ADVERTISEMENT

ಪಟೌಡಿಯಲ್ಲಿ ವಿರಮಿಸಿದ ಟೈಗರ್

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 19:30 IST
Last Updated 23 ಸೆಪ್ಟೆಂಬರ್ 2011, 19:30 IST

ಪಟೌಡಿ (ಹರಿಯಾಣ): ಕ್ರಿಕೆಟ್ ಅಂಗಳದಲ್ಲಿ ಗರ್ಜಿಸಿದ `ಟೈಗರ್~ ಮನ್ಸೂರ್ ಅಲಿ ಖಾನ್ ಪಟೌಡಿ ತಮ್ಮೂರಿನ ತಣ್ಣನೆಯ ತಂಪಿನಲ್ಲಿ, ಗಿಡಮರಗಳ ನೆರಳಿರುವ ಮಣ್ಣಲ್ಲಿ ಅಂತಿಮವಾಗಿ ವಿರಮಿಸಿದ್ದಾರೆ.
ಕಣ್ಣು ಹರಿಸಿದಷ್ಟು ದೂರದವರೆಗೆ ಶ್ವೇತವಸ್ತ್ರ ತೊಟ್ಟ ಬಂಧುಗಳು ಹಾಗೂ ಅಭಿಮಾನಿಗಳ ಸಾಗರ. ಹೆಗಲಿನಿಂದ ಹೆಗಲಿಗೆ ಬದಲಾಗಿ ಸಾಗಿದ ಮನ್ಸೂರ್ ಅಲಿ ಅಂತಿಮ ಯಾತ್ರೆ ಅಂತ್ಯಗೊಂಡಿದ್ದು ಪಟೌಡಿ ಅರಮನೆ ಆವರಣದಲ್ಲಿ.

ಕೊನೆಯ ನವಾಬ್‌ಗೆ ವಿದಾಯ ಹೇಳಲು ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಜನರು ಸೇರಿದರು. ಪೊಲೀಸ್ ಬಿಗಿ ಭದ್ರತೆ ನಡುವೆ ಶಾಂತರೀತಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿದಾಗ ಭಾರತ ತಂಡದ ಮಾಜಿ ನಾಯಕ ಬೀರುತ್ತಿದ್ದ ಪ್ರಶಾಂತವಾದ ಮಂದಹಾಸವು ಕಣ್ಣೆದುರು ಸುಳಿದಾಡಿದ್ದು ಸಹಜ. ನೆನಪುಗಳು ಎದೆಯಾಳದಿಂದ ಉಕ್ಕಿಬಂದು ಬಿಕ್ಕಳಿಸಿ ಅತ್ತವರ ಸಂಖ್ಯೆ ಸಾವಿರಾರು.

ಆಸ್ಪತ್ರೆಯಲ್ಲಿ ಗುರುವಾರ ನಿಧನರಾದ ಎಪ್ಪತ್ತು ವರ್ಷ ವಯಸ್ಸಿನ ಪಟೌಡಿ ಅವರ ಪಾರ್ಥಿವ ಶರೀರವನ್ನು ಬೆಳಿಗ್ಗೆ ನವದೆಹಲಿಯ ವಸಂತ್ ವಿಹಾರ್ ನಿವಾಸಕ್ಕೆ ತರಲಾಗಿತ್ತು. ಅಲ್ಲಿಯೇ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ, ಪಾಕಿಸ್ತಾನದ ಹೈಕಮಿಷನರ್ ಶಾಹಿದ್ ಮಲಿಕ್, ಕೇಂದ್ರ ಸಚಿವ ರಾಜೀವ್ ಶುಕ್ಲಾ, ರಾಜ್ಯಸಭೆ ಸದಸ್ಯ ಮೋತಿಲಾಲ್ ವೊರಾ, ಹರಿಯಾಣ ಮಾಜಿ ಮುಖ್ಯಮಂತ್ರಿ ಓ.ಪಿ.ಚೌಟಾಲಾ ಸೇರಿದಂತೆ ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿದರು.

ರಾಜಧಾನಿಯಿಂದ ಇಲ್ಲಿಗೆ ಪಾರ್ಥಿವ ಶರೀರ ತರುವ ಹೊತ್ತಿಗಾಗಲೇ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು `ಪಟೌಡಿ ಪ್ಯಾಲೆಸ್~ ಮುಂದೆ ಜಮಾಯಿಸಿದ್ದರು. ಕಣ್ಣೀರು ಸುರಿಸುತ್ತಲೇ ಸೈಫ್ ಅಲಿ ಖಾನ್ ತಮ್ಮ ತಂದೆಯ ಅಂತಿಮ ಕ್ರಿಯೆಯ ವಿಧಿಗಳನ್ನು ಪೂರ್ಣಗೊಳಿಸಿದರು.

ಮನ್ಸೂರ್ ಅಲಿ ಅವರ ತಂದೆ ಇಪ್ತಿಕಾರ್ ಅಲಿ ಖಾನ್ ಅವರ ಸಮಾಧಿಯ ಪಕ್ಕದಲ್ಲಿಯೇ ಮುಸ್ಲಿಂ ಸಂಪ್ರದಾಯದಂತೆ ಅಂತಿಮ ಸಂಸ್ಕಾರವನ್ನು ನೆರವೇರಿಸಲಾಯಿತು.

ಅದೇ ಹೊತ್ತಿಗೆ ಅರಮನೆಯ ಮಹಡಿಯಲ್ಲಿ ಮೌನವಾಗಿ ನಿಂತಿದ್ದ ಟೈಗರ್ ಪತ್ನಿ ಶರ್ಮಿಳಾ ಮೌನದ ನಡುವೆ ಮುಖ ಮರೆಮಾಡಿದ್ದರು. ಅವರಿಗೆ ಸಮಾಧಾನ ಮಾಡಿದ್ದು ಸೈಫ್ ಗೆಳತಿಯಾದ ಬಾಲಿವುಡ್ ನಟಿ ಕರೀನಾ ಕಪೂರ್. 

ಮಾಜಿ ಕ್ರಿಕೆಟಿಗರಾದ ಕಪಿಲ್ ದೇವ್ ಹಾಗೂ ಅಜಯ್ ಜಡೇಜಾ ಅವರ ಕೆನ್ನೆಯ ಮೇಲಿಂದಲೂ ಕಣ್ಣೀರು ಹನಿಯಾಗಿ ಜಾರಿತು. ಕರೀನಾ ಸಹೋದರಿ ಕರಿಶ್ಮಾ ಕೂಡ ತನ್ನ ಪತಿಯೊಂದಿಗೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಪಟೌಡಿಗೆ ಆತ್ಮೀಯರಾಗಿದ್ದ ಸರೋದ್ ವಾದಕ ಅಮ್ಜದ್ ಅಲಿ ಖಾನ್ ಅವರೂ ಈ ಸಂದರ್ಭದಲ್ಲಿ ಹಾಜರಿದ್ದರು.

ಸಾವಿರಾರು ಮುಸ್ಲಿಮರು ಭೋಪಾಲ್‌ನಲ್ಲಿರುವ ಐತಿಹಾಸಿಕ ಮೋತಿ ಮಸೀದಿಯಲ್ಲಿ ಮೃತ ಮಾಜಿ ಕ್ರಿಕೆಟಿಗನ ಆತ್ಮಕ್ಕೆ ಶಾಂತಿ ಕೋರಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸಹಾಯ ಹಸ್ತ ನೀಡಲು ಸದಾ ಸಿದ್ಧರಾಗಿರುತ್ತಿದ್ದ ಪಟೌಡಿ ಅವರು ತಮ್ಮ ಭಾಗದಲ್ಲಿ ಮಾಡಿರುವ ಸೇಮಾ ಕಾರ್ಯಗಳನ್ನು ಕೂಡ ಭೋಪಾಲ್ ಜನರು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.