ADVERTISEMENT

ಪ್ರಕರಣ ದಾಖಲು ಸಂಭವ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2010, 11:20 IST
Last Updated 30 ಡಿಸೆಂಬರ್ 2010, 11:20 IST

ನವದೆಹಲಿ (ಪಿಟಿಐ): ಈ ಹಗರಣಕ್ಕೆ ಸಂಬಂಧಿಸಿದಂತೆ ಕೆಲವು ಮಹತ್ವದ ದಾಖಲೆಗಳಿದ್ದ ಕಡತಗಳು ನಾಪತ್ತೆಯಾಗಿದ್ದು, ಅದನ್ನು ನಾಶ ಮಾಡಿರುವ ಅಥವಾ ಮರೆಮಾಚಿರುವ ಸಾಧ್ಯತೆ ಇದೆ ಎಂದು ಸಿಬಿಐ ಅಭಿಪ್ರಾಯಪಟ್ಟಿದೆ.

ಈ ಹಿನ್ನೆಲೆಯಲ್ಲಿ ಸಿಬಿಐ, ಭಾರತೀಯ ದಂಡ ಸಂಹಿತೆ (ಐಪಿಸಿ) 201 ಕಲಂ ಅನ್ವಯ (ಸಾಕ್ಷ್ಯಾಧಾರಗಳನ್ನು ನಾಪತ್ತೆ ಮಾಡುವುದು ಅಥವಾ ಸುಳ್ಳು ಮಾಹಿತಿ ನೀಡಿ ಅಪರಾಧವನ್ನು ಬಚ್ಚಿಡುವುದು) ಪ್ರಕರಣ ದಾಖಲಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸಿಡಬ್ಲ್ಯೂಜಿಯ ಟೆಂಡರ್ ಪ್ರಕ್ರಿಯೆ, ಬಜೆಟ್ ಮಂಜೂರಾತಿ, ಗುತ್ತಿಗೆ ನೀಡಿರುವ ವಿವರಗಳಿದ್ದ ಕಡತಗಳು ಕಾಮನ್ ವೆಲ್ತ್ ಕ್ರೀಡಾಕೂಟದ ಸಂಘಟನಾ ಸಮಿತಿ ಕಚೇರಿ (ಒಸಿ)ಯಿಂದ ನಾಪತ್ತೆಯಾಗಿವೆ. ಇದರಲ್ಲಿ  ಕಚೇರಿಯ ಕೆಲವು ಅಧಿಕಾರಿಗಳ ಕೈವಾಡ ಸಹ ಇರಬಹುದು. ಕಡತಗಳನ್ನು ನಾಪತ್ತೆ ಮಾಡಿರುವುದು ಮತ್ತು ಕೆಲವು ದಾಖಲೆಗಳನ್ನು ತಿದ್ದಿರುವುದಕ್ಕೆ ಸಿಬಿಐ ಬಳಿ ಮಾಹಿತಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಈ ಕುರಿತ ತನಿಖೆಗೆ ಸಂಘಟನಾ ಸಮಿತಿಯ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ. ಸಂಘಟನಾ ಸಮಿತಿ ಅಧ್ಯಕ್ಷ ಸುರೇಶ್ ಕಲ್ಮಾಡಿ ಮತ್ತು ಪ್ರಧಾನ ಕಾರ್ಯದರ್ಶಿ ಲಲಿತ್ ಭಾನೋಟ್ ಅವರು ಇನ್ನೂ ಅಧಿಕಾರಸೂತ್ರ ಹಿಡಿದಿರುವುದೇ ಇದಕ್ಕೆ ಕಾರಣ ಎಂದು ಸಿಬಿಐನ ಅಧಿಕಾರಿಗಳು ಹೇಳಿದ್ದಾರೆ. ಕಲ್ಮಾಡಿ ಅವರ ಮನೆಗಳು, ಕಚೇರಿಯನ್ನು  ಹಾಗೂ  ಆಪ್ತ ಕಾರ್ಯದರ್ಶಿಯ ಮನೆಯನ್ನು  ಡಿ. 24ರಂದು ಶೋಧಿಸಲಾಗಿತ್ತು.

ಸುರೇಶ್ ಕಲ್ಮಾಡಿ ಅವರ ಕಚೇರಿ ಮತ್ತು ದೆಹಲಿ ಹಾಗೂ ಪುಣೆಯಲ್ಲಿರುವ ಅವರ ಮನೆಗಳ ಮೇಲೆ ಸಿಬಿಐ ದಾಳಿ ನಡೆಸುವುದಕ್ಕೂ ಒಂದು ದಿನ ಮೊದಲು ಕಲ್ಮಾಡಿ ಅವರು ತಮ್ಮ ಅಧೀನ ಅಧಿಕಾರಿಗಳಿಗೆ ಕಚೇರಿಗಳನ್ನು ಮುಚ್ಚುವಂತೆ ಸುತ್ತೋಲೆ ಹೊರಡಿಸಿದ್ದರು ಮತ್ತು ಎಲ್ಲಾ ಕಡತಗಳನ್ನು ದಾಖಲೆಗಳ ಸಂಗ್ರಹಾಗಾರಕ್ಕೆ ಸಲ್ಲಿಸುವಂತೆ ಸೂಚಿಸಿದ್ದರು. ಆದರೆ ಇದು ಕ್ರೀಡಾ ಸಚಿವಾಲಯದ ಆದೇಶಕ್ಕೆ ತದ್ವಿರುದ್ಧವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT