ADVERTISEMENT

ಪಂಚಾಯತ್ ರಾಜ್ : ರಾಜ್ಯಕ್ಕೆ ದ್ವಿತೀಯ ಬಹುಮಾನ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2012, 19:30 IST
Last Updated 24 ಏಪ್ರಿಲ್ 2012, 19:30 IST

ನವದೆಹಲಿ: `ಪಂಚಾಯತ್ ರಾಜ್ ಸಂಸ್ಥೆಗಳ ಸಬಲೀಕರಣ ಹಾಗೂ ಉತ್ತರದಾಯಿತ್ವ ಪ್ರೋತ್ಸಾಹ ಯೋಜನೆ~ಯಡಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಪ್ರಸಕ್ತ ಸಾಲಿನಲ್ಲಿ ಎರಡನೇ ಬಹುಮಾನ ಪಡೆದಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವಾಲಯ ಕೊಡಮಾಡುವ ಬಹುಮಾನವು ಎರಡು ಕೋಟಿ ನಗದು ಹಾಗೂ ಪ್ರಮಾಣ ಪತ್ರ ಒಳಗೊಂಡಿದೆ.

ರಾಷ್ಟ್ರಮಟ್ಟದಲ್ಲಿ ರಾಜ್ಯಕ್ಕೆ ಪ್ರಶಸ್ತಿ ದೊರೆಯುತ್ತಿರುವುದು ಸತತ ಇದು ಮೂರನೇ ಸಲ. ಮೂರು ವರ್ಷಗಳ ಹಿಂದೆ (2009-10ರಲ್ಲಿ) ಮೊದಲ ಬಹುಮಾನದ ಗೌರವ ಸಂದಿತ್ತು. ಮರು ವರ್ಷ ಎರಡನೇ ಬಹುಮಾನ ಲಭಿಸಿತ್ತು. ಅಧಿಕಾರ ವಿಕೇಂದ್ರೀಕರಣ ಹಾಗೂ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದ ಅತ್ಯುತ್ತಮ ಸಾಧನೆಗಾಗಿ ಈ ಬಹುಮಾನ ನೀಡಲಾಗಿದೆ.

ಕೇಂದ್ರ ಪಂಚಾಯತ್‌ರಾಜ್ ಸಚಿವ ವಿ. ಕಿಶೋರ್‌ಚಂದ್ರದೇವ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್ ಮಂಗಳವಾರ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ವಿಕೇಂದ್ರೀಕರಣ ಹಾಗೂ ಪಂಚಾಯತ್ ರಾಜ್ ವ್ಯವಸ್ಥೆ ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಪ್ರಶಸ್ತಿ ಸ್ಥಾಪಿಸಿದೆ. ಪ್ರಶಸ್ತಿ ಭಾಗವಾಗಿ ಕಲ್ಯಾಣ ಕಾರ್ಯಕ್ರಮ ಯಶಸ್ವಿಯಾಗಿ ಜಾರಿಗೊಳಿಸಿದ ಕೆಲವು ಪಂಚಾಯತಿಗಳಿಗೂ ಬಹುಮಾನ ದೊರೆತಿದೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿಗೆ 25 ಲಕ್ಷ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕು ಪಂಚಾಯತಿ,  ಬಸವ ಕಲ್ಯಾಣ ತಾಲ್ಲೂಕು ಪಂಚಾಯತಿಗೆ ತಲಾ 15 ಲಕ್ಷ, ರಾಮನಗರ ಜಿಲ್ಲೆಯ ಇಟ್ಟಮಡು ಗ್ರಾಮ ಪಂಚಾಯತಿ, ಬೀದರ ಜಿಲ್ಲೆಯ ಘಾಟ್ ಬೊರಾಳ್ ಗ್ರಾಮ ಪಂಚಾಯತಿ, ಧಾರವಾಡ ಜಿಲ್ಲೆಯ ಗುಮ್ಮಗೋಳ ಗ್ರಾಮ ಪಂಚಾಯತಿ, ಉಡುಪಿ ಜಿಲ್ಲೆ ಮಡಮಕ್ಕಿ ಗ್ರಾಮ ಪಂಚಾಯತಿಗೆ ತಲಾ 13 ಲಕ್ಷ ರೂಪಾಯಿ ನಗದು ಬಹುಮಾನ ದೊರೆತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಲೈಲಾ ಗ್ರಾಮ ಪಂಚಾಯತಿಗೆ ಗೌರವ ಗ್ರಾಮ ಸಭೆ ಪ್ರಶಸ್ತಿ ದೊರೆತಿದೆ.

ಈ ಪ್ರಶಸ್ತಿ ಐದು ಲಕ್ಷ ರೂಪಾಯಿ ನಗದು ಒಳಗೊಂಡಿದೆ. ಪಂಚಾಯತಿ ಆಡಳಿತ ವೈಖರಿ, ಪಂಚಾಯತಿ ತೀರ್ಮಾನಗಳಲ್ಲಿ ಜನರ ಸಹಭಾಗಿತ್ವ, ಗುಣಾತ್ಮಕ ಸೇವೆ, ಸಂಸ್ಥೆಗಳ ಹೊಣೆಗಾರಿಕೆ ಮತ್ತು ಪಾರದರ್ಶಕತೆ ಮುಂತಾದ ಮಾನದಂಡಗಳನ್ನು ಆಧರಿಸಿ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ. ಬಹುಮಾನ ಸ್ವೀಕರಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಶೆಟ್ಟರ್, ಬಹುಮಾನದ ಹಣ ಆಯಾ ಪಂಚಾಯತಿಗಳ ಅಭಿವೃದ್ಧಿಗೆ ಬಳಕೆ ಮಾಡಲಾಗುವುದು ಎಂದರು.

ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ ಕುರಿತು ಕೇಂದ್ರ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿರುವ ಕುರಿತು ಪ್ರಸ್ತಾಪಿಸಿದ ಸಚಿವರು, ಈ ಬಗ್ಗೆ ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಜೈರಾಂ ರಮೇಶ್ ರಾಜ್ಯಕ್ಕೆ ಈಚೆಗೆ ಪತ್ರ ಬರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.