ADVERTISEMENT

ಪ್ರಧಾನಿ ಹುದ್ದೆಗೆ ಬಿಜೆಪಿಯಲ್ಲಿ ಹಲವರು ಅರ್ಹರಿದ್ದಾರೆ: ಸಿನ್ಹ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 19:30 IST
Last Updated 13 ಅಕ್ಟೋಬರ್ 2011, 19:30 IST

ನವದೆಹಲಿ, (ಪಿಟಿಐ): ಪ್ರಧಾನ ಮಂತ್ರಿ ಹುದ್ದೆಯ ಅಭ್ಯರ್ಥಿ ಕುರಿತಂತೆ ಬಿಜೆಪಿಯಲ್ಲಿ ಬಿಸಿ ಬಿಸಿ ಚರ್ಚೆ ನಡೆದಿರುವಾಗಲೇ ಪಕ್ಷದ ಹಿರಿಯ ಧುರೀಣ ಯಶವಂತ ಸಿನ್ಹ  `ಪ್ರಧಾನಿ ಹುದ್ದೆಗೆ ಅರ್ಹರಾದ ಅನೇಕ ನಾಯಕರು ಬಿಜೆಪಿಯಲ್ಲಿದ್ದಾರೆ~ ಎಂದು ಗುರುವಾರ ಹೇಳಿಕೆ ನೀಡುವ ಮೂಲಕ ಚರ್ಚೆಗೆ ಹೊಸ ಆಯಾಮ ನೀಡಿದ್ದಾರೆ.

`ಅಡ್ವಾಣಿ ಮತ್ತು ನರೇಂದ್ರ ಮೋದಿ ಅವರಲ್ಲಿ ಪ್ರಧಾನಿ ಹುದ್ದೆಗೆ ಯಾರು ಹೆಚ್ಚು ಸೂಕ್ತ ಅಭ್ಯರ್ಥಿ~ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, `ನಾನೂ ಸೇರಿದಂತೆ ಆ ಹುದ್ದೆಗೆ ಅರ್ಹರಾದ ಅನೇಕರು ಪಕ್ಷದಲ್ಲಿದ್ದಾರೆ.

 ಆ ಹುದ್ದೆಗೆ ಯಾವಾಗ ಮತ್ತು ಯಾರನ್ನು ಬಿಂಬಿಸಬೇಕು ಎನ್ನುವುದನ್ನು ಪಕ್ಷ ಲೋಕಸಭಾ ಚುನಾವಣೆಗೂ ಮುನ್ನ ತೀರ್ಮಾನಿಸಲಿದೆ~ ಎಂದರು.

`ನೀವೂ ಪ್ರಧಾನಿ ಹುದ್ದೆಯ ಆಕಾಂಕ್ಷಿಯೇ~ ಎಂಬ ಪ್ರಶ್ನೆಗೆ ತಕ್ಷಣ ಅವರಿಂದ `ಯಾಕಾಗಬಾರದು...?~ ಎಂಬ ಮಾರುತ್ತರ ತೂರಿಬಂತು. 

`ಹೌದು, ನಾನೂ ಕೂಡ ಆಕಾಂಕ್ಷಿಯೇ. ನನ್ನ ಸಾಮರ್ಥ್ಯದ ಬಗ್ಗೆ ಅನುಮಾನವೇ?~ ಎಂದು ಅವರು ಮರು ಪ್ರಶ್ನಿಸಿದರು. `ಅಡ್ವಾಣಿ ಮತ್ತು ಮೋದಿ ಅವರ ನಡುವೆ ಭಿನ್ನಾಭಿಪ್ರಾಯ ಕೇವಲ ಮಾಧ್ಯಮಗಳು ಹುಟ್ಟು ಹಾಕಿರುವ ಕಥೆ. ಪಕ್ಷದಲ್ಲಿ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಮುಂದಿನ ಪ್ರಧಾನಿ ಅಭ್ಯರ್ಥಿ ಎಂಬ ಚರ್ಚೆಗಳು ಕಾಂಗ್ರೆಸ್‌ನಲ್ಲಿ ಗರಿಗೆದರುತ್ತಿವೆ. ಇದೇ ತೆರನಾದ ಕಥೆಯನ್ನು ಮಾಧ್ಯಮಗಳು ನಮ್ಮ ಪಕ್ಷಕ್ಕೂ ಥಳಕು ಹಾಕಿವೆ~ ಎಂದರು.

ಉಮಾ ಬೆಂಬಲ: ವಾರಣಾಸಿಯಲ್ಲಿ ರಥಯಾತ್ರೆ ಸ್ವಾಗತಿಸಿ ಮಾತನಾಡಿದ ಪಕ್ಷದ ನಾಯಕಿ ಉಮಾ ಭಾರತಿ, ಪ್ರಸ್ತುತ ಸಂದರ್ಭದಲ್ಲಿ ದೇಶವನ್ನು ಮುನ್ನಡೆಸಬಲ್ಲ ಸಾಮರ್ಥ್ಯ ಇರುವುದು ಅಡ್ವಾಣಿ ಅವರಂಥ ನಾಯಕರಿಗೆ ಮಾತ್ರ ಎಂದು ಹೇಳಿದರು.

ನವೆಂಬರ್‌ಗೆ 84ನೇ ವಸಂತಕ್ಕೆ ಕಾಲಿಡುತ್ತಿರುವ ಅಡ್ವಾಣಿ ಅವರಲ್ಲಿನ ಚೈತನ್ಯ ಮತ್ತು ಹುಮ್ಮಸ್ಸು ಮಾತ್ರ ಇನ್ನೂ 12ರ ಹರೆಯದ ಬಾಲಕನದ್ದು ಎನ್ನುವ ಮೂಲಕ ನಾಯಕತ್ವಕ್ಕೆ ವಯಸ್ಸು ಅಡ್ಡಿಯಾಗದು ಎಂಬುದನ್ನು ಸೂಚ್ಯವಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.