ADVERTISEMENT

ಪಾಕ್‌ನಿಂದ ಮತ್ತೆ ಷೆಲ್‌ ದಾಳಿ: ಯೋಧ, ಬಾಲಕಿ ಸಾವು

ಪಿಟಿಐ
Published 17 ಜುಲೈ 2017, 19:30 IST
Last Updated 17 ಜುಲೈ 2017, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಮ್ಮು/ಶ್ರೀನಗರ: ಪೂಂಛ್‌, ರಾಜೌರಿ ಮತ್ತು ಬಾರಾಮುಲ್ಲಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ  ಪಾಕಿಸ್ತಾನ ಸೇನೆ ನಡೆಸಿದ ಫಿರಂಗಿ ದಾಳಿಗೆ ಒಬ್ಬ ಯೋಧ, ಒಬ್ಬಳು ಬಾಲಕಿ ಬಲಿಯಾಗಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ.

ಭಾರತದ ಸೇನೆ ಪ್ರತಿ ದಾಳಿ ನಡೆಸಿದ್ದರಿಂದಾಗಿ ಭಾರಿ ಗುಂಡಿನ ಚಕಮಕಿ ನಡೆದಿದೆ. ಸೋಮವಾರ ಬೆಳಗ್ಗೆ 7.30ರ ಹೊತ್ತಿಗೆ ಪಾಕಿಸ್ತಾನ ಸೇನೆ ಗುಂಡು ಹಾರಾಟ ಆರಂಭಿಸಿತು.

ಷೆಲ್‌ ದಾಳಿ ಸಂದರ್ಭದಲ್ಲಿ ಬಂಕರ್‌ನಲ್ಲಿದ್ದ ನಾಯ್ಕ್‌ ಮುದಸರ್‌ ಅಹ್ಮದ್‌ ಅವರು ಗುಂಡು ತಗುಲಿ ಗಾಯಗೊಂಡರು. ತಕ್ಷಣವೇ ಅವರನ್ನು ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತಾದರೂ ಅದಕ್ಕೆ ಸ್ಪಂದಿಸದೆ ಅವರು ಮೃತಪಟ್ಟರು.

ADVERTISEMENT

ಬಾಲಕೋಟ್‌, ಮಂಜಕೋಟ್‌, ಬರೋಟಿ ಪ್ರದೇಶದಲ್ಲಿ  ಜನವಸತಿ ಪ್ರದೇಶದ ಮೇಲೆಯೂ ಪಾಕಿಸ್ತಾನ ಷೆಲ್‌ ದಾಳಿ ನಡೆಸಿದೆ. ಈ ದಾಳಿಯಲ್ಲಿ ಸಾಜದಾ ಹೌಸರ್‌ ಎಂಬ 9 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಮಂಜಕೋಟ್‌ ಮತ್ತು ರಾಜೌರಿಗಳಲ್ಲಿ ಒಬ್ಬ ಯೋಧ ಮತ್ತು ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ.

ಈ ಪ್ರದೇಶಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜನರು ಮನೆಯಿಂದ ಹೊರಗೆ ಬರಬಾರದು ಎಂದು ಸೂಚಿಸಲಾಗಿದೆ. ಈ ತಿಂಗಳ ಆರಂಭದಿಂದ ಪಾಕಿಸ್ತಾನದ ಗುಂಡಿನ ದಾಳಿಗೆ ನಾಲ್ವರು ಯೋಧರು ಸೇರಿ ಒಟ್ಟು ಏಳು ಮಂದಿ ಬಲಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.