ADVERTISEMENT

ಪಿತ್ರೋಡಾ ನೇತೃತ್ವದ ತಜ್ಞರ ಸಮಿತಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 19:30 IST
Last Updated 21 ಸೆಪ್ಟೆಂಬರ್ 2011, 19:30 IST

ನವದೆಹಲಿ, (ಪಿಟಿಐ): ರೈಲು ಮಾರ್ಗಗಳು, ಸಿಗ್ನಲ್‌ಗಳು ಮತ್ತು ನಿಲ್ದಾಣಗಳ ಆಧುನೀಕರಣಕ್ಕೆ ಸೂಕ್ತ ಶಿಫಾರಸುಗಳನ್ನು ಮಾಡಲು ಸ್ಯಾಮ್ ಪಿತ್ರೋಡಾ ಅಧ್ಯಕ್ಷತೆಯಲ್ಲಿ ಸರ್ಕಾರ ತಜ್ಞರ ಸಮಿತಿಯೊಂದನ್ನು ರಚಿಸಿದೆ.

ರೈಲ್ವೆಯನ್ನು ನಾಲ್ಕನೇ ತಲೆಮಾರಿಗೆ ಒಯ್ಯುವ ಉದ್ದೇಶದಿಂದ ಆಧುನೀಕರಣದ ಶಿಫಾರಸಿಗೆ ಈ  ಸಮಿತಿಯನ್ನು ರಚಿಸಲಾಗಿದೆ ಎಂದು ರೈಲ್ವೆ ಸಚಿವ ದಿನೇಶ್ ತ್ರಿವೇದಿ ತಿಳಿಸಿದ್ದಾರೆ.

ಎಚ್‌ಡಿಎಫ್‌ಸಿ ಅಧ್ಯಕ್ಷ ದೀಪಕ್ ಪ್ರಕಾಶ್, ಎಸ್‌ಬಿಐ ಮಾಜಿ ಅಧ್ಯಕ್ಷ ಎಂ.ಎಸ್.ವರ್ಮ, ಅಹಮದಾಬಾದ್ ಐಐಎಂ ಪ್ರೊ. ರಘುರಾಮ್, ಐಡಿಎಫ್‌ಸಿ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಲಾಲ್ ಮತ್ತು ಫೀಡ್‌ಬ್ಯಾಕ್ ಇನ್‌ಫ್ರಾಸ್ಟ್ರಕ್ಚರ್ ಸರ್ವೀಸಸ್‌ನ ಅಧ್ಯಕ್ಷ ವಿನಾಯಕ್ ಚಟರ್ಜಿ ಸಮಿತಿಯ ಸದಸ್ಯರಾಗಿರುತ್ತಾರೆ.
 
ಎರಡು ತಿಂಗಳಲ್ಲಿ ಸಮಿತಿಯು ಪ್ರಾಥಮಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ರೈಲ್ವೆ ಮಾಜಿ ಸಚಿವೆ ಮಮತಾ ಬ್ಯಾನರ್ಜಿ ಸಿದ್ಧಪಡಿಸಿದ್ದ 2010ರ ಮುನ್ನೋಟ ವರದಿಯನ್ನು ಶೀಘ್ರವಾಗಿ ಜಾರಿ ಮಾಡುವ ಕಾಲ ಸನ್ನಿಹಿತವಾಗಿದೆ.

ಆಧುನೀಕರಣದ ಆರಂಭಿಕ ಕೆಲಸವನ್ನು ಮಮತಾ ಅವರ ಕಾಲದಲ್ಲೇ ಆರಂಭ ಮಾಡಲಾಗಿರುವುದರಿಂದ ಈಗ ಆ ಕೆಲಸವನ್ನು ತ್ವರಿತವಾಗಿ ಪೂರ್ತಿಗೊಳಿಸಬೇಕಾಗಿದೆ ಎಂದು ಪಿತ್ರೋಡಾ ತಿಳಿಸಿದ್ದಾರೆ.

ರೈಲ್ವೆ ಸುರಕ್ಷತೆಯ ಬಗ್ಗೆ ಶಿಫಾರಸು ಮಾಡಲು ಕಳೆದ ವಾರ ಪರಮಾಣು ವಿಜ್ಞಾನಿ ಅನಿಲ್ ಕಾಕೋಡ್ಕರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ನೇಮಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.