ADVERTISEMENT

ಪ್ರಧಾನಿ ಪತ್ರಕ್ಕೆ ಅಣ್ಣಾ ತೃಪ್ತಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2011, 19:30 IST
Last Updated 16 ಅಕ್ಟೋಬರ್ 2011, 19:30 IST

ರಾಳೇಗಣ ಸಿದ್ಧಿ, (ಪಿಟಿಐ): ಮುಂಬರುವ ಸಂಸತ್ ಚಳಿಗಾಲ ಅಧಿವೇಶನದಲ್ಲಿ ಪ್ರಬಲ ಲೋಕಪಾಲ ಮಸೂದೆಯನ್ನು ಜಾರಿಗೊಳಿಸುವುದಾಗಿ ಯುಪಿಎ ಭರವಸೆ ನೀಡಿದಲ್ಲಿ ತಾವು ಕಾಂಗ್ರೆಸ್ ಜತೆ ಸೇರಿ ಕೆಲಸ ಮಾಡಲು ಸಿದ್ಧ ಎಂದು ಸಾಮಾಜಿಕ ಹೋರಾಟಗಾರ ಹಾಗೂ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಅವರು ಭರವಸೆ ನೀಡಿದ್ದಾರೆ.

ಒಂದು ವೇಳೆ ಚಳಿಗಾಲ ಅಧಿವೇಶನದಲ್ಲಿ ಮಸೂದೆಯನ್ನು ಜಾರಿ ಮಾಡದಿದ್ದ ಪಕ್ಷದಲ್ಲಿ ಮುಂಬರುವ ಉತ್ತರ ಪ್ರದೇಶ ಮತ್ತು ಇತರ ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಹಿಸಾರ್ ಉಪ ಚುನಾವಣೆಯಲ್ಲಿ ಮಾಡಿದಂತೆ ಕಾಂಗ್ರೆಸ್ ವಿರುದ್ಧ ಪ್ರಚಾರ ಕೈಗೊಳ್ಳುವುದಾಗಿ ಅವರು ಇದೇ ವೇಳೆ ಎಚ್ಚರಿಕೆ ನೀಡಿದರು.

ಉದ್ದೇಶಿತ `ಮೌನವ್ರತ~ ಆರಂಭಿಸುವ ಮೊದಲು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ತಮಗೆ ಬರೆದ ಪತ್ರದಿಂದ ಲೋಕಪಾಲ ಮಸೂದೆ ಜಾರಿಗೆ ತರುವ ವಿಶ್ವಾಸ ಮೂಡಿರುವುದಾಗಿ 74 ವರ್ಷದ ಗಾಂಧಿವಾದಿ ಭರವಸೆ ವ್ಯಕ್ತಪಡಿಸಿದರು. 

ADVERTISEMENT

ಸರ್ಕಾರ ಈ ಮೊದಲು ನೀಡಿದ ಭರವಸೆಯಂತೆ ಚುನಾವಣಾ ಸುಧಾರಣೆ, ಅಧಿಕಾರ ವಿಕೇಂದ್ರೀಕರಣ, ಗ್ರಾಮಸಭೆಗಳಿಗೆ ಹೆಚ್ಚಿನ ಅಧಿಕಾರ ಸೇರಿದಂತೆ ಲೋಕಪಾಲ ಮಸೂದೆ ಜಾರಿಗೆ ತಂದಲ್ಲಿ ಕಾಂಗ್ರೆಸ್ ಪಕ್ಷವನ್ನು ವಿರೋಧಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.

`ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರನ್ನು ಟಿ.ವಿ ಪರದೆಯ ಮೇಲೆ ಮಾತ್ರ ನೋಡಿದ್ದೇನೆಯೇ ಹೊರತು ಜೀವಮಾನದಲ್ಲಿ ಎಂದಿಗೂ ಅವರೊಂದಿಗೆ ಮುಖತಃ ಭೇಟಿಯಾಗಿಲ್ಲ ಹಾಗೂ ಮಾತನಾಡಿಲ್ಲ. ಮೇಲಾಗಿ ನಾನು ಕಾಂಗ್ರೆಸ್ ವಿರೋಧಿ ಅಲ್ಲ. ಹಿಸಾರ್ ಉಪ ಚುನಾವಣೆಯಲ್ಲಿ ಬಿಜೆಪಿ ಅಥವಾ ಆರ್‌ಎಸ್‌ಎಸ್ ಪರವಾಗಿಯೂ ಕೆಲಸ ಮಾಡಿಲ್ಲ.~ ಎಂದು ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದರು.

`ಆರ್‌ಎಸ್‌ಎಸ್, ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಒಗ್ಗೂಡಿ ಈ ಅಣ್ಣಾನ ತೇಜೋವಧೆಗೆ ಸಂಚು ರೂಪಿಸಿವೆ. ರಾಜಕೀಯ ಪಕ್ಷಗಳು ಯಾರ ಮೇಲಾದರೂ ಕತ್ತಿ ಹಿರಿಯಲು ಸದಾ ಸನ್ನದ್ಧವಾಗಿರುತ್ತವೆ. ಆರ್‌ಎಸ್‌ಎಸ್ ಅಥವಾ ಬಿಜೆಪಿ ಜತೆ ನನ್ನ ಯಾವ ವ್ಯವಹಾರ, ಸಂಪರ್ಕವೂ ಇಲ್ಲ. ಆದರೆ, ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಆರೋಪ ಮಾಡಲಾಗುತ್ತಿದೆ~ ಎಂದು ಹಜಾರೆ ಅಸಮಾಧಾನ ವ್ಯಕ್ತಪಡಿಸಿದರು.

ಹಜಾರೆ ಮನದ ಮಾತು...
* ಅಣ್ಣಾ ತೇಜೋವಧೆಗೆ ಆರ್‌ಎಸ್‌ಎಸ್, ಬಿಜೆಪಿ, ಕಾಂಗ್ರೆಸ್ ಸಂಚು

* ಆರ್‌ಎಸ್‌ಎಸ್, ಬಿಜೆಪಿ ಜತೆ ಸಂಪರ್ಕವಿಲ್ಲ; ಕಾಂಗ್ರೆಸ್ ವಿರೋಧಿ ಅಲ್ಲ

* ಪ್ರಧಾನಿ ಪತ್ರದಿಂದ ಹೆಚ್ಚಿದ ವಿಶ್ವಾಸ

* ಸ್ನೇಹ ಅಥವಾ ವೈರತ್ವಕ್ಕೆ ಚಳಿಗಾಲ ಅಧಿವೇಶನದ ಗಡುವು

* ಮೋಹನ್ ಭಾಗ್ವತ್‌ರನ್ನು ನೋಡಿಯೇ ಇಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.