ADVERTISEMENT

ನ್ಯಾಯಾಧೀಶ ರಾಜೀನಾಮೆ

ಪಿಟಿಐ
Published 16 ಏಪ್ರಿಲ್ 2018, 19:30 IST
Last Updated 16 ಏಪ್ರಿಲ್ 2018, 19:30 IST
ರವೀಂದ್ರ ರೆಡ್ಡಿ
ರವೀಂದ್ರ ರೆಡ್ಡಿ   

ಹೈದರಾಬಾದ್‌: ಹನ್ನೊಂದು ವರ್ಷಗಳ ಹಿಂದೆ ನಡೆದ ಮೆಕ್ಕಾ ಮಸೀದಿ ಬಾಂಬ್‌ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸ್ವಾಮಿ ಅಸೀಮಾನಂದ ಸೇರಿದಂತೆ ಐವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ವಿಶೇಷ ನ್ಯಾಯಾಲಯ ಸೋಮವಾರ ಖುಲಾಸೆಗೊಳಿಸಿದೆ.

ತೀರ್ಪು ನೀಡಿದ ಕೆಲವೇ ಗಂಟೆಯಲ್ಲಿ ಎನ್‌ಐಎ ವಿಶೇಷ ನ್ಯಾಯಾಧೀಶ ಕೆ. ರವೀಂದ್ರ ರೆಡ್ಡಿ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ಈ ಹಠಾತ್‌ ನಿರ್ಧಾರ ಆಶ್ಚರ್ಯಕ್ಕೆ ಕಾರಣವಾಗಿದೆ. ರಾಜೀನಾಮೆಗೆ ವೈಯಕ್ತಿಕ ಕಾರಣ ನೀಡಿರುವ ಅವರು, ಆಂಧ್ರ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಸ್ವಾಮಿ ಅಸೀಮಾನಂದ ಅಲಿಯಾಸ್‌ ನಾಬಾ ಕುಮಾರ್‌ ಸರ್ಕಾರ್‌ ಅವರೊಂದಿಗೆ ದೇವೇಂದರ್‌ ಗುಪ್ತಾ, ಲೋಕೇಶ್‌ ಶರ್ಮಾ, ಭರತ್‌ ಮೋಹನ್‌ಲಾಲ್‌ ರಾಠೇಶ್ವರ್‌ ಅಲಿಯಾಸ್‌ ಭರತ್‌ ಭಾಯ್‌ ಮತ್ತು ರಾಜೇಂದರ್‌ ಚೌಧರಿ ಅವರನ್ನೂ ನ್ಯಾಯಾಲಯ ಖುಲಾಸೆಗೊಳಿಸಿದೆ.

ಪ್ರಕರಣದಲ್ಲಿ ಹೆಸರಿಸಲಾದ ಹಿಂದೂ ಸಂಘಟನೆಗಳಿಗೆ ಸೇರಿದ ಹತ್ತು ಆರೋಪಿಗಳಲ್ಲಿ ಐವರು ಖುಲಾಸೆಗೊಂಡಂತಾಗಿದೆ. ಕಳೆದ ವಾರ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ್ದ ಎನ್‌ಐಎ ವಿಶೇಷ ನ್ಯಾಯಾಲಯ ಏ.16ಕ್ಕೆ ಶಿಕ್ಷೆ ಕಾಯ್ದಿರಿಸಿತ್ತು.  2007ರ ಮೇ 18ರಂದು ಶುಕ್ರವಾರ ಪ್ರಾರ್ಥನೆಯ ವೇಳೆ ಚಾರ್‌ ಮಿನಾರ್‌ ಬಳಿ ಇರುವ ಐತಿಹಾಸಿಕ ಮೆಕ್ಕಾ ಮಸೀದಿಯಲ್ಲಿ ಶಕ್ತಿಶಾಲಿ ಬಾಂಬ್‌ ಸ್ಫೋಟಿಸಿತ್ತು.  ಸ್ಫೋಟ 9 ಜನರನ್ನು ಬಲಿ ಪಡೆದಿತ್ತು. 58 ಜನರು ಗಾಯಗೊಂಡಿದ್ದರು.

ADVERTISEMENT

ಸಾಕ್ಷ್ಯಗಳ ಕೊರತೆ: ಆರೋಪ ಸಾಬೀತುಪಡಿಸುವ ಸಾಕ್ಷ್ಯಗಳು ದೊರೆಯದ ಕಾರಣ ನ್ಯಾಯಾಲಯ ಐವರನ್ನು ದೋಷಮುಕ್ತ ಮಾಡಿದೆ ಎಂದು ಆರೋಪಿ ಪರ ವಕೀಲರು ತಿಳಿಸಿದ್ದಾರೆ. ಆದೇಶ ಪ್ರತಿ ದೊರೆತ ನಂತರ ಪರಿಶೀಲಿಸಿ ಮುಂದಿನ ಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಎನ್‌ಐಎ ವಕ್ತಾರ ಅಲೋಕ್‌ ಮಿತ್ತಲ್‌ ಪ್ರತಿಕ್ರಿಯಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಹೈದರಾಬಾದ್‌ನ ನಾಂಪಲ್ಲಿಯಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯ ಮತ್ತು ಮೆಕ್ಕಾ ಮಸೀದಿಗೆ ಭಾರಿ ಭದ್ರತೆ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.