ADVERTISEMENT

ಪ್ರತ್ಯೇಕ ತೆಲಂಗಾಣ ಚಳವಳಿ: ಮತ್ತೊಬ್ಬ ವಿದ್ಯಾರ್ಥಿ ಆತ್ಮಾಹುತಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2012, 19:30 IST
Last Updated 25 ಮಾರ್ಚ್ 2012, 19:30 IST

ಹೈದರಾಬಾದ್: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಆಗ್ರಹಿಸಿ ಆತ್ಮಾಹುತಿ ಮಾಡಿಕೊಂಡ ಎಂಬಿಎ ವಿದ್ಯಾರ್ಥಿಯ ಅಂತಿಮ ಸಂಸ್ಕಾರದ ವೇಳೆ ಭಾವೋದ್ವೇಗಕ್ಕೆ ಒಳಗಾದ ಪ್ರತಿಭಟನಾಕಾರರು, ಟಿಡಿಪಿ ಮತ್ತು ಕಾಂಗ್ರೆಸ್ ನಾಯಕರ ಮನೆ-ಕಚೇರಿಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಭಾನುವಾರ ನಡೆಯಿತು.

ಕಾಕತೀಯ ವಿ.ವಿಯಲ್ಲಿ ಎಂಬಿಎ ಓದುತ್ತಿದ್ದ 21 ವರ್ಷದ ಲುನಾವತ್ ಭೋಜ್ಯ ನಾಯ್ಕ ಅವರು ವಿ.ವಿಯ ಕಲಾ ಕಾಲೇಜಿನ ಮುಂಭಾಗದಲ್ಲಿ ಶನಿವಾರ ಮಧ್ಯಾಹ್ನ `ಜೈ ತೆಲಂಗಾಣ~ ಎಂಬ ಘೋಷಣೆ ಕೂಗಿ ಆತ್ಮಾಹುತಿ ಮಾಡಿಕೊಂಡಿದ್ದರು. ತೆಲಂಗಾಣ ಚಳವಳಿಯಲ್ಲಿ ಸುಮಾರು 6 ತಿಂಗಳ ಬಳಿಕ ನಡೆದ ಮತ್ತೊಂದು ಆತ್ಮಾಹುತಿ ಪ್ರಕರಣ ಇದಾಗಿದೆ.

ಭೋಜ್ಯ ನಾಯ್ಕ ಶವವನ್ನು ಎಂಜಿಎಂ ಆಸ್ಪತ್ರೆಯಿಂದ ಮೆರವಣಿಗೆ ಮೂಲಕ ಅವರ ಹುಟ್ಟೂರಿಗೆ ತೆಗೆದುಕೊಂಡು ಹೋಗಲಾಯಿತು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಹಾಗೂ ಟಿಆರ್‌ಎಸ್ ಸದಸ್ಯರು ಟಿಡಿಪಿ ಮುಖಂಡ ಇ.ದಯಾಕರ್ ರಾವ್, ಐಟಿ ಸಚಿವ ಪೊನ್ನಲ ಲಕ್ಷ್ಮಯ್ಯ ಅವರ ಮನೆ ಮೇಲೆ ಕಲ್ಲು ತೂರಿದರು. ವಾರಂಗಲ್ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿ ಮೇಲೂ ದಾಳಿ ನಡೆಸಿದರು. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದರು. ರಾಜೀವ್ ಗಾಂಧಿ ಪ್ರತಿಮೆಗೆ ಚಪ್ಪಲಿ ಹಾರ ಹಾಕಿ ಉದ್ರಿಕ್ತರು ಆಕ್ರೋಶ ವ್ಯಕ್ತಪಡಿಸಿದರು.

ಭೋಜ್ಯ ನಾಯ್ಕ ಅಂತಿಮ ಯಾತ್ರೆಯಲ್ಲಿ ಟಿಆರ್‌ಎಸ್ ಅಧ್ಯಕ್ಷ ಕೆ.ಚಂದ್ರಶೇಖರ್ ರಾವ್, ಬಿಜೆಪಿ ಅಧ್ಯಕ್ಷ ಜಿ.ಕಿಶನ್ ರೆಡ್ಡಿ, ತೆಲಂಗಾಣ ಜೆಎಸಿ ಅಧ್ಯಕ್ಷ ಪ್ರೊ. ಕೆ.ಕೋದಂಡರಾಂ ರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.