ADVERTISEMENT

ಪ್ರಕರಣ ದಾಖಲಾದ ಬಳಿಕ ಹೆಸರು ಬಹಿರಂಗ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 19:30 IST
Last Updated 10 ಫೆಬ್ರುವರಿ 2011, 19:30 IST

ನವದೆಹಲಿ (ಪಿಟಿಐ): ವಿದೇಶಿ ಬ್ಯಾಂಕ್‌ಗಳಲ್ಲಿ ಕಪ್ಪುಹಣ ಹೊಂದಿರುವ ಆರೋಪಿಗಳ ವಿರುದ್ಧ ಔಪಚಾರಿಕ ಪ್ರಕರಣ ದಾಖಲಿಸಿಕೊಂಡ ಬಳಿಕ ಅವರ ಹೆಸರನ್ನು ಬಹಿರಂಗ ಪಡಿಸುವುದಾಗಿ ಸರ್ಕಾರ ಸುಪ್ರೀಂಕೋರ್ಟ್‌ಗೆ ಭರವಸೆ ನಿಡಿದೆ.ವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪುಹಣವನ್ನು ಭಾರತಕ್ಕೆ ಹಿಂದಕ್ಕೆ ತರುವಂತೆ ಸರ್ಕಾರಕ್ಕೆ ನಿರ್ದೇಶನ  ನೀಡಬೇಕು ಎಂದು ಹಿರಿಯ ವಕೀಲ ರಾಮ್ ಜೇಠ್ಮಲಾನಿ ಮತ್ತು ವಿವಿಧ ಮಾಜಿ ಅಧಿಕಾರಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಸುದರ್ಶನ ರೆಡ್ಡಿ ಅವರ ನೇತೃತ್ವದ ನ್ಯಾಯಪೀಠಕ್ಕೆ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣ್ಯಂ ವಿದೇಶಿ ಬ್ಯಾಂಕ್‌ಗಳಲ್ಲಿ ಕಪ್ಪುಹಣ ಹೊಂದಿರುವ ಆರೋಪಿಗಳಿಗೆ ಷೋಕಾಸ್ ನೋಟಿಸ್ ಜಾರಿಮಾಡಲಾಗಿದೆ.

ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಬಳಿಕ ಅವರ ಹೆಸರನ್ನು ಬಹಿರಂಗಪಡಿಸಲಾಗುವುದು ಎಂದು ತಿಳಿಸಿದರು. ಹಸನ್ ದೇಶ ಬಿಡದಂತೆ ನಿಗಾ ವಹಿಸಲು ಸೂಚನೆ: ವಿದೇಶ ಬ್ಯಾಂಕುಗಳಲ್ಲಿ ಕಪ್ಪುಹಣ ಹೊಂದಿರುವ ಆರೋಪ ಹೊತ್ತಿರುವ ಪುಣೆ ಮೂಲದ ಉದ್ಯಮಿ ಹಸನ್ ಅಲಿ ಖಾನ್ ದೇಶ ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸುಪ್ರೀಂಕೋರ್ಟ್ ಸರ್ಕಾರಕ್ಕೆ ಸೂಚಿಸಿತು.

ಹಸನ್ ಅಲಿ ಭಾರತದಲ್ಲಿಯೇ ಇದ್ದು, ಆತನ ವಿರುದ್ಧದ ಸಾಕ್ಷ್ಯಗಳನ್ನು ಸಂಗ್ರಹಿಸಲು ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಮಾಡುತ್ತಿದೆ ಎಂಬ ಮಾಹಿತಿ ಪಡೆದ ಕೋರ್ಟ್, ವಿಚಾರಣೆ ಎದುರಿಸಲು ಆತ ದೇಶದಲ್ಲಿಯೇ ಇರುವಂತೆ ಮಾಡುವುದು ನಿಮ್ಮ ಕರ್ತವ್ಯ ಎಂದು ಹೇಳಿತು. ಕಪ್ಪುಹಣ ಹೊಂದಿರುವ ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸುವ ನಿಟ್ಟಿನಲ್ಲಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜೇಠ್ಮಲಾನಿ ಅವರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಅನಿಲ್ ದಿವಾನ್ ಆರೋಪಿಸಿದರು.

ಕಪ್ಪುಹಣದ ಮಾಹಿತಿ ಬಯಸಿ ಯುಎಇ, ಬ್ರಿಟನ್, ಅಮೆರಿಕ, ಸಿಂಗಪುರ ಮತ್ತು ಹಾಂಕಾಂಗ್ ದೇಶಗಳಿಗೆ ಮಾಹಿತಿ ನೀಡುವಂತೆ ಪತ್ರ ಬರೆಯಲಾಗಿದೆ ಎಂಬ ವರದಿಯನ್ನು ಪ್ರಸ್ತಾಪಿಸಿದ ಅವರು, ಇದಕ್ಕಿಂತ ಹೆಚ್ಚಾಗಿ ಯಾವುದೇ ಕಾರ್ಯ ನಡೆದಿಲ್ಲ ಎಂದು ತಿಳಿಸಿದರು. ಸ್ವಿಟ್ಜರ್ಲೆಂಡ್‌ನ ಯುಬಿಎಸ್ ಬ್ಯಾಂಕ್‌ನಲ್ಲಿ 36 ಸಾವಿರ ಕೋಟಿ ರೂಪಾಯಿ ಕಪ್ಪುಹಣ ಇರಿಸಿರುವ ಹಸನ್ ಅಲಿ ಬಗ್ಗೆ ಮಾಹಿತಿ ಹೊರಗೆಡವಲು ಸರ್ಕಾರಕ್ಕೆಇಷ್ಟವಿಲ್ಲ. 

ಜಾರಿ ನಿರ್ದೇಶನಾಲಯ ಎರಡು ವರ್ಷಗಳಿಂದಲೂ ಆತನ ವಿರುದ್ಧ ತನಿಖೆ ನಡೆಸುತ್ತಿದ್ದರೂ ಅದರಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ. ಆತನ ವಿಚಾರಣೆಯನ್ನು ಸರ್ಕಾರ ಗಂಭೀರವಾಗಿ ನಡೆಸುತ್ತಿಲ್ಲ ಎಂದು ಅವರು ಆರೋಪಿಸಿದರು. ಹಸನ್ ಅಲಿ ಖಾತೆಗಳ ಬಗ್ಗೆ ಮಾಹಿತಿ ನೀಡುವಂತೆ ಪತ್ರ ಕಳುಹಿಸಿರುವುದನ್ನು ಒಪ್ಪಿಕೊಂಡ  ಸುಬ್ರಮಣ್ಯಂ, ಕಪ್ಪುಹಣ ಪ್ರಕರಣದಲ್ಲಿ ಸರ್ಕಾರ ಬಹುಮುಖ್ಯ ಕ್ರಮ ಕೈಗೊಂಡಿದೆ ಎಂದು ಪ್ರತಿಪಾದಿಸಿದರು. ಸರ್ಕಾರದ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿಯುಳ್ಳ ಲಕೋಟೆಯನ್ನು ಅವರು ಕೋರ್ಟ್‌ಗೆ ಒಪ್ಪಿಸಿದರು.

ಸಂಕ್ಷಿಪ್ತ ವಿಚಾರಣೆಯ ನಂತರ ಈ ಪ್ರಕರಣದಲ್ಲಿ ಹಸನ್ ಅಲಿಯನ್ನೂ ಒಬ್ಬ ಕಕ್ಷಿದಾರನನ್ನಾಗಿ ಮಾಡಬಹುದಲ್ಲವೇ ಎಂದು ಸರ್ಕಾರಕ್ಕೆ ಕೇಳಿದ ನ್ಯಾಯಪೀಠ,  ಮುಂದಿನ ವಿಚಾರಣೆಯನ್ನು ಮಾರ್ಚ್ 3ಕ್ಕೆ ಮುಂದೂಡಿತು. ಹಸನ್ ಅಲಿಯನ್ನು ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಗಳೆರಡೂ ವಿಚಾರಣೆ ನಡೆಸುತ್ತಿವೆ. ಆದರೆ ಆತನ ಖಾತೆಯಲ್ಲಿ ಹಣವಿಲ್ಲ.ಆತನಿಂದ ವಶಪಡಿಸಿಕೊಂಡ ದಾಖಲೆಗಳು ನಕಲಿಯಾಗಿದ್ದು, ಅವುಗಳ ಆಧಾರದ ಮೇಲೆ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಸ್ವಿಸ್ ಬ್ಯಾಂಕ್ ತಿಳಿಸಿರುವುದಾಗಿ ಸಚಿವ ಪ್ರಣವ್ ಮುಖರ್ಜಿ ಕಳೆದ ತಿಂಗಳು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.