ADVERTISEMENT

ಪೃಥ್ವಿ-2 ಪರೀಕ್ಷಾರ್ಥ ಉಡ್ಡಯನ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 19:30 IST
Last Updated 4 ಅಕ್ಟೋಬರ್ 2012, 19:30 IST
ಪೃಥ್ವಿ-2 ಪರೀಕ್ಷಾರ್ಥ ಉಡ್ಡಯನ ಯಶಸ್ವಿ
ಪೃಥ್ವಿ-2 ಪರೀಕ್ಷಾರ್ಥ ಉಡ್ಡಯನ ಯಶಸ್ವಿ   

ಬಾಲಾಸೋರ್ (ಒಡಿಶಾ) (ಪಿಟಿಐ): 350 ಕಿ.ಮೀ ವ್ಯಾಪ್ತಿ ಗುರಿಯನ್ನು ಕರಾರುವಕ್ಕಾಗಿ ಹೊಡೆದು ಉರುಳಿಸಬಲ್ಲ ಪೃಥ್ವಿ-2 ಮಧ್ಯಂತರಗಾಮಿ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಭಾರತೀಯ ಸೇನೆ ಗುರುವಾರ ಯಶಸ್ವಿಯಾಗಿ ನಡೆಸಿತು.

ಭೂಮಿಯಿಂದ ಭೂಮಿಗೆ ಚಿಮ್ಮುವ ಕ್ಷಿಪಣಿಯನ್ನು ಗುರುವಾರ ಬೆಳಿಗ್ಗೆ 9.07 ಗಂಟೆಗೆ ಚಾಂಡಿಪುರ ನೆಲೆಯಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ವಿಜ್ಞಾನಿಗಳ ಉಸ್ತುವಾರಿಯಲ್ಲಿ ಭಾರತೀಯ ಸೇನೆ ಪರೀಕ್ಷಾರ್ಥ ಪ್ರಯೋಗ ನಡೆಸಿತು.

ಈ ಹಿಂದೆಯೂ ಹಲವಾರು ಬಾರಿ ಪೃಥ್ವಿ-2ರ ಪರೀಕ್ಷಾರ್ಥ ಉಡಾವಣೆ ನಡೆಸಲಾಗಿತ್ತು. ಕಳೆದ ಬಾರಿ ಆಗಸ್ಟ್ 25ರಂದು ನಡೆಸಿದ ಉಡಾವಣೆಗೆ ಹೋಲಿಸಿದಾಗ ಈ ಬಾರಿ ಬಂಗಾಳ ಕೊಲ್ಲಿಯಲ್ಲಿದ್ದ ಗುರಿಯನ್ನು ಕ್ಷಿಪಣಿ ಅತ್ಯಂತ ಹೆಚ್ಚು ನಿಖರವಾಗಿ ಹೊಡೆದು ಉರುಳಿಸಿತು.

ಪೃಥ್ವಿ-2 ಕ್ಷಿಪಣಿ 500 ಕೆ.ಜಿ. ಭಾರದ ಸಾಂಪ್ರದಾಯಿಕ ಮತ್ತು ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಒಂಬತ್ತು ಮೀಟರ್ ಉದ್ದ ಮತ್ತು ಒಂದು ಮೀಟರ್ ಅಗಲದ ಈ ಕ್ಷಿಪಣಿ ಅತ್ಯಾಧುನಿಕ ಗುರಿ ನಿರ್ದೇಶಿತ ಚಾಲನೆ ಮತ್ತು ನಿಯಂತ್ರಣ ವ್ಯವಸ್ಥೆ ಹೊಂದಿದ್ದು ಪೂರ್ವನಿಗದಿತ ಗುರಿಯನ್ನು ನಿಖರವಾಗಿ ಹೊಡೆದು ಉರುಳಿಸಬಲ್ಲದು. ಕ್ಷಿಪಣಿ ಈಗಾಗಲೇ ಸೇನೆಯ ಬತ್ತಳಿಕೆ ಸೇರಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.