಗೆ ನೀರಿನಡಿ ಕಾರ್ಯಾಚರಣೆ ನಡೆಸಬಹುದು.

ಈ ವ್ಯವಸ್ಥೆ ಇರದಿದ್ದಲ್ಲಿ ಪ್ರತಿ 2–4 ದಿನಗಳಿಗೆ ಒಮ್ಮೆ ನೀರಿನಿಂದ ಮೇಲಕ್ಕೆ ಬಂದು ಡೀಸೆಲ್ ಜನರೇಟರ್‌ ಚಾಲೂ ಮಾಡಿ ಬ್ಯಾಟರಿಗಳನ್ನು ಚಾರ್ಜ್ ಮಾಡಬೇಕಾಗುತ್ತದೆ. ಆಗ ಶತ್ರು ದೇಶಗಳ ರೇಡಾರ್‌ಗಳಿಗೆ ಸಿಕ್ಕಿಬೀಳುವ ಅಪಾಯವಿರುತ್ತದೆ.

ಎಐಪಿ ಇದ್ದಲ್ಲಿ ನೀರಿನಡಿ ಇದ್ದಾಗಲೂ ಬ್ಯಾಟರಿಗಳನ್ನು ಚಾರ್ಜ್‌ ಮಾಡಿಕೊಳ್ಳಬಹುದು. ಹೀಗಾಗಿ ಯುದ್ಧದ ಸಂದರ್ಭದಲ್ಲಿ ಶತ್ರು ದೇಶಗಳ ಕಣ್ಗಾವಲು ವ್ಯವಸ್ಥೆಗೆ ಸಿಲುಕಿ ಬೀಳದೆಯೇ 21 ದಿನ ಕಾರ್ಯಾಚರಣೆ ನಡೆಸಬಹುದು.

ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಎಐಪಿಯ ಪರೀಕ್ಷೆಗಳು ನಡೆಯುತ್ತಿವೆ. ಪರೀಕ್ಷೆಗಳು ಪೂರ್ಣಗೊಂಡ ನಂತರ ಎಐಪಿಗಳನ್ನು ಸ್ಕಾರ್ಪೀನ್‌ ಸರಣಿಯ ಜಲಾಂತರ್ಗಾಮಿ ನೌಕೆಗಳಿಗೆ ಅಳವಡಿಸಲಾಗುತ್ತದೆ.

ಆಧಾರ: ವಿವಿಧ ಮೂಲಗಳಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.