ಶಿಲ್ಲಾಂಗ್ (ಐಎಎನ್‌ಎಸ್): ಹೊಸದಾಗಿ ನೇಮಕಗೊಂಡ ಇಬ್ಬರು ಪೊಲೀಸ್ ಪೇದೆಗಳಿಗೆ ತರಬೇತಿ ವೇಳೆ ಬಲವಂತದಿಂದ ಮೂತ್ರಪಾನ ಮಾಡಿಸಲು ಮುಂದಾದ ಮೇಘಾಲಯ ಪೊಲೀಸ್ ಬೆಟಾಲಿಯನ್‌ನ ತರಬೇತಿದಾರನೊಬ್ಬನನ್ನು ಶನಿವಾರ ಅಮಾನತು ಮಾಡಿರುವ ಸರ್ಕಾರ, ಆರೋಪಿಯ ತಪ್ಪು ಸಾಬಿತಾದರೆ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.
ಮೇಘಾಲಯದ ವೆಸ್ಟ್ ಗಾರೊ ಜಿಲ್ಲೆಯ ಗೋರ್‌ಗ್ರೆಯಲ್ಲಿರುವ 2ನೇ ಪೊಲೀಸ್ ಬೆಟಾಲಿಯನ್‌ನಲ್ಲಿ ತರಬೇತಿ ಪಡೆಯುತ್ತಿರುವ ಹಿರಿಯ ಹಾಗೂ ಕಿರಿಯ ಪೇದೆಗಳು ಸೇರಿ ಭಾನುವಾರ ಊಟ ಮಾಡುತ್ತಿದ್ದ ವೇಳೆ ತರಬೇತಿದಾರ ಪ್ರದೀಪ್ ಬೋರಾ ಅವರು ಇಬ್ಬರು ಹಿರಿಯ ಪೇದೆಗಳಿಗೆ ಕಿರಿಯ ಪೇದೆಗಳ ಮೂತ್ರ ಸೇವಿಸುವಂತೆ ಬಲವಂತ ಮಾಡಿದ್ದರು ಎನ್ನಲಾಗಿದೆ.
ಘಟನೆ ಕುರಿತಂತೆ ಮಾತನಾಡಿದ ಮೇಘಾಲಯ ಗೃಹಮಂತ್ರಿ ಎಚ್.ಡಿ.ಆರ್.ಲಿಂಗ್ಡೊ ಅವರು `ಪೊಲೀಸ್ ಪಡೆ ಇಲ್ಲವೇ ಎಲ್ಲಿಯೇ ಆಗಲಿ ಇಂತಹ ಅಮಾನವೀಯ ಶಿಕ್ಷೆ ನೀಡಲು ಯಾರಿಗೂ ಅವಕಾಶವಿಲ್ಲ~ ಎಂದು ಹೇಳಿದರು.
ಆಕಸ್ಮಿಕವಾಗಿ ಜರುಗಿದ ಈ ಘಟನೆಯ ಕುರಿತಂತೆ ಬೆಟಾಲಿಯನ್ ಕಮಾಂಡೆಂಟ್ ಅವರು ತನಿಖೆಯನ್ನು ನಡೆಸುತ್ತಿದ್ದು, ಒಂದು ವೇಳೆ ಶಿಕ್ಷಕ ತಪ್ಪಿತಸ್ಥನೆಂದು ಕಂಡುಬಂದರೆ ಆತನ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಲಿಂಗ್ಡೊ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.