ADVERTISEMENT

ಪ್ರತಿಮೆಗಳಿಗೆ ಮುಸುಕು: ಅವಧಿಯಲ್ಲಿ ಪೂರ್ಣ

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 19:30 IST
Last Updated 9 ಜನವರಿ 2012, 19:30 IST

ಲಖನೌ (ಪಿಟಿಐ):  ಉತ್ತರಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಮತ್ತು ಅವರ ಪಕ್ಷದ ಚಿಹ್ನೆಯ ಪ್ರತಿಮೆಗಳಿಗೆ ಮುಸುಕು ಹಾಕುವಂತೆ ಚುನಾವಣಾ ಆಯೋಗ ಸೂಚನೆ ನೀಡಿ ಎರಡು ದಿನಗಳಾಗಿದ್ದರೂ ಲಖನೌದಲ್ಲಿ ಈ ಕಾರ್ಯ ಇನ್ನಷ್ಟೆ ಆರಂಭ ಆಗಬೇಕಿದೆ.

ಭಾನುವಾರ ನೊಯ್ಡಾದಲ್ಲಿ ನೌಕರರು ಕೆಲವು ಪ್ರತಿಮೆಗಳಿಗೆ ತರಾತುರಿಯಲ್ಲಿ ಮುಸುಕು ಹಾಕಿದರು. ಆದರೆ ಈ ಕುರಿತ ಆದೇಶ ನಂತರದಲ್ಲಿ ತಡವಾಗಿ ತಲುಪಿತು ಎಂದು ಅಧಿಕಾರಿಗಳು ಹೇಳಿದ್ದಾರೆ. `ಆಯೋಗದ ನಿರ್ದೇಶನದಂತೆ ಪ್ರತಿಮೆಗಳಿಗೆ ಮುಸುಕು ಹೊದಿಸುವ ಕಾರ್ಯ ನಿಗದಿತ ಅವಧಿಯಲ್ಲಿ ಅಂದರೆ ಬುಧವಾರದೊಳಗೆ ಪೂರ್ಣಗೊಳ್ಳುವುದು~ ಎಂದು ಗೌತಮ್ ಬುದ್ಧ ನಗರ ಜಿಲ್ಲಾಧಿಕಾರಿ ಹೃದೇಶ್ ಕುಮಾರ್ ತಿಳಿಸಿದ್ದಾರೆ.

ನೊಯ್ಡಾದ ರಾಷ್ಟ್ರೀಯ ದಲಿತ ಪ್ರೇರಣಾ ಸ್ಥಳದಲ್ಲಿ ಸುಮಾರು 52 ಆನೆಗಳ ಪ್ರತಿಮೆ ಮತ್ತು ಮಾಯಾವತಿ ಅವರ ಎರಡು ಪ್ರತಿಮೆಗಳು ಇವೆ. ಗೌತಮ್ ಬುದ್ಧ ವಿಶ್ವವಿದ್ಯಾಲಯದಲ್ಲಿ ಕೂಡ ಆನೆಗಳ 10 ಪ್ರತಿಮೆಗಳು ಮತ್ತು ಮಾಯಾವತಿ ಅವರ ಒಂದು ಪ್ರತಿಮೆ ಇದೆ ಎಂದು ಕುಮಾರ್ ಹೇಳಿದ್ದಾರೆ. ಲಖನೌದಲ್ಲಿ ಮಂಗಳವಾರದಿಂದ ಈ ಕಾರ್ಯ ಆರಂಭಿಸಿ ನಿಗದಿತ ಅವಧಿಯಲ್ಲಿ ಪೂರ್ಣ ಗೊಳಿಸಲಾಗುವುದು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ವಿಧಾನಸಭೆ ಚುನಾವಣೆ ಪೂರ್ಣಗೊಳ್ಳುವವರೆಗೆ ರಾಜ್ಯದ ವಿವಿಧೆಡೆ ಇರುವ ಮಾಯಾವತಿ ಅವರ ಪ್ರತಿಮೆ ಮತ್ತು ಅವರ ಪಕ್ಷದ ಚಿಹ್ನೆಯಾದ `ಆನೆ~ ಪ್ರತಿಮೆಗಳಿಗೆ ಮುಸುಕು ಹೊದಿಸಬೇಕು ಎಂದು ಚುನಾವಣಾ ಆಯೋಗ ಶನಿವಾರ ಆದೇಶ ನೀಡಿತ್ತು.

ಆಯೋಗದ ಆದೇಶ ಪ್ರಶ್ನಿಸಿ ಪಿಐಎಲ್
ಲಖನೌ (ಪಿಟಿಐ):
ಮಾಯಾವತಿ ಮತ್ತು ಬಿಎಸ್‌ಪಿ ಪಕ್ಷದ ಚಿಹ್ನೆ `ಆನೆ~ ಪ್ರತಿಮೆಗಳಿಗೆ ಮುಸುಕು ಹೊದಿಸಬೇಕೆಂಬ ಚುನಾವಣಾ ಆಯೋಗದ ಆದೇಶವನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಸೋಮವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

`ಚುನಾವಣಾ ಆಯೋಗದ ಆದೇಶವನ್ನು ವಿಶೇಷ ಎಂಬಂತೆ ಪರಿಗಣಿಸಲಾಗುತ್ತಿದೆ. ಎಲ್ಲಾ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಸಮಾನ ನೀತಿ ಅನುಸರಿಸಬೇಕೆಂಬ ಮಾದರಿ ನೀತಿ ಸಂಹಿತೆಯೇ ಇದೆ~ ಎಂದು ದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಷಿ ಚಾನೆಲ್‌ವೊಂದಕ್ಕೆ ತಿಳಿಸಿದ್ದಾರೆ.

ಆನೆಯು ಹಿಂದೂಗಳ ದೇವರಾದ ಗಣೇಶನನ್ನು ಪ್ರತಿನಿಧಿಸುತ್ತದೆ. ಪ್ರತಿಮೆಗಳಿಗೆ ಮುಸುಕು ಹೊದಿಸುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಅಲಹಾಬಾದ್‌ನಲ್ಲಿ ಸಾಮಾಜಿಕ ಕಾರ್ಯಕರ್ತ ಧೀರಜ್ ಸಿಂಗ್ ಈ ಅರ್ಜಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT