ADVERTISEMENT

ಪ್ರತಿಧ್ವನಿಸಿದ ಬಾಬ್ರಿ ಮಸೀದಿ ವಿವಾದ: ಕಲಾಪ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 14:40 IST
Last Updated 6 ಡಿಸೆಂಬರ್ 2012, 14:40 IST

ನವದೆಹಲಿ (ಐಎಎನ್‌ಎಸ್): ಬಾಬ್ರಿ ಮಸೀದಿಯ ಧ್ವಂಸ ಪ್ರಕರಣ ಗುರುವಾರ ಮತ್ತೊಮ್ಮೆ ಸದನದಲ್ಲಿ  ಪ್ರತಿಧ್ವನಿಸಿದ ಪರಿಣಾಮ ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಯಿತು.

ಬೆಳಿಗ್ಗೆ ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಎಡಪಕ್ಷಗಳ ಸದಸ್ಯರು ಹಾಗೂ ಬಿಎಸ್‌ಪಿ ಸೇರಿದಂತೆ ಇತರೆ ಪಕ್ಷಗಳ ಸದಸ್ಯರು, `20 ವರ್ಷಗಳ ಹಿಂದೆ ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿಗಳ ವಿರುದ್ಧ ಸರ್ಕಾರವು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ' ಎಂದು ಏರುಧ್ವನಿಯಲ್ಲಿ ಆರೋಪಿಸಿ, ಸದನದಲ್ಲಿ ಗದ್ದಲವನ್ನು ಉಂಟು ಮಾಡಿ ಪ್ರತಿಭಟನೆ ನಡೆಸಿದರು.

ಸದನದಲ್ಲಿ ಗದ್ದಲದ ವಾತಾವರಣವು ಹೆಚ್ಚಿದ್ದರಿಂದ ಲೋಕಸಭಾ ಸ್ಪೀಕರ್ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು. ಆದರೆ, ಮಧ್ಯಾಹ್ನವೂ ಪರಿಸ್ಥಿತಿಯು ತಿಳಿಯಾಗಿರಲಿಲ್ಲ. ಇದರಿಂದಾಗಿ ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಯಿತು. ಕೆಲ ಮುಸ್ಲಿಂ ಪಕ್ಷದ ಸದಸ್ಯರು ಬಿಎಸ್‌ಪಿ ಮತ್ತು ಎಡಪಕ್ಷಗಳ ಸಂಸದರೊಂದಿಗೆ ಸೇರಿಕೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.

ಮಸೀದಿ ಧ್ವಂಸಕ್ಕೆ ಕಾರಣರಾದ ಆರೋಪಿಗಳ ವಿರುದ್ಧ ಸರ್ಕಾರವು ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಮತ್ತು ಶಿವಸೇನೆ ಪಕ್ಷದ ವಿರುದ್ಧ ಕೂಡ ಕೆಲ ಸಂಸದರು ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.

`ಪ್ರಶ್ನೋತ್ತರ ವೇಳೆ ನಡೆಯಲು ಅವಕಾಶ ಮಾಡಿಕೊಡಿ, ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಕ್ಕೆ ಅವಕಾಶ ನೀಡಲಾಗುವುದು' ಎಂದು ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರು ಸದಸ್ಯರಲ್ಲಿ ಮನವಿ ಮಾಡಿಕೊಂಡರೂ ಸದನದಲ್ಲಿ ಗದ್ದಲವು ಮುಂದುವರೆದಿತ್ತು. ಇದರಿಂದ ಸ್ಪೀಕರ್ ಕಲಾಪವನ್ನು ಮುಂದೂಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.