ADVERTISEMENT

ಪಾಕ್ ಅವಳಿ ಸೋದರ; ಭಾರತ ಮಹಾನ್ ಸ್ನೇಹಿತ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2011, 19:30 IST
Last Updated 6 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): `ಪಾಕಿಸ್ತಾನವು ನಮ್ಮ ಅವಳಿ ಸಹೋದರನಾಗಿದ್ದು, ಭಾರತ ಮಹಾನ್ ಸ್ನೇಹಿತ~ ಎಂದು ಆಫ್ಘಾನಿಸ್ತಾನ ಅಧ್ಯಕ್ಷ ಹಮೀದ್ ಕರ್ಜೈ ಬುಧವಾರ ಇಲ್ಲಿ ಹೇಳುವ ಮೂಲಕ ಭಾರತದೊಂದಿಗೆ ತಮ್ಮ ರಾಷ್ಟ್ರ ಮಾಡಿಕೊಂಡಿರುವ ತಂತ್ರಗಾರಿಕೆಯ ಪಾಲುದಾರಿಕೆ ಒಪ್ಪಂದವು ಪಾಕ್ ಅನ್ನು ಗುರಿಯಾಗಿಸಿದ್ದಲ್ಲ ಎಂಬುದನ್ನು ಪುನರುಚ್ಚರಿಸಿದರು.

ತಮ್ಮ ಎರಡು ದಿನಗಳ ಭಾರತ ಪ್ರವಾಸ ಪೂರ್ಣಗೊಳಿಸಿದ ಸಂದರ್ಭದಲ್ಲಿ ಅಬ್ಸವರ್ ರಿಸರ್ಚ್ ಫೌಂಡೇಷನ್ ಏರ್ಪಡಿಸಿದ್ದ ಮೂರನೇ ಆರ್.ಕೆ.ಮಿಶ್ರಾ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ನಂತರ ಸಂವಾದದಲ್ಲಿ ಪಾಲ್ಗೊಂಡ ಅವರು, `ನಮ್ಮ ಸ್ನೇಹಿತ (ಭಾರತ)ನೊಂದಿಗೆ ಮಾಡಿಕೊಂಡ ಒಪ್ಪಂದವು ಸಹೋದರ (ಪಾಕ್)ನಿಗೆ ಯಾವುದೇ ತೊಂದರೆಯಾಗದು~ ಎಂದು ಪ್ರತಿಕ್ರಿಯಿಸಿದರು.

“ಆಫ್ಘಾನಿಸ್ತಾನವಾಗಲೀ ಅಥವಾ ಭಾರತವಾಗಲೀ ತಮ್ಮ ನಡುವಿನ ತಂತ್ರಕಾರಿಕೆಯ ಪಾಲುದಾರಿಕೆ ಒಪ್ಪಂದವನ್ನು ಉಭಯತ್ರರ ಗಡಿಯನ್ನು ದಾಟಿಸಿ, ಬೇರೆ ರಾಷ್ಟ್ರಕ್ಕೆ ಪ್ರವೇಶ ಮಾಡುವ ಉದ್ದೇಶ ಹೊಂದಿಲ್ಲ. ಈ ಒಪ್ಪಂದ ಯಾವುದೇ ದೇಶದ ವಿರುದ್ಧವಲ್ಲ ಮತ್ತು ಯಾರನ್ನೂ ಗುರಿಯಾಗಿಸಿದ್ದಲ್ಲ. ಇದು ಕೇವಲ ಭಾರತದ ಬಲದಿಂದ ಆಫ್ಘಾನಿಸ್ತಾನ ಲಾಭ ಹೊಂದುವುದಾಗಿದೆ” ಎಂದು ಅವರು ಸ್ಪಷ್ಟಪಡಿಸಿದರು.

ಕಳೆದ ಕೆಲವು ವರ್ಷಗಳಿಂದ ಎರಡೂ ದೇಶಗಳು ಪರಸ್ಪರ ಸಹಕಾರದಲ್ಲಿ ಭಾಗಿಯಾಗಿವೆ. ಆಫ್ಘಾನಿಸ್ತಾನದಲ್ಲಿ ಸುಮಾರು 2000 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ರಸ್ತೆ ಮತ್ತು ಜಾರಂಗಿ-ದೇಲಾರಾಮ್ ಹೆದ್ದಾರಿ, ಉತ್ತರ ಆಫ್ಘನ್‌ನಿಂದ ಕಾಬೂಲ್‌ವರೆಗೆ ವಿದ್ಯುತ್ ಸರಬರಾಜು ಮಾರ್ಗ ಹಾಗೂ ಸಂಸತ್ ಭವನ ನಿರ್ಮಾಣ ಇತ್ಯಾದಿ ಕಾರ್ಯದಲ್ಲಿ ಭಾರತ ನೆರವಾಗಿದೆ ಎಂದು ವಿವರಿಸಿದರು.

ತಂತ್ರಗಾರಿಕೆ ಒಪ್ಪಂದದನ್ವಯ ಭಾರತವು ಆಫ್ಘನ್ ಸೇನಾ ಮತ್ತು ಭದ್ರತಾಪಡೆ ಸಿಬ್ಬಂದಿಗೆ ತರಬೇತಿ ನೀಡಲಿದೆ. ಭಾರತದ ಈ ಎಲ್ಲ ಸಹಾಯಗಳಿಗೆ ಆಫ್ಘಾನಿಸ್ತಾನ ಸದಾ ಕೃತಜ್ಞನಾಗಿರುವುದಾಗಿ ಅವರು ತಮ್ಮ ಉಪನ್ಯಾಸದಲ್ಲಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.