ADVERTISEMENT

ಪುರಸ್ಕಾರದ ಮೊತ್ತ ಸೈನಿಕರ ಕಲ್ಯಾಣಕ್ಕೆ ಅರ್ಪಿಸಿದ ಸಂತೋಷ್ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 19:30 IST
Last Updated 15 ಫೆಬ್ರುವರಿ 2012, 19:30 IST

ಬೆಂಗಳೂರು: ಸೀತಾರಾಂ ಜಿಂದಾಲ್ ಪ್ರತಿಷ್ಠಾನವು `ಎಸ್.ಆರ್.ಜಿಂದಾಲ್ ಪ್ರಶಸ್ತಿ~ಯ ಜೊತೆ ತಮಗೆ ನೀಡುತ್ತಿರುವ ಒಂದು ಕೋಟಿ ರೂಪಾಯಿಯನ್ನು ಭಾರತೀಯ ಸೇನೆಯ ಸೈನಿಕರ ಕಲ್ಯಾಣ ಸಂಘಕ್ಕೆ ದೇಣಿಗೆಯಾಗಿ ಅರ್ಪಿಸುವುದಾಗಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಘೋಷಿಸಿದ್ದಾರೆ.

ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಪ್ರಾಥಮಿಕ ಹಂತದ ಪ್ರಕ್ರಿಯೆ ಆರಂಭಿಸುವಾಗ ಜಿಂದಾಲ್ ಪ್ರತಿಷ್ಠಾನ ತಮ್ಮ ಹೆಸರನ್ನು ಪರಿಶೀಲಿಸಲು ಅವಕಾಶ ಕೋರಿದಾಗಲೇ ಸಂತೋಷ್ ಹೆಗ್ಡೆ ನಗದು ದೇಣಿಗೆ ಕುರಿತು ಷರತ್ತು ವಿಧಿಸಿದ್ದರು. ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯಲ್ಲಿ ಹೆಸರಿಸಿರುವ ಬಳ್ಳಾರಿ ಜೆಎಸ್‌ಡಬ್ಲ್ಯು ಕಂಪೆನಿಯ ಒಡೆತನ ಹೊಂದಿರುವ ಒ.ಪಿ.ಜಿಂದಾಲ್ ಸಮೂಹದ ಜೊತೆ ಸೀತಾರಾಂ ಜಿಂದಾಲ್ ಪ್ರತಿಷ್ಠಾನ ಮತ್ತು ಜಿಂದಾಲ್ ಅಲ್ಯುಮಿನಿಯಂ ಕಂಪೆನಿ ಯಾವುದೇ ವ್ಯಾವಹಾರಿಕ ಸಂಬಂಧ ಹೊಂದಿಲ್ಲ ಎಂಬ ಲಿಖಿತ ಸ್ಪಷ್ಟನೆಯನ್ನೂ ಅವರು ಪಡೆದುಕೊಂಡಿದ್ದರು.

ಪ್ರಶಸ್ತಿ ಕುರಿತು ಬುಧವಾರ `ಪ್ರಜಾವಾಣಿ~ ಜೊತೆ ಮಾತನಾಡಿದ ಅವರು, `ಈ ಪ್ರಶಸ್ತಿಗೆ ನನ್ನನ್ನು ಪರಿಗಣಿಸುವ ಬಗ್ಗೆ ಎಸ್.ಆರ್.ಜಿಂದಾಲ್ ಪ್ರತಿಷ್ಠಾನ ತಿಳಿಸಿತ್ತು. ಇದು ನಾನು ವರದಿಯಲ್ಲಿ ಹೆಸರಿಸಿರುವ ಜೆಎಸ್‌ಡಬ್ಲ್ಯು ಸಮೂಹದ ಪ್ರತಿಷ್ಠಾನ ಇರಬಹುದೇ ಎಂಬ ಅನುಮಾನ ನನ್ನನ್ನು ಆಗಲೇ ಕಾಡಿತ್ತು. ಆದ್ದರಿಂದ ತಕ್ಷಣವೇ ಅವರಲ್ಲಿ ಈ ಬಗ್ಗೆ ಸ್ಪಷ್ಟನೆ ಕೇಳಿದ್ದೆ. ಲಿಖಿತವಾಗಿಯೇ ಸ್ಪಷ್ಟನೆ ನೀಡಿದ್ದ ಪ್ರತಿಷ್ಠಾನ, `ಜೆಎಸ್‌ಡಬ್ಲ್ಯು ಕಂಪೆನಿ ಸಂಸ್ಥಾಪಕ ಓ.ಪಿ.ಜಿಂದಾಲ್ ಮತ್ತು ಸೀತಾರಾಂ ಜಿಂದಾಲ್ ದೂರದ ಸಂಬಂಧಿಗಳು. ಆದರೆ, ಅವರ ನಡುವೆಯಾಗಲೀ, ಅವರ ಒಡೆತನದ ಸಂಸ್ಥೆಗಳ ನಡುವೆಯಾಗಲೀ ಯಾವುದೇ ವ್ಯಾವಹಾರಿಕ ಸಂಬಂಧ ಇಲ್ಲ~ ಎಂಬುದಾಗಿ ತಿಳಿಸಿತ್ತು~ ಎಂದರು.

`ನಾನು ಈ ಹಿಂದೆ ಹೇಳಿದ್ದಂತೆಯೇ `ಭಾರತೀಯ ಸೇನೆಯ ಸೈನಿಕರ ಕಲ್ಯಾಣ ಸಂಘ~ದ `ಅಖಿಲ ಭಾರತೀಯ ಸೈನಿಕ ಕಲ್ಯಾಣ ನಿಧಿ~ ಹೆಸರಿಗೆ ಪ್ರಶಸ್ತಿಯ ಮೊತ್ತದ ಚೆಕ್ ನೀಡುವಂತೆ ತಿಳಿಸಿದ್ದೇನೆ. ಪ್ರಶಸ್ತಿ ಪತ್ರ ಮಾತ್ರ ನಾನು ಇಟ್ಟುಕೊಳ್ಳುತ್ತೇನೆ~ ಎಂದರು.

ಮತ್ತೊಂದು ಪ್ರಶಸ್ತಿ: ಅಖಿಲ ಭಾರತೀಯ ನಿರ್ವಹಣಾ ಒಕ್ಕೂಟ 2011ರ ವಾರ್ಷಿಕ ಸಾಧನೆ ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಿದೆ. ಸಾರ್ವಜನಿಕ ಸೇವಾ ವಿಭಾಗದಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಇದೇ 21ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದೆ. ಪ್ರಶಸ್ತಿ ಮೊತ್ತ ಜಯದೇವ ಹೃದ್ರೋಗ ಸಂಸ್ಥೆಗೆ ನೀಡಲು ನಿರ್ಧರಿಸಿದ್ದು, ಅದೇ ಹೆಸರಿಗೆ ಚೆಕ್ ನೀಡುವಂತೆ ಸೂಚಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.