ADVERTISEMENT

ಪ್ರಧಾನಿಯಿಂದ ದೇಶದ ಭದ್ರತಾ ವ್ಯವಸ್ಥೆಯ ಪರಾಮರ್ಶೆ

​ಪ್ರಜಾವಾಣಿ ವಾರ್ತೆ
Published 16 ಮೇ 2011, 19:30 IST
Last Updated 16 ಮೇ 2011, 19:30 IST

ನವದೆಹಲಿ (ಪಿಟಿಐ): ಒಸಾಮ ಬಿನ್ ಲಾಡೆನ್ ಹತ್ಯೆ ಮತ್ತು ನಂತರದ ಪಾಕಿಸ್ತಾನದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ದೇಶದ ಒಟ್ಟಾರೆ ಭದ್ರತಾ ಸ್ಥಿತಿಯ ಬಗ್ಗೆ ಸೇನೆಯ ಹಿರಿಯ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು.

ಪ್ರಧಾನಿ ನಿವಾಸದಲ್ಲಿ ನಡೆದ 90 ನಿಮಿಷಗಳ ಸಭೆಯಲ್ಲಿ ರಕ್ಷಣಾ ಸಚಿವ ಎ.ಕೆ.ಅಂಟನಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್, ಮೂರೂ ಸಶಸ್ತ್ರ ಪಡೆಗಳ ಮುಖ್ಯಸ್ಥರು, ರಕ್ಷಣಾ ಇಲಾಖೆಯ ಕಾರ್ಯದರ್ಶಿ ಪ್ರದೀಪ್ ಕುಮಾರ್ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ ವಿ.ಕೆ. ಸಾರಸ್ವತ್ ಪಾಲ್ಗೊಂಡಿದ್ದರು.

ಈ ಹಿರಿಯ ಅಧಿಕಾರಿಗಳು ಪ್ರಧಾನಿ ಅವರಿಗೆ ದೇಶದ ಭದ್ರತಾ ವ್ಯವಸ್ಥೆ ಬಗ್ಗೆ ಸಂಪೂರ್ಣ ಚಿತ್ರಣ ನೀಡಿದರಲ್ಲದೆ ಪಾಕಿಸ್ತಾನದ ಸ್ಥಿತಿ ಮತ್ತು ಚೀನಾ-ಭಾರತ ಗಡಿಯಲ್ಲಿಯ ಬೆಳವಣಿಗೆಗಳ ಬಗ್ಗೆಯೂ ಮಾಹಿತಿ ನೀಡಿದರು.ಕರಾವಳಿಯಲ್ಲಿ ಮಾಡಲಾಗಿರುವ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಧಾನಿ ಅವರಿಗೆ ಆಂಟನಿ ವಿವರ ನೀಡಿದರು.

ಪಾಕ್ ಎಚ್ಚರಿಕೆಗೆ ನಿರ್ಲಕ್ಷ್ಯ: ಅಮೆರಿಕವು ಅಬೋಟೊಬಾದ್‌ನಲ್ಲಿ ನಡೆಸಿದ ದಾಳಿಯ ಮಾದರಿಯಲ್ಲಿ ಭಾರತವೇನಾದರೂ ದಾಳಿ ಮಾಡಿದರೆ ತಕ್ಕ ಪ್ರತ್ಯುತ್ತರ ನೀಡಲಾಗುತ್ತದೆ ಎಂಬ ಐಎಸ್‌ಐ ಮುಖ್ಯಸ್ಥ ಅಹಮದ್ ಶುಜಾ ಪಾಷಾ ಅವರ ಎಚ್ಚರಿಕೆಯನ್ನು ಭಾರತ ಸಂಪೂರ್ಣವಾಗಿ ನಿರ್ಲಕ್ಷಿಸಿದೆ.

ಪಾಷಾ ಅವರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಭಾರತದ ವಿರುದ್ಧ ಈ ರೀತಿಯ ಹುಸಿ ಆರೋಪಗಳನ್ನು ಮಾಡುತ್ತಿದ್ದಾರೆ ಹಾಗೂ ಲಾಡೆನ್ ಅಡಗುತಾಣದ ಮೇಲೆ ಅಮೆರಿಕ ಯೋಧರು ದಾಳಿ ಮಾಡುವ ವಿಚಾರ ತಿಳಿಯದೇ ಹತಾಶರಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪ್ರತಿದಿನ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಭಯೋತ್ಪಾದಕರ ದಾಳಿಯ ಬಗ್ಗೆ ಕ್ರಮ ತೆಗೆದುಕೊಳ್ಳುವ ಬದಲು ಭಾರತದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದೂ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.