ADVERTISEMENT

ಪಾಕಿಸ್ತಾನದಂತಹ ಪರಿಸ್ಥಿತಿಯತ್ತ ದೇಶ: ರಾಹುಲ್ ಗಾಂಧಿ ವಾಗ್ದಾಳಿ

ಪಿಟಿಐ
Published 17 ಮೇ 2018, 19:30 IST
Last Updated 17 ಮೇ 2018, 19:30 IST
ಪಾಕಿಸ್ತಾನದಂತಹ ಪರಿಸ್ಥಿತಿಯತ್ತ ದೇಶ: ರಾಹುಲ್ ಗಾಂಧಿ ವಾಗ್ದಾಳಿ
ಪಾಕಿಸ್ತಾನದಂತಹ ಪರಿಸ್ಥಿತಿಯತ್ತ ದೇಶ: ರಾಹುಲ್ ಗಾಂಧಿ ವಾಗ್ದಾಳಿ   

ರಾಯಪುರ : ‘ಸರ್ವಾಧಿಕಾರದ ಅಧೀನದಲ್ಲಿರುವ ಪಾಕಿಸ್ತಾನದಲ್ಲಿರುವಂತಹದ್ದೇ ಪರಿಸ್ಥಿತಿ ಭಾರತದಲ್ಲೂ ನಿರ್ಮಾಣವಾಗುತ್ತಿದೆ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆತಂಕ ವ್ಯಕ್ತಪಡಿಸಿದ್ದಾರೆ.

ಇಲ್ಲಿ ನಡೆದ ಜನ ಸ್ವರಾಜ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಜನರು ನ್ಯಾಯಕ್ಕಾಗಿ ನ್ಯಾಯಾಲಯಕ್ಕೆ ಹೋಗುವುದು ಸಾಮಾನ್ಯ. ಆದರೆ ಬಿಜೆಪಿ ಆಡಳಿತದಲ್ಲಿ ನ್ಯಾಯಮೂರ್ತಿಗಳೇ ನ್ಯಾಯಕ್ಕಾಗಿ ಜನರ ಎದುರು ಬಂದಿದ್ದರು. ಸ್ವತಂತ್ರ ಭಾರತದಲ್ಲಿ ಹೀಗೆ ಆಗಿದ್ದು ಇದೇ ಮೊದಲು’ ಎಂದು ರಾಹುಲ್ ಹೇಳಿದರು.

ADVERTISEMENT

‘ನ್ಯಾಯಾಂಗಕ್ಕೆ ಅದರ ಕರ್ತವ್ಯಗಳನ್ನು ನಿರ್ವಹಿಸಲು ಅಡ್ಡಿ ಮಾಡಲಾಗುತ್ತಿದೆ. ಪಾಕಿಸ್ತಾನ ಮತ್ತು ಆಫ್ರಿಕಾದ ಕೆಲವು ರಾಷ್ಟ್ರಗಳಲ್ಲಿ ಸೇನಾ ಜನರಲ್‌ಗಳು ನ್ಯಾಯಾಂಗ ಮತ್ತು ಮಾಧ್ಯಮಗಳ ಮೇಲೆ ಅಧಿಕಾರ ಚಲಾಯಿಸುತ್ತಾರೆ. ಸರ್ವಾಧಿಕಾರ ಇರುವಲ್ಲಿ ಮಾತ್ರ ಹೀಗಾಗುತ್ತದೆ. ಆದರೆ ಭಾರತದಂತಹ ಪ್ರಜಾಪ್ರಭುತ್ವದಲ್ಲೂ ಹೀಗೆ ಆಗಿದ್ದು ಇದೇ ಮೊದಲು’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕರ್ನಾಟಕದಲ್ಲಿ ಏನಾಗುತ್ತಿದೆ ಎಂಬುದು ನಿಮಗೆಲ್ಲಾ ಚೆನ್ನಾಗಿ ಗೊತ್ತಿದೆ. ತಮ್ಮ ಶಾಸಕರನ್ನು ಖರೀದಿಸಲು ಬಿಜೆಪಿ ₹ 100 ಕೋಟಿ ನೀಡುವುದಾಗಿ ಆಮಿಷ ಒಡ್ಡುತ್ತಿದೆ ಎಂದು ಜೆಡಿಎಸ್ ನಾಯಕರು ಆರೋಪಿಸಿದ್ದಾರೆ. ಬಿಜೆಪಿ ಆ ಮೂಲಕ ಎಲ್ಲಾ ಸಾಂವಿಧಾನಿಕ ಪ್ರಕ್ರಿಯೆಗಳನ್ನೂ ಹಾಳು ಮಾಡುತ್ತಿದೆ’ ಎಂದು ರಾಹುಲ್ ಹೇಳಿದ್ದಾರೆ.
*
‘ಇಂದು ಸಂವಿಧಾನ ಉಳಿಸಿ ದಿನ’
ಪ್ರಮಾಣ ವಚನ ಸ್ವೀಕರಿಸಲು ಯಡಿಯೂರಪ್ಪ ಅವರಿಗೆ ಅವಕಾಶ ನೀಡಿದ್ದನ್ನು ವಿರೋಧಿಸಿ ಕಾಂಗ್ರೆಸ್ ಶುಕ್ರವಾರ ದೇಶದಾದ್ಯಂತ ‘ಸಂವಿಧಾನ ಉಳಿಸಿ ದಿನ’ವನ್ನು ಆಚರಿಸಲಿದೆ.

‘ದೇಶದ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಮಾಹಿತಿ ನೀಡಿದ್ದಾರೆ.
*
ದೇಶದ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳಲ್ಲೂ ಹಸ್ತಕ್ಷೇಪ ನಡೆಯುತ್ತಿದೆ. ಒಂದರ ಹಿಂದೆ ಒಂದರಂತೆ ಎಲ್ಲಾ ಸಂಸ್ಥೆಗಳಲ್ಲೂ ಆರ್‌ಎಸ್‌ಎಸ್‌ನ ಜನರನ್ನು ತುಂಬಲಾಗುತ್ತಿದೆ.
     ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ

*
ಸರ್ಕಾರ ರಚಿಸಲು ಬಿಜೆಪಿಗೆ ಆಹ್ವಾನ ನೀಡಿ ಶಾಸಕರನ್ನು ಹರಾಜು ಹಾಕುವ ಸ್ಥಿತಿಯನ್ನು ರಾಜ್ಯಪಾಲರು ಸೃಷ್ಟಿಸಿದ್ದಾರೆ. ಇದು ‘ಇಂಡಿಯನ್ ಪೊಲಿಟಿಕಲ್ ಲೀಗ್’.
ಯಶವಂತ್ ಸಿನ್ಹಾ,  ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.