ADVERTISEMENT

ಪ್ರತ್ಯೇಕ ಗೂರ್ಖಾಲ್ಯಾಂಡ್‌ಗೆ ಹೆಚ್ಚಿದ ಬೇಡಿಕೆ

ಪಿಟಿಐ
Published 18 ಜೂನ್ 2017, 19:30 IST
Last Updated 18 ಜೂನ್ 2017, 19:30 IST
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳೆಯರು
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳೆಯರು   

ದಾರ್ಜಿಲಿಂಗ್‌ (ಪಶ್ಚಿಮ ಬಂಗಾಳ): ಪೊಲೀಸರೊಂದಿಗೆ ಶನಿವಾರ ನಡೆದ ಸಂಘರ್ಷದಲ್ಲಿ ಮೃತಪಟ್ಟ  ಕಾರ್ಯಕರ್ತನ ಶವದೊಂದಿಗೆ ಗೂರ್ಖಾ ಜನಮುಕ್ತಿ ಮೋರ್ಚಾದ (ಜಿಜೆಎಂ) ಕಾರ್ಯಕರ್ತರು ಭಾನುವಾರ ಬೃಹತ್‌ ರ್‍್ಯಾಲಿ ನಡೆಸಿದರು.

ಕಪ್ಪುಧ್ವಜಗಳನ್ನು ಹಿಡಿದು ಸೆಂಟ್ರಲ್‌ ಚೌಕ್‌ ಬಜಾರ್‌ನಲ್ಲಿ ಸೇರಿದ್ದ ಸಾವಿರಾರು ಕಾರ್ಯಕರ್ತರು ಪ್ರತ್ಯೇಕ ಗೂರ್ಖಾಲ್ಯಾಂಡ್‌ ರಾಜ್ಯಕ್ಕಾಗಿ ಘೋಷಣೆ ಕೂಗಿದರು. ಜಿಜೆಎಂ ಕಾರ್ಯಕರ್ತರು ಹೋರಾಟ ಆರಂಭಿಸಿದ ನಂತರ ಸಂಭವಿಸಿದ ಮೊದಲ ಸಾವು ಇದಾಗಿದೆ.

ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಶನಿವಾರ ನಡೆದ ಮಾರಾಮಾರಿಯಿಂದಾಗಿ ಡಾರ್ಜಿಲಿಂಗ್‌ ರಣರಂಗವಾಗಿ ಮಾರ್ಪಟ್ಟಿತ್ತು.

ADVERTISEMENT

ಹೋರಾಟ ಹಿಂಸಾಚಾರಕ್ಕೆ ತಿರುಗಿದ ನಂತರ ಸೇನೆಯನ್ನು ನಿಯೋಜಿಸಲಾಗಿದ್ದು ಪೊಲೀಸರು ಮತ್ತು ಯೋಧರು ಕಣಿವೆಯಲ್ಲಿ ಪಥಸಂಚಲನ ನಡೆಸಿದರು. ಅನೇಕ ವರ್ಷ ಶಾಂತವಾಗಿದ್ದ ಕಣಿವೆ ಕಳೆದ ಹತ್ತು ದಿನಗಳಿಂದ   ರಣರಂಗವಾಗಿದ್ದು  ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ. 

ಔಷಧದ ಅಂಗಡಿಗಳನ್ನು ಬಿಟ್ಟು ಉಳಿದೆಲ್ಲ ಅಂಗಡಿ, ವಾಣಿಜ್ಯ ಮಳಿಗೆ, ಹೋಟೆಲ್‌ಗಳು ಬಾಗಿಲು ಮುಚ್ಚಿದ್ದು, ಪರಿಸ್ಥಿತಿ ಇನ್ನೂ ತ್ವೇಷಮಯವಾಗಿದೆ.

ಶಾಂತಯುತವಾಗಿ ಹೋರಾಟ ನಡೆಸುತ್ತಿದ್ದ ಜಿಜೆಎಂನ ಇಬ್ಬರು ಕಾರ್ಯಕರ್ತರನ್ನು   ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪಕ್ಷದ ನಾಯಕರು ಆರೋಪಿಸಿದ್ದಾರೆ.   ಈ ಆರೋಪ ತಳ್ಳಿ ಹಾಕಿರುವ ಪೊಲೀಸರು, ಜಿಜೆಎಂ ಕಾರ್ಯಕರ್ತರು ಸಂಘರ್ಷದಲ್ಲಿ  ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ಮಾತುಕತೆಗೆ ಕೇಂದ್ರ ಆಹ್ವಾನ: ‘ಹೋರಾಟ ಬಿಟ್ಟು ಮಾತುಕತೆಗೆ ಬನ್ನಿ’  ಎಂದು ಕೇಂದ್ರ ಸರ್ಕಾರವು ಪ್ರತ್ಯೇಕ ಗೂರ್ಖಾಲ್ಯಾಂಡ್‌ ರಾಜ್ಯಕ್ಕಾಗಿ ಹೋರಾಟ ನಡೆಸಿರುವ ಗೂರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ನಾಯಕರಿಗೆ ಆಹ್ವಾನ ನೀಡಿದೆ.

‘ಹಿಂಸೆಯೊಂದೇ ಮಾರ್ಗವಲ್ಲ. ಸೌಹಾರ್ದಯುತ ಮಾತುಕತೆಯ ಮೂಲಕ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸಬಹುದು’ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಸಲಹೆ ಮಾಡಿದ್ದಾರೆ.

ಹಿಂಸಾತ್ಮಕ ಮಾರ್ಗದಿಂದ ಯಾವ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಸೌಹಾರ್ದಯುತ ಮಾತುಕತೆ ಮೂಲಕ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಾಧ್ಯ.
-ರಾಜನಾಥ್‌ ಸಿಂಗ್‌,ಕೇಂದ್ರ ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.