ಚಂಡೀಗಡ (ಪಿಟಿಐ): ಶಿರೋಮಣಿ ಅಕಾಲಿ ದಳದ (ಎಸ್‌ಎಡಿ) ಶಾಸಕಾಂಗ ಪಕ್ಷದ ನಾಯಕರಾಗಿ ಪ್ರಕಾಶ್ ಸಿಂಗ್ ಬಾದಲ್ ಗುರುವಾರ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಇದರೊಂದಿಗೆ ಪಂಜಾಬ್‌ನ ಹೊಸ ಮುಖ್ಯಮಂತ್ರಿ ಆಯ್ಕೆ ಕುರಿತಂತೆ ಎದ್ದಿದ್ದ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಐದನೇ ಬಾರಿಗೆ ಮುಖ್ಯಮಂತ್ರಿಯಾಗಿ ಇದೇ 14ರಂದು ಪ್ರಕಾಶ್ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.
ಪ್ರಕಾಶ್ ಬಾದಲ್ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಪಕ್ಷದ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.
ಆದರೆ ಹೊಸ ಸಚಿವ ಸಂಪುಟದಲ್ಲಿ ಯಾರೆಲ್ಲ ಸೇರ್ಪಡೆಗೊಳ್ಳುವರು ಎಂಬುದನ್ನು ಮುಖ್ಯಮಂತ್ರಿಯೇ ನಿರ್ಧರಿಸುವರು ಎಂದು ಅವರು ಪ್ರತಿಕ್ರಿಯಿಸಿದರು.
ಅಕಾಲಿದಳ- ಬಿಜೆಪಿ ಮೈತ್ರಿಕೂಟ ಮಂಗಳವಾರ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ, ಪ್ರಕಾಶ್ ಬಾದಲ್ ತಮ್ಮ ಪುತ್ರ ಸುಖ್‌ಬೀರ್ ಅವರಿಗೆ ಅಧಿಕಾರ ಹಸ್ತಾಂತರಿಸುವರು ಎಂಬ ಊಹಾಪೋಹ ಕೇಳಿಬಂದಿತ್ತು.
ರಾಜ್ಯದ ಎಲ್ಲ ಹೆಣ್ಣು ಮಕ್ಕಳಿಗೂ ಸ್ನಾತಕೋತ್ತರ ಪದವಿವರೆಗೆ ಉಚಿತ ಶಿಕ್ಷಣ ನೀಡುವುದಾಗಿ ಪ್ರಕಾಶ್ ಸಿಂಗ್ ಈ ಸಂದರ್ಭದಲ್ಲಿ ಘೋಷಿಸಿದ್ದಾರೆ. ಈವರೆಗೆ ಪದವಿವರೆಗೆ ಮಾತ್ರ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಇತ್ತು.
1997 ಮತ್ತು 2007ರಲ್ಲಿ ಎರಡು ಬಾರಿ ಅವರು ಸಂಪೂರ್ಣ ಅವಧಿಯ ಆಡಳಿತ ನಡೆಸಿದ್ದರು. 1977- 80 ಮತ್ತು 1970- 71ರ ಅವಧಿಯಲ್ಲೂ ಮುಖ್ಯಮಂತ್ರಿಯಾಗಿದ್ದರು.
ಇದುವರೆಗೂ ಉಪ ಮುಖ್ಯಮಂತ್ರಿಯಾಗಿದ್ದ ಸುಖ್‌ಬೀರ್ ಅವರನ್ನು `ಮುಂದಿನ ಉಪ ಮುಖ್ಯಮಂತ್ರಿ ಯಾರು~ ಎಂದು ವರದಿಗಾರರು ಕೇಳಿದಾಗ, `ಅಕಾಲಿದಳ ಮತ್ತು ಬಿಜೆಪಿ ಜೊತೆಯಾಗಿ ಈ ಬಗ್ಗೆ ನಿರ್ಧರಿಸಲಿವೆ~ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.