ADVERTISEMENT

ಪಾಕ್ ಭೇಟಿಗೆ ಪ್ರಧಾನಿ ನಕಾರ

ಮುಂಬೈ ದಾಳಿಕೋರರ ವಿರುದ್ಧ ವಿಚಾರಣೆ ವಿಳಂಬಕ್ಕೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 19:54 IST
Last Updated 15 ಡಿಸೆಂಬರ್ 2012, 19:54 IST

ನವದೆಹಲಿ: ಮುಂಬೈ ದಾಳಿಯ ಸಂಚುಕೋರರ ವಿರುದ್ಧ ಪಾಕಿಸ್ತಾನ ಕ್ರಮ ಕೈಗೊಳ್ಳುವವರೆಗೆ ಆ ದೇಶಕ್ಕೆ ಭೇಟಿ ನೀಡಲು ತಮಗೆ ಆಸಕ್ತಿ ಇಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಶನಿವಾರ ಸ್ಪಷ್ಟಪಡಿಸುವ ಮೂಲಕ ಕಟು ಸಂದೇಶ ರವಾನಿಸಿದ್ದಾರೆ.

ಭಾರತಕ್ಕೆ ಬಂದಿರುವ ಪಾಕ್ ಆಂತರಿಕ ವ್ಯವಹಾರಗಳ ಸಚಿವ ರೆಹಮಾನ್ ಮಲಿಕ್ ಅವರಿಗೆ ಪ್ರಧಾನಿ ಈ ವಿಷಯ ಮನವರಿಕೆ ಮಾಡಿಕೊಟ್ಟರು. ಮಲಿಕ್ ಅವರು ಭಾರತದಲ್ಲಿರುವ ಪಾಕಿಸ್ತಾನದ ಹೈಕಮಿಷನರ್ ಸಲ್ಮಾನ್ ಬಷೀರ್ ಅವರೊಂದಿಗೆ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಪ್ರಧಾನಿ ಅವರ ಮನೆಗೆ ಬೆಳಿಗ್ಗೆ 11.30ಕ್ಕೆ ಆಗಮಿಸಿ 15 ನಿಮಿಷ ಮಾತುಕತೆ ನಡೆಸಿದರು.

`ಪಾಕಿಸ್ತಾನಕ್ಕೆ ಬರುವಂತೆ ನಾವು ಈಗಾಗಲೇ ಭಾರತದ ಪ್ರಧಾನಿಯನ್ನು ಆಮಂತ್ರಿಸಿದ್ದೇವೆ. ಪಾಕ್ ಜನರು, ಅದರಲ್ಲೂ ಅವರ ಹುಟ್ಟೂರಾದ ಚತ್ವಾಲ್‌ನ ನಿವಾಸಿಗಳು ಸಿಂಗ್ ಅವರನ್ನು ಕಾಣಲು ತವಕಿಸುತ್ತಿದ್ದಾರೆ; ಬರದಿದ್ದರೆ ನಮಗೆ ಮತ್ತು ನಮ್ಮ ಜನರಿಗೆ ತೀವ್ರ ನಿರಾಸೆಯಾಗುತ್ತದೆ ಎಂಬುದನ್ನೂ ತಿಳಿಸಿದ್ದೇವೆ' ಎಂದು ಮಲಿಕ್ `ಭಾರತ ಅಂತರರಾಷ್ಟ್ರೀಯ ಕೇಂದ್ರ' ಸಮುಚ್ಚಯದ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.

`ಮುಂಬೈ ಮೇಲಿನ ದಾಳಿಕೋರರ ವಿರುದ್ಧ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ನಮ್ಮ ಜನ ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಹಾಗಾಗಿ ನೀವು (ಪಾಕಿಸ್ತಾನ) ಸಂಚುಕೋರರ ವಿರುದ್ಧ ಕ್ರಮ ಕೈಗೊಂಡಾಗ ಮಾತ್ರ ನಾನು ಅಲ್ಲಿಗೆ ಬರಲು ಸಾಧ್ಯವಾಗುತ್ತದೆ ಎಂಬುದನ್ನು ಸಿಂಗ್ ಅವರು ಸೌಮ್ಯ ನುಡಿಗಳಲ್ಲೇ ಸೂಚಿಸಿದರು' ಎಂದು ಮಲಿಕ್ ಹೇಳಿದರು.

`ಸಿಂಗ್ ಅವರೊಂದಿಗೆ ಮಾತುಕತೆ ಉತ್ತಮವಾಗಿಯೇ ಇತ್ತು. ನಾವು ನ್ಯಾಯಾಂಗ ಆಯೋಗವನ್ನು ಇಲ್ಲಿಗೆ ಕಳುಹಿಸುವ ಬದ್ಧತೆ ವ್ಯಕ್ತಪಡಿಸಿದೆವು' ಎಂದರು.
`ಮುಂಬೈ ದಾಳಿಗೆ ಸಂಬಂಧಿಸಿದಂತೆ ಭಾರತವು ನಮ್ಮಂದಿಗೆ ಮಾಹಿತಿ ಹಂಚಿಕೊಂಡಿದೆಯೇ ಹೊರತು, ಪ್ರಮುಖ ಸಂಚುಕೋರನೆಂದು ಆಪಾದಿಸಲಾಗುತ್ತಿರುವ ಹಫೀಜ್ ಸಯೀದ್ ಬಗ್ಗೆ ಸಾಕ್ಷ್ಯಾಧಾರಗಳನ್ನಲ್ಲ' ಎಂದು  ಅವರು ಪುನರುಚ್ಚರಿಸಿದರು.

`ಸಂಚುಕೋರರ ಧ್ವನಿ ಮುದ್ರಿಕೆಯ ಮಾದರಿಯನ್ನು ನೀಡುವಂತೆ ಭಾರತ ಮಾಡಿಕೊಂಡಿರುವ ಮನವಿ ಬಗ್ಗೆ ನೀವೇನು ಕ್ರಮ ಕೈಗೊಂಡಿದ್ದೀರಿ' ಎಂಬ ಪ್ರಶ್ನೆಗೆ ಉತ್ತರಿಸಿದ ಮಲಿಕ್, `ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯಕ್ಕೆ ಸರ್ಕಾರ ಈಗಾಗಲೇ ಶಂಕಿತರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ಆದರೆ, ಆ ಆರೋಪಿಗಳಿಗೆ ತಮ್ಮ ವಿರುದ್ಧವೇ ಸಾಕ್ಷ್ಯ (ಧ್ವನಿ ಮುದ್ರಿಕೆ) ನೀಡುವಂತೆ ಒತ್ತಾಯಿಸಲು ಸರ್ಕಾರಕ್ಕೆ ಸಾಧ್ಯವಿಲ್ಲ' ಎಂದರು.

`ಭಾರತ ಮಾಹಿತಿ ನೀಡಿದ ತಕ್ಷಣವೇ ಏಳು ಶಂಕಿತ ಉಗ್ರರಲ್ಲಿ ಮೂವರನ್ನು ಬಂಧಿಸಲಾಯಿತು. ಲಷ್ಕರ್-ಎ-ತೈಯಬಾ ಕಮಾಂಡರ್ ಲಖ್ವಿ ವಿರುದ್ಧ ಬಲವಾದ ಸಾಕ್ಷ್ಯಾಧಾರಗಳು ಇರುವುದರಿಂದಲೇ ಆತನನ್ನು ಸೆರೆಮನೆಗೆ ಹಾಕಲಾಗಿದೆ' ಎಂದು ದೃಢ ದನಿಯಲ್ಲಿ ಹೇಳಿದರು.

`ಪಾಕ್ ಉಗ್ರರ ವಿರುದ್ಧ ಕ್ರಮ ಕೈಗೊಂಡಿರುವುದರಿಂದ, ದಾಳಿಕೋರರ ಬಗ್ಗೆ ಭಾರತ ಹಂಚಿಕೊಂಡ ಮಾಹಿತಿಯನ್ನು ಪಾಕ್ ನಂಬುತ್ತಿಲ್ಲ ಎಂಬ ಸಂಶಯ ಈಗ ನಿವಾರಣೆ ಆಗಿದೆ ಎಂದುಕೊಂಡಿದ್ದೇನೆ' ಎಂದೂ ಅವರು ಅಭಿಪ್ರಾಯಪಟ್ಟರು.

ಆದರೆ, ಉಗ್ರರ ವಿರುದ್ಧ ಪಾಕ್ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿದೆ ಎಂಬ ಅಸಮಾಧಾನ ಭಾರತಕ್ಕಿದೆ. ಹಫೀಜ್ ಸಯೀದ್ ವಿರುದ್ಧ ತನಿಖೆ ಕೈಗೊಂಡಿದ್ದರೂ ಮೃದು ಧೋರಣೆ ಅನುಸರಿಸಲಾಗುತ್ತಿದೆ ಎಂದೇ ಭಾರತ ಬಗೆದಿದೆ ಎಂದು ಸಚಿವರ ನಿಕಟವರ್ತಿ ಮೂಲಗಳು ತಿಳಿಸಿವೆ.

ಈ ಮಧ್ಯೆ, ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕ್ ನಡೆಸುತ್ತಿರುವ ತನಿಖೆ ಮತ್ತು ಪ್ರಕರಣದ ವಿಚಾರಣೆಯ ಸ್ಥಿತಿಗತಿ ಅರಿಯಲು ಗೃಹ ಸಚಿವಾಲಯದ ತಂಡವೊಂದು ಇಸ್ಲಾಮಾಬಾದ್‌ಗೆ ಭೇಟಿ ನೀಡುವ ಸಾಧ್ಯತೆ ಇದೆ.

ಈ ತಂಡ ಭೇಟಿ ನೀಡಿದ ನಂತರ ರಾಷ್ಟ್ರೀಯ ತನಿಖಾ ದಳದ  (ಎನ್‌ಐಎ) ಒಂದು ತಂಡ ಕೂಡ ಪಾಕ್‌ಗೆ ಭೇಟಿ ನೀಡುವ ಸಾಧ್ಯತೆ ಇದೆ. ಎನ್‌ಐಎ ತಂಡವು, ಅಮೆರಿಕದಲ್ಲಿ ನೆಲೆಸಿರುವ ಉಗ್ರ ಡೇವಿಡ್ ಹೆಡ್ಲಿ ಕುರಿತಂತೆ ಪಾಕ್ ನ್ಯಾಯಾಲಯಕ್ಕೆ ಬರೆದಿರುವ ಪತ್ರದ ಸ್ಥಿತಿಗತಿಯನ್ನು ತಿಳಿಯುವುದು ಈ ಭೇಟಿಯ ಉದ್ದೇಶವಾಗಲಿದೆ.

ಈ ನಡುವೆ, ಭಾರತ ಮತ್ತು ಪಾಕ್ ನಿಯೋಗವು ಉಭಯ ರಾಷ್ಟ್ರಗಳ ಮಧ್ಯೆ ನಡೆಯುತ್ತಿರುವ ಕಳ್ಳಸಾಗಣೆ, ನಕಲಿ ನೋಟು ಚಲಾವಣೆ ಮತ್ತು ಅಕ್ರಮ ಒಳನುಸುಳುವಿಕೆ ಕುರಿತೂ ಚರ್ಚೆ ನಡೆಸಿವೆ. ಈ ಚರ್ಚೆಯಲ್ಲಿ ಪಾಕ್ ಕೇಂದ್ರ ತನಿಖಾ ದಳ (ಎಫ್‌ಐಎ), ಭಾರತದ ಎನ್‌ಐಎ, ಸಿಬಿಐ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.