ನವದೆಹಲಿ, (ಐಎಎನ್‌ಎಸ್): ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯಲ್ಲಿ ಕೋಳಿ ಜ್ವರದ ಪ್ರಕರಣ ಪತ್ತೆಯಾಗಿರುವುದಾಗಿ ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.
ಜಿಲ್ಲೆಯ ತೆಹಟ್ಟಾ ಹೋಬಳಿಯ ಎರಡು ಕೋಳಿ ಫಾರ್ಮ್‌ಗಳಿಂದ ಸಂಗ್ರಹಿಸಿದ ಮಾದರಿ ಪರೀಕ್ಷೆಯಿಂದ ಸೋಂಕು ತಗುಲಿರುವುದು ದೃಢಪಟ್ಟಿದೆ. ರೋಗ ಹರಡದಂತೆ ರಾಜ್ಯದಾದ್ಯಂತ ತೀವ್ರ ನಿಗಾ ಇಡಲು ಸೂಚಿಸಲಾಗಿದೆ. ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರವು ಪಶ್ಚಿಮ ಬಂಗಾಳ ಸರ್ಕಾರಕ್ಕೆ ತಿಳಿಸಿದೆ.
ರೋಗ ಕಂಡು ಬಂದ ಸ್ಥಳದ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಎಲ್ಲ ಕೋಳಿ ಫಾರ್ಮ್‌ಗಳು, ಡೈರಿಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಹಾಲು, ಮೊಸರು, ಮಾಂಸ, ಮೊಟ್ಟೆಯಂತಹ ಹೈನುಗಾರಿಕೆ ಮತ್ತು ಕುಕ್ಕುಟ ಉತ್ಪಾದನೆಗಳ ಮಾರಾಟ ನಿಷೇಧಿಸಲು ಸಲಹೆ ನೀಡಲಾಗಿದೆ. ಈ ವೃತ್ತಿಯಲ್ಲಿ ತೊಡಗಿರುವ ಸಿಬ್ಬಂದಿಯ ಓಡಾಟವನ್ನು ನಿರ್ಬಂಧಿಸುವಂತೆಯೂ ತಿಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ, ರೋಗ ಕಂಡುಬಂದ ಸ್ಥಳದಿಂದ ಹತ್ತು ಕಿ.ಮೀ ವ್ಯಾಪ್ತಿಯಲ್ಲಿ ರೋಗ ಪತ್ತೆ ಕಾರ್ಯ ಕೈಗೊಳ್ಳುವಂತೆ ತಿಳಿಸಲಾಗಿದೆ. ಮೂರು ಕಿ.ಮೀ ವ್ಯಾಪ್ತಿಯಲ್ಲಿರುವ ರೋಗಪೀಡಿತ ಕೋಳಿ, ಮೊಟ್ಟೆ ಹಾಗೂ ಆಹಾರ ಪದಾರ್ಥಗಳನ್ನು ಬೇರ್ಪಡಿಸಿ, ನಾಶಪಡಿಸುವಂತೆ ಪಶುಸಂಗೋಪನಾ ಇಲಾಖೆ ಆದೇಶಿಸಿದೆ.
ರೋಗದಿಂದ ಆದ ನಷ್ಟವನ್ನು ಭರಿಸಲು ಕೇಂದ್ರ ಒಪ್ಪಿದ್ದು, ಶೀಘ್ರ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದೆ.
ಇದೇ ಮಾರ್ಚ್‌ನಲ್ಲಿ ತ್ರಿಪುರಾದಲ್ಲಿ ಕೋಳಿಜ್ವರ ಕಂಡುಬಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.