ADVERTISEMENT

ಪ್ರಧಾನಿ ಪಟ್ಟಕ್ಕೆ ರಾಹುಲ್ ಸೂಕ್ತ: ಸಿಂಗ್

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 19:59 IST
Last Updated 7 ಸೆಪ್ಟೆಂಬರ್ 2013, 19:59 IST

ಪ್ರಧಾನಿಯವರ ವಿಶೇಷ ವಿಮಾನ (ಪಿಟಿಐ): `ಪ್ರಧಾನಮಂತ್ರಿ ಹುದ್ದೆಗೆ ರಾಹುಲ್ ಗಾಂಧಿ ಉತ್ತಮ ಆಯ್ಕೆಯಾಗಿದ್ದು, ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ನಿರ್ವಹಿಸಲು ಸಿದ್ಧ' ಎಂದು ಹೇಳುವ ಮೂಲಕ ಪ್ರಧಾನಿ ಮನಮೋಹನ್ ಸಿಂಗ್ ಅವರು 2014ರ ಚುನಾವಣೆ ಬಳಿಕ ನಡೆಯಲಿರುವ ಪ್ರಧಾನಿ ಸ್ಥಾನದ ಸ್ಪರ್ಧಾ ಕಣದಿಂದ ತಾವಾಗಿಯೇ ಹಿಂದೆ ಸರಿದಿದ್ದಾರೆ.

ರಷ್ಯಾದ ಸೆಂಟ್ ಪೀಟರ್ಸ್‌ಬರ್ಗ್‌ನಲ್ಲಿ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಿ ವಿಶೇಷ ವಿಮಾನದಲ್ಲಿ ಶನಿವಾರ ಭಾರತಕ್ಕೆ  ಹಿಂತಿರುಗುವ ಸಂದರ್ಭದಲ್ಲಿ ತಮ್ಮ ಜೊತೆಗಿದ್ದ ಸುದ್ದಿಗಾರರಿಗೆ ಹೇಳಿದ್ದಾರೆ.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪಕ್ಷದ ಚುಕ್ಕಾಣಿ ಹಿಡಿಯಬೇಕೆಂದು ಪಕ್ಷದ ಅನೇಕ ಮುಖಂಡರು ಇಚ್ಛೆ ವ್ಯಕ್ತಪಡಿಸಿದ್ದು, ಮೂರನೇ ಅವಧಿಗೂ ಮುಂದುವರೆಯಲು ನಿಮಗೆ ಸಾಧ್ಯವಾಗಬಹುದೇ ಎಂಬ ಸುದ್ದಿಗಾರರ ಪ್ರಶ್ನೆಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ. `ಲೋಕಸಭೆ ಚುನಾವಣೆ ನಂತರ ಪ್ರಧಾನಿ ಸ್ಥಾನಕ್ಕೆ ರಾಹುಲ್ ಸೂಕ್ತ ವ್ಯಕ್ತಿ ಎಂದು ನಾನು ಮೊದಲಿನಿಂದಲೂ ಹೇಳುತ್ತ ಬಂದಿದ್ದೇನೆ. ರಾಹುಲ್ ನಾಯಕತ್ವದಲ್ಲಿ ಕೆಲಸ ಮಾಡಲು ನನಗೆ ಬಹಳದ ಸಂತೋಷದ ವಿಷಯ' ಎಂದಿದ್ದಾರೆ.

`ರಾಜಕೀಯದಲ್ಲಿ ಯಾರು ಶಾಶ್ವತ ಶತ್ರುಗಳು ಅಲ್ಲ ಮತ್ತು ಮಿತ್ರರು ಅಲ್ಲ. ರಾಜಕಾರಣದಲ್ಲಿ ಒಂದು ವಾರ ದೀರ್ಘ ಸಮಯವಿದ್ದಂತೆ. ಯಾವುದೇ ರೀತಿಯ ಮೈತ್ರಿಯನ್ನು ನಾನು ತಳ್ಳಿ ಹಾಕುವುದಿಲ್ಲ' ಎಂದು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಬೆಂಬಲ ಯಾಚಿಸುತ್ತೀರಾ ಎಂಬ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ. ಒಂದು ಕಾಲದಲ್ಲಿ ಮಮತಾ ಅವರೂ ಕಾಂಗ್ರೆಸ್ ಪಕ್ಷದ ಗೌರವಾನ್ವಿತ ಸದಸ್ಯರಾಗಿದ್ದರು ಎಂದಿದ್ದಾರೆ.

ಹಾಗಿದ್ದರೆ, ಇಷ್ಟು ದಿನ ಮನಮೋಹನ್ ಸಿಂಗ್ ಅವರು ಕೆಲಸ ಮಾಡಿದ್ದು ರಾಹುಲ್ ಕೈ ಕೆಳಗೆ ಅಲ್ಲವೇನು?
-ಟ್ವಿಟ್ಟರ್‌ನಲ್ಲಿ ಗುಜರಾತ್ ಸಿಎಂ ಮೋದಿ ವ್ಯಂಗ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.