ADVERTISEMENT

ಪ್ರೌಢ ವಯಸ್ಸು16ಕ್ಕೆ ಇಳಿಸಲು 'ಸುಪ್ರೀಂ' ನಕಾರ

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 19:45 IST
Last Updated 17 ಜುಲೈ 2013, 19:45 IST
ಪ್ರೌಢ ವಯಸ್ಸು16ಕ್ಕೆ ಇಳಿಸಲು 'ಸುಪ್ರೀಂ' ನಕಾರ
ಪ್ರೌಢ ವಯಸ್ಸು16ಕ್ಕೆ ಇಳಿಸಲು 'ಸುಪ್ರೀಂ' ನಕಾರ   

ನವದೆಹಲಿ (ಪಿಟಿಐ):  ವ್ಯಕ್ತಿಯನ್ನು ಪ್ರೌಢ ಎನ್ನಲು ನಿಗದಿ ಮಾಡಲಾಗಿರುವ ವಯಸ್ಸನ್ನು 18ರಿಂದ 16ಕ್ಕೆ ಇಳಿಸಬೇಕು ಎಂಬ ಕೋರಿಕೆ ತಿರಸ್ಕರಿಸಿರುವ ಸುಪ್ರೀಂಕೋರ್ಟ್, ಹೇಯ ಅಪರಾಧಗಳನ್ನು ಎಸಗಿದ ಬಾಲಕ/ ಬಾಲಕಿಯರಿಗೆ ಕಾನೂನು ರಕ್ಷಣೆ ಕೊಡಬಾರದೆಂಬ ಮನವಿಯನ್ನೂ ತಳ್ಳಿಹಾಕಿದೆ.

ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠವು ಈ ಮಹತ್ವದ ತೀರ್ಪು ಪ್ರಕಟಿಸಿ, `ಈಗಿರುವ ಬಾಲ ನ್ಯಾಯ ಕಾಯಿದೆಯು ಅಪರಾಧ ಪ್ರವೃತ್ತಿಯ ಮಕ್ಕಳಿಗೆ ಮರುಚೈತನ್ಯ ತುಂಬುವ ಆಶಯ ಹೊಂದಿದೆಯೇ ಹೊರತು ಶಿಕ್ಷೆ ವಿಧಿಸಬೇಕೆಂಬ ನಿಲುವು ಹೊಂದಿಲ್ಲ. ಕಾಯಿದೆಯಲ್ಲಿನ ನಿಬಂಧನೆಗಳನ್ನು ನ್ಯಾಯಪೀಠ ಗೌರವಿಸುತ್ತದೆ. ಹೀಗಾಗಿ ಈ ಕಾಯಿದೆಯಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ' ಎಂದು ಸ್ಪಷ್ಟಪಡಿಸಿತು. ಎಸ್.ಎಸ್.ನಿಜ್ಜರ್ ಮತ್ತು ಜೆ.ಚೆಲಮೇಶ್ವರ್ ಪೀಠದಲ್ಲಿದ್ದ ಇನ್ನಿಬ್ಬರು ನ್ಯಾಯಮೂರ್ತಿಗಳಾಗಿದ್ದರು.

ರಾಜಧಾನಿಯಲ್ಲಿ ಡಿ.16ರಂದು ಯುವತಿ ಮೇಲೆ ನಡೆದ ಪೈಶಾಚಿಕ ಅತ್ಯಾಚಾರದಲ್ಲಿ ಒಬ್ಬ ಬಾಲಕ ಕೂಡ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿದ್ದ ಹಲವಾರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ನ್ಯಾಯಪೀಠ ವಜಾ ಮಾಡಿತು. ಈ ಬಹುತೇಕ ಅರ್ಜಿಗಳಲ್ಲಿ ಬಾಲ ನ್ಯಾಯ ಕಾಯಿದೆ -2000ದ (ಮಕ್ಕಳ ಆರೈಕೆ ಮತ್ತು ರಕ್ಷಣೆ) 2ಕೆ ಸೆಕ್ಷನ್‌ನಡಿ ಬಾಲಕ/ ಬಾಲಕಿ ಎಂಬುದಕ್ಕೆ ನೀಡಲಾಗಿರುವ ವ್ಯಾಖ್ಯೆಯ ಸಾಂವಿಧಾನಿಯ ಮೌಲಿಕತೆ  ಪ್ರಶ್ನಿಸಲಾಗಿತ್ತು.

ಅಪರಾಧ ಪ್ರವೃತ್ತಿ ವಿರಳ: `16ರಿಂದ 18 ವರ್ಷದೊಳಗಿನ ಕೆಲವು ಬಾಲಕ/ ಬಾಲಕಿಯರಲ್ಲಿ ಕೆಲವೊಮ್ಮೆ ಸಮಾಜದ ಮುಖ್ಯವಾಹಿನಿಗೆ ಸರಿ ಹೊಂದದ ಅಪರಾಧ ಪ್ರವೃತ್ತಿ ಕಂಡುಬರಬಹುದು. ಆದರೆ, ಇಂತಹ ಉದಾಹರಣೆಗಳು ವಿರಳವಾಗಿ ಮಾತ್ರ ಕಂಡುಬರುತ್ತದೆ. ಇಂತಹ ಅಪರೂಪದ ಪ್ರಕರಣಗಳನ್ನೇ ಮುಂದಿಟ್ಟುಕೊಂಡು ಪ್ರೌಢತೆಯ ವಯಸ್ಸು ಕಡಿತಗೊಳಿಸಬೇಕೆಂಬ ಚಿಂತನೆ ಸರಿಯಲ್ಲ. ಅಪರಾಧ ಪ್ರವೃತ್ತಿಯ ಮಕ್ಕಳು ಕಟ್ಟಾ ಅಪರಾಧಿಗಳಾಗಲು ಆಸ್ಪದ ನೀಡದೆ, ಅವರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಸುವುದಕ್ಕೆ ಪ್ರಯತ್ನಿಸುವುದೇ ಸೂಕ್ತ ಮಾರ್ಗ' ಎಂದು ಪೀಠ ಅಭಿಪ್ರಾಯಪಟ್ಟಿತು.

`ನಮ್ಮ ಬಾಲ ನ್ಯಾಯ ಕಾಯಿದೆಯು ಅಂತರರಾಷ್ಟ್ರೀಯ ಮಾನ್ಯತೆಯ ಸದೃಢ ತತ್ವಗಳು ಹಾಗೂ ರಾಷ್ಟ್ರದ ಸಂವಿಧಾನದಲ್ಲಿ ಅಡಕವಾಗಿರುವ ಪರಿಚ್ಛೇದಗಳಿಗೆ ಅನುಗುಣವಾಗಿ ಇದೆ. ಸಂಸತ್ತಿನ ಸಾಮೂಹಿಕ ವಿವೇಚನಾ ಶಕ್ತಿ ಪ್ರತಿಬಿಂಬಿಸುವ ಬಾಲ ನ್ಯಾಯ ಕಾಯಿದೆಯ ನಿಬಂಧನೆಗಳಿಗೆ ವಿಮುಖವಾಗುವುದು ಜಾಣ್ಮೆಯ ನಿರ್ಧಾರವಾಗದು' ಎಂದೂ ನ್ಯಾಯಮೂರ್ತಿಗಳು ಹೇಳಿದರು.

ಶೇ 2ರಷ್ಟು ಮಾತ್ರ: `ಅಪರಾಧ ದಾಖಲಾತಿ ಬ್ಯೂರೋದ ಅಂಕಿ ಅಂಶಗಳ ಪ್ರಕಾರ ರಾಷ್ಟ್ರದಲ್ಲಿ ನಡೆದಿರುವ ಒಟ್ಟು ಅಪರಾಧಗಳಲ್ಲಿ ಬಾಲಕ/ ಬಾಲಕಿಯರಿಂದ ನಡೆದಿರುವ ಕೃತ್ಯಗಳು ಸುಮಾರು ಶೇ 2ರಷ್ಟಿವೆ. ಅಪರಾಧ ಕಾನೂನು ತಿದ್ದುಪಡಿಗಳ ಕುರಿತು ಪರಾಮರ್ಶಿಸಲು ನೇಮಿಸಲಾಗಿದ್ದ ಮಾಜಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ವರ್ಮಾ ಅವರ ಸಮಿತಿ ಜ.23ರಂದು ಸಲ್ಲಿಸಿದ ವರದಿ ಕೂಡ ಪ್ರೌಢ ವಯಸ್ಸಿನ ಮಿತಿ ಇಳಿಸಬೇಕೆಂಬ ಶಿಫಾರಸು ಮಾಡಿಲ್ಲ' ಎಂಬ ಸಂಗತಿಗಳನ್ನು ನ್ಯಾಯಪೀಠ ಇದೇ ಸಂದರ್ಭದಲ್ಲಿ ಗಮನಕ್ಕೆ ತಂದಿತು.

ಬಾಲ ನ್ಯಾಯ ಕಾಯಿದೆಯ 2 (ಕೆ), 10 ಮತ್ತು 17ನೇ ಸೆಕ್ಷನ್‌ಗಳು ಸಂವಿಧಾನ ವಿರೋಧಿ. ಪ್ರೌಢತೆಯ ವಯಸ್ಸು ದಾಟದ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಬಗ್ಗೆ ಈ ಕಾಯಿದೆ ಏನನ್ನೂ ಹೇಳುವುದಿಲ್ಲ ಎಂಬ ಆಕ್ಷೇಪಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ ವ್ಯಕ್ತವಾಗಿದ್ದವು.

ಯಾವುದೇ ಪ್ರಕರಣದಲ್ಲಿ ಸಿಲುಕುವ ಬಾಲಕ/ ಬಾಲಕಿ ಭವಿಷ್ಯದಲ್ಲಿ ಸಮಾಜಕ್ಕೆ ಕಂಟಕವಾಗಬಲ್ಲನೇ(ಳೇ) ಎಂಬುದನ್ನು ವೈದ್ಯಕೀಯ ಪರೀಕ್ಷೆ ಮಾಡಿ ನಿರ್ಧರಿಸಲು ಅಪರಾಧ ಮನಶಾಸ್ತ್ರಜ್ಞರನ್ನು ನೇಮಕ ಮಾಡಬೇಕು ಎಂಬ ಕೋರಿಕೆಯೂ ಅರ್ಜಿಯಲ್ಲಿ ಸೇರಿತ್ತು. ಡಿ.16ರ ಪ್ರಕರಣದಲ್ಲಿ ಆರೋಪಿಯಾಗಿರುವ ಬಾಲಕನು `ಬಾಲನ್ಯಾಯ ಮಂಡಳಿ' ಮುಂದೆ ವಿಚಾರಣೆ ಎದುರಿಸುತ್ತಿದ್ದು,  ಜುಲೈ 25ರಂದು ತೀರ್ಪು ಪ್ರಕಟವಾಗಲಿದೆ.

ಬಾಲ ನ್ಯಾಯ ಕಾಯಿದೆಗೆ ತಿದ್ದುಪಡಿ ತರಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಬಗ್ಗೆ ದೆಹಲಿ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷ ಅಮೋದ್ ಕಾಂತ್ ಸೇರಿದಂತೆ ಮಕ್ಕಳ ಹಕ್ಕುಗಳ ಹಲವು ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.