ADVERTISEMENT

ಪ್ರಧಾನಿ ಭದ್ರತೆ ಮುಖ್ಯವಾದದ್ದು ಎಂದ ‘ಮೆಟ್ರೊ ಮ್ಯಾನ್’ ಶ್ರೀಧರನ್

ಏಜೆನ್ಸೀಸ್
Published 15 ಜೂನ್ 2017, 10:08 IST
Last Updated 15 ಜೂನ್ 2017, 10:08 IST
‘ಮೆಟ್ರೊ ಮ್ಯಾನ್’ ಖ್ಯಾತಿಯ ಇ. ಶ್ರೀಧರನ್
‘ಮೆಟ್ರೊ ಮ್ಯಾನ್’ ಖ್ಯಾತಿಯ ಇ. ಶ್ರೀಧರನ್   

ತಿರುವನಂತಪುರ: ಕೇರಳದ ಕೊಚ್ಚಿ ಮೆಟ್ರೊ ರೈಲು ಉದ್ಘಾಟನಾ ಸಮಾರಂಭದ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಪ್ರಯಾಣಿಸುವ ಗಣ್ಯರ ಪಟ್ಟಿಯಲ್ಲಿ ‘ಮೆಟ್ರೊ ಮ್ಯಾನ್’ ಖ್ಯಾತಿಯ ಇ. ಶ್ರೀಧರನ್ ಹೆಸರು ಕೈಬಿಟ್ಟಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶ್ರೀಧರನ್ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆ ಮುಖ್ಯವಾದದ್ದು’ ಎಂದು ಹೇಳಿದ್ದಾರೆ.

ಕೊಚ್ಚಿಯಲ್ಲಿ ವರದಿಗಾರರ ಜತೆ ಮಾತನಾಡಿದ ಅವರು, ‘ವಿಷಯವನ್ನು ವಿವಾದವನ್ನಾಗಿಸುವ ಅಗತ್ಯವಿಲ್ಲ. ಪ್ರಧಾನಿಯವರ ಭದ್ರತೆ ಮುಖ್ಯವಾದ ವಿಚಾರ. ಭದ್ರತಾ ಸಂಸ್ಥೆ ಹೇಳಿದ ಪ್ರಕಾರವೇ ಅವರಿಗೆ ಭದ್ರತೆ ಒದಗಿಸಲಾಗುತ್ತದೆ. ಪಟ್ಟಿಯಲ್ಲಿ ಹೆಸರಿಲ್ಲದಿರುವುದರಿಂದ ನನಗೆ ಬೇಸರವಾಗಿಲ್ಲ’ ಎಂದು ಹೇಳಿದ್ದಾರೆ.

ದೆಹಲಿ ಮೆಟ್ರೊ ರೈಲು ನಿಗಮದ ಹಿರಿಯ ಸಲಹೆಗಾರರಾಗಿರುವ ಇ. ಶ್ರೀಧರನ್ ಕೊಚ್ಚಿ ಮೆಟ್ರೊದ ಪ್ರಮುಖ ಸಲಹೆಗಾರರೂ ಆಗಿದ್ದಾರೆ. ದೆಹಲಿ, ಕೋಲ್ಕತ್ತ, ಕೊಂಕಣ್ ರೈಲ್ವೆ ಯೋಜನೆಗಳಲ್ಲಿ ಪ್ರಮುಖ ಪಾತ್ರ ವಹಿಸಿರುವ ಇವರು ‘ಮೆಟ್ರೊ ಮ್ಯಾನ್’ ಎಂದೇ ಪ್ರಸಿದ್ಧರು. ಕೊಚ್ಚಿ ಮೆಟ್ರೊದ ರೂವಾರಿಯೂ ಹೌದು.

ADVERTISEMENT

ಶನಿವಾರ ಉದ್ಘಾಟನೆ: ಕೊಚ್ಚಿ ಮೆಟ್ರೊ ರೈಲು ಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಜೂನ್ 17) ಚಾಲನೆ ನೀಡಲಿದ್ದಾರೆ.

ವಿವಾದ ಯಾಕೆ?: ಮೆಟ್ರೊ ರೈಲಿನ ಮೊದಲ ಯಾನದಲ್ಲಿ ಪ್ರಧಾನಿ ಮೋದಿ ಅವರ ಜತೆ ಪ್ರಯಾಣಿಸಲಿರುವ ಗಣ್ಯರ ಪಟ್ಟಿಯಲ್ಲಿ ಶ್ರೀಧರನ್ ಅವರ ಹೆಸರಿರಲಿಲ್ಲ. ಪಟ್ಟಿಯನ್ನು ಪ್ರಧಾನಿ ಕಾರ್ಯಾಲಯ ಸಿದ್ಧಪಡಿಸಿತ್ತು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿಯೂ ಆಕ್ಷೇಪ ವ್ಯಕ್ತವಾಗಿತ್ತು. ನಂತರ ಎಚ್ಚೆತ್ತುಕೊಂಡಿದ್ದ ಕೇರಳ ಸರ್ಕಾರ, ಪ್ರಧಾನಿ ಜತೆ ಪ್ರಯಾಣಿಸಲಿರುವವರ ಪಟ್ಟಿಯನ್ನು ಪರಿಷ್ಕರಿಸುವಂತೆ ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದಿತ್ತು.

[Related]

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.