ADVERTISEMENT

ಪೆಟ್ರೋಲ್ ಬೆಲೆ: ಅಂಗ ಪಕ್ಷಗಳ ವಿರೋಧ, ಭಾರತ ಬಂದ್ ಗೆ ಅಣ್ಣಾ, ಬಿಜೆಡಿ ಬೆಂಬಲ

​ಪ್ರಜಾವಾಣಿ ವಾರ್ತೆ
Published 25 ಮೇ 2012, 10:00 IST
Last Updated 25 ಮೇ 2012, 10:00 IST
ಪೆಟ್ರೋಲ್ ಬೆಲೆ: ಅಂಗ ಪಕ್ಷಗಳ ವಿರೋಧ, ಭಾರತ ಬಂದ್ ಗೆ ಅಣ್ಣಾ, ಬಿಜೆಡಿ ಬೆಂಬಲ
ಪೆಟ್ರೋಲ್ ಬೆಲೆ: ಅಂಗ ಪಕ್ಷಗಳ ವಿರೋಧ, ಭಾರತ ಬಂದ್ ಗೆ ಅಣ್ಣಾ, ಬಿಜೆಡಿ ಬೆಂಬಲ   

ಚೆನ್ನೈ/ಕೋಲ್ಕೋತ್ತಾ/ಜಮ್ಮು/ನಾಸಿಕ್/ಭುವನೇಶ್ವರ (ಪಿಟಿಐ/ಐಎಎನ್ಎಸ್): ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಯುಪಿಎ ಅಂಗಪಕ್ಷ ತೃಣಮೂಲ ಕಾಂಗ್ರೆಸ್  ಹಾಗೂ ಡಿಎಂಕೆ ಪಕ್ಷಗಳು ಪ್ರತಿಭಟನೆಗಿಳಿಯುವ ಮೂಲಕ ಶುಕ್ರವಾರ ಸರ್ಕಾರ ಮತ್ತಷ್ಟು ಪೇಚಿಗೆ ಸಿಲುಕಿದೆ.

ಮತ್ತೊಂದೆಡೆ ಮೇ 31 ರ ಭಾರತ್ ಬಂದ್‌ಗೆ  ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹಾಗೂ ಬಿಜುಜನತಾ ದಳ (ಬಿಜೆಡಿ)  ಪಕ್ಷಗಳು ಬೆಂಬಲ ವ್ಯಕ್ತಪಡಿಸಿದ್ದು, ಹೋರಾಟಕ್ಕೆ ಮತ್ತಷ್ಟು ಬಲಬಂದಂತಾಗಿದೆ.

ಯುಪಿಎ ಸರ್ಕಾರದ ಎರಡನೇ ಅತಿದೊಡ್ಡ ಅಂಗಪಕ್ಷ ತೃಣಮೂಲ ಕಾಂಗ್ರೆಸ್ ನಾಯಕಿ ಹಾಗೂ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾಬ್ಯಾನರ್ಜಿ ಅವರು ಬೆಲೆ ಏರಿಕೆ ವಿರುದ್ಧ ಶನಿವಾರ ದಕ್ಷಿಣ ಕೋಲ್ಕೋತ್ತಾದಲ್ಲಿ 7 ಕಿ.ಮೀ ಉದ್ದದ ಜಾಥಾ ಹಮ್ಮಿಕೊಂಡಿದ್ದಾರೆ. ತಕ್ಷಣವೇ ಬೆಲೆ ಏರಿಕೆಯನ್ನು ವಾಪಸ್ ಪಡೆಯಬೇಕೆಂದು ಅವರು ಆಗ್ರಹಿಸಿದ್ದಾರೆ.

ಮತ್ತೊಂದು ಪ್ರಮುಖ ಅಂಗ ಪಕ್ಷ ಡಿಎಂಕೆ ಮೇ 30 ರಂದು ತಮಿಳುನಾಡಿನಾದ್ಯಂತ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿದೆ. ಈಗಾಗಲೇ ರಾಜ್ಯದಲ್ಲಿ ಹಾಲು, ಬಸ್‌ದರಗಳನ್ನು ರಾಜ್ಯಸರ್ಕಾರ ಹೆಚ್ಚಿಸಿದೆ. ಇದರ ಜತೆಗೆ ಕೇಂದ್ರವೂ ಪೆಟ್ರೋಲ್ ಬೆಲೆಯನ್ನು ಹೆಚ್ಚಿಸಿರುವುದಕ್ಕೆ ತಮ್ಮ ಪ್ರಬಲ ವಿರೋಧ ಇದೆ ಎಂದಿರುವ ಡಿಎಂಕೆ ಕೇಂದ್ರ ಹಾಗೂ ರಾಜ್ಯಸರ್ಕಾರಗಳ ಬೆಲೆಹೆಚ್ಚಳದ ವಿರುದ್ಧ ತಾವು ಮೇ 30 ರಂದೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ.

ಈ ಮಧ್ಯೆ ಮೇ 31 ರಂದು ಪ್ರತಿಪಕ್ಷಗಳು ಕರೆ ನೀಡಿರುವ ಭಾರತ್ ಬಂದ್‌ಗೆ ಸಾಮಾಜಿಕ ಕಾರ್ಯಕರ್ತ ಅಣ್ಣಾಹಜಾರೆ ಅವರು ಶುಕ್ರವಾರ ಬೆಂಬಲ ವ್ಯಕ್ತಪಡಿಸಿದ್ದಾರೆ.

ಒಡಿಶಾದ ಬಿಜುಜನತಾದಳವೂ ಕೂಡ ಬಂದ್‌ಗೆ ತನ್ನ ಬೆಂಬಲ ನೀಡಿದ್ದು ಮೇ 31 ರಂದು ಒಡಿಶಾ ಬಂದ್‌ಗೆ ಕರೆ ನೀಡಿದೆ.

ಅತ್ತ ಜಮ್ಮು ಮತ್ತು ಕಾಶ್ಮೀರದಲ್ಲಿ ಪೆಟ್ರೋಲ್ ದರ ಏರಿಕೆ ವಿರುದ್ಧ ಪ್ರಮುಖ ಪ್ರತಿಪಕ್ಷ ಪಿಡಿಪಿ ಎರಡನೇ ದಿನವಾದ ಶುಕ್ರವಾರವೂ ಪ್ರತಿಭಟನೆಯಲ್ಲಿ ತೊಡಗಿಕೊಂಡಿದೆ.

ಪಶ್ಚಿಮಬಂಗಾಳದಲ್ಲೂ ಪ್ರತಿಭಟನೆಯನ್ನು ಮುಂದುವರೆಸಿರುವ ಎಡಪಕ್ಷಗಳು ರಾಜ್ಯಾದ್ಯಂತ 6 ದಿನಗಳ ಕಾಲದ ಪ್ರತಿಭಟನೆಗೆ ಕರೆ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.