ADVERTISEMENT

ಪರವಾನಗಿ ರದ್ದತಿಗೆ ಶಿಫಾರಸು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 18:50 IST
Last Updated 23 ಫೆಬ್ರುವರಿ 2011, 18:50 IST

ನವದೆಹಲಿ (ಪಿಟಿಐ):  ಐಡಿಯಾ ಸೆಲ್ಯುಲಾರ್, ಸ್ಪೈಸ್ ಟೆಲಿಕಾಂ ಕಂಪೆನಿಗಳಿಗೆ ನೀಡಿದ್ದ ಪರವಾನಗಿಗಳನ್ನು ರದ್ದುಗೊಳಿಸುವ ಜತೆಗೆ ತಪ್ಪಿತಸ್ಥ ದೂರವಾಣಿ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳಲು ತಾನು ಸರ್ಕಾರಕ್ಕೆ ಪದೇಪದೇ ಶಿಫಾರಸು ಮಾಡಿದ್ದಾಗಿ ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರವು (ಟ್ರಾಯ್) ಸುಪ್ರೀಂಕೋರ್ಟ್‌ನಲ್ಲಿ ಸಮರ್ಥಿಸಿಕೊಂಡಿದೆ.

2 ಜಿ ತರಂಗಾಂತರ ಹಗರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳದ ಆರೋಪಕ್ಕೆ ಗುರಿಯಾಗಿರುವ ಪ್ರಾಧಿಕಾರ, ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ 19 ಪುಟಗಳ ಪ್ರಮಾಣಪತ್ರದಲ್ಲಿ ಹೀಗೆ ಹೇಳಿದೆ.

ಐಡಿಯಾ ಕಂಪೆನಿಯ ಸೇವಾ ಪರವಾನಗಿಯನ್ನು ಕರ್ನಾಟಕ ಮತ್ತು ಪಂಜಾಬ್‌ನಲ್ಲಿ, ಅದೇ ರೀತಿ ಸ್ಪೈಸ್ ಪರವಾನಗಿಯನ್ನು ಮಹಾರಾಷ್ಟ್ರ, ಹರಿಯಾಣ, ಆಂಧ್ರಪ್ರದೇಶಗಳಿಗೆ ಅನ್ವಯವಾಗುವಂತೆ ರದ್ದುಗೊಳಿಸಲು ಶಿಫಾರಸು ಮಾಡಿ ದೂರಸಂಪರ್ಕ ಇಲಾಖೆಗೆ ಕಳೆದ ನವೆಂಬರ್‌ನಲ್ಲಿ ಪತ್ರ ಬರೆದಿದ್ದಾಗಿ ಟ್ರಾಯ್ ತಿಳಿಸಿದೆ.

ADVERTISEMENT

ಸೇವಾ ಪರವಾನಗಿ ಪಡೆಯುವ ಸಂದರ್ಭದಲ್ಲಿ ಒಪ್ಪಿಕೊಂಡಿದ್ದ ನಿಬಂಧನೆಗಳನ್ನು ಈ ಎರಡೂ ಕಂಪೆನಿಗಳು ಪಾಲಿಸಿಲ್ಲ. ಅಲ್ಲದೇ, ಈ ಕಂಪೆನಿಗಳ ವಿಲೀನ ಕೂಡ ಮಾರ್ಗದರ್ಶಿ ಸೂತ್ರವನ್ನು ಉಲ್ಲಂಘಿಸಿದೆ ಎಂದು ಪ್ರಾಧಿಕಾರ ನ್ಯಾಯಾಲಯದಲ್ಲಿ ವಿವರಿಸಿದೆ.

130 ಪರವಾನಗಿಗಳ ಪೈಕಿ 69 ಪರವಾನಗಿಗಳು ನಿಬಂಧನೆಗಳನ್ನು ಪಾಲಿಸಿಲ್ಲವಾದ್ದರಿಂದ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲು ದೂರಸಂಪರ್ಕ ಇಲಾಖೆಗೆ ಲಿಖಿತ ಶಿಫಾರಸು ರವಾನಿಸಿದ್ದಾಗಿ ಟ್ರಾಯ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.