ADVERTISEMENT

ಪಾಂಡೆ `ಅಪರಾಧಿ' ಘೋಷಣೆಗೆ ಸಿಬಿಐ ಅರ್ಜಿ

ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್

​ಪ್ರಜಾವಾಣಿ ವಾರ್ತೆ
Published 12 ಜೂನ್ 2013, 19:59 IST
Last Updated 12 ಜೂನ್ 2013, 19:59 IST

ಅಹಮದಾಬಾದ್ (ಪಿಟಿಐ): ಇಶ್ರತ್ ಜಹಾನ್ ಮತ್ತು ಇತರ ಮೂವರ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಆರೋಪಿ,       ಐಪಿಎಸ್ ಅಧಿಕಾರಿ ಪಿ.ಪಿ. ಪಾಂಡೆ ಅವರನ್ನು `ಘೋಷಿತ ಅಪರಾಧಿ'ಯನ್ನಾಗಿ ಘೋಷಿಸುವಂತೆ ವಿಶೇಷ ನ್ಯಾಯಾಲಯಕ್ಕೆ ಸಿಬಿಐ ಅರ್ಜಿ ಸಲ್ಲಿಸಿದೆ.

ಬಂಧನದಿಂದ ತಪ್ಪಿಸಿಕೊಳ್ಳಲು ಕಳೆದ ತಿಂಗಳು ತಲೆಮರೆಸಿಕೊಂಡಿದ್ದ ಪಾಂಡೆ ಅವರನ್ನು ಸಿಆರ್‌ಪಿಸಿ ಸೆಕ್ಷೆನ್ 82ರ ಅನ್ವಯ `ಘೋಷಿತ ಅಪರಾಧಿ'ಯಾಗಿ ಘೋಷಿಸುವಂತೆ ಸಿಬಿಐ ಮಂಗಳವಾರ ವಿಶೇಷ ಸಿಬಿಐ ಕೋರ್ಟ್‌ನ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್ ಎಚ್.ಎಸ್. ಖುತ್‌ವಾಡ್ ಅವರನ್ನು ಕೋರಿತು.

ಈ ಕುರಿತು ಕೋರ್ಟ್ ಗುರುವಾರ ಆದೇಶ ಹೊರಡಿಸುವ ಸಾಧ್ಯತೆ ಇದೆ. ಒಂದು ವೇಳೆ ಕೋರ್ಟ್ ಪಾಂಡೆಯವರನ್ನು `ಘೋಷಿತ ಅಪರಾಧಿ' ಎಂದು ಘೋಷಿಸಿದರೆ ತನಿಖಾ ಸಂಸ್ಥೆ ಅವರಿಗೆ ಸೇರಿದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬಹುದು.

ಸದ್ಯ ಅಪರಾಧ ವಿಭಾಗದ ಹೆಚ್ಚುವರಿ ಡಿಜಿಪಿಯಾಗಿರುವ ಪಾಂಡೆ ಅವರ ವಿರುದ್ಧ ಮೇ 2ರಂದು ಸಿಬಿಐ ಬಂಧನ ವಾರೆಂಟ್ ಹೊರಡಿಸಿತ್ತು. ಆದರೆ, ಸಿಬಿಐ ಸಮನ್ಸ್ ಅನ್ನು ಅವರು ಕಡೆಗಣಿಸಿದ್ದರು. ಬಳಿಕ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿ, ತಮ್ಮ ವಿರುದ್ಧದ ಎಫ್‌ಐಆರ್ ರದ್ದುಪಡಿಸಬೇಕೆಂದು ಕೋರಿದ್ದರು. ಆದರೆ, ಸುಪ್ರೀಂಕೋರ್ಟ್ ಅವರ ಅರ್ಜಿ ತಿರಸ್ಕರಿಸಿತ್ತು.

ಪಾಂಡೆ ಅವರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಆಪ್ತರು ಎಂಬುದು ಸಹ ಇಲ್ಲಿ ಉಲ್ಲೇಖಾರ್ಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.