ADVERTISEMENT

ಪ್ಲಾಸ್ಟಿಕ್: ‘ಕಾರ್ಪೊರೇಟ್‌ ಸಂಸ್ಥೆಗಳೇ ಹೊಣೆ ಹೊರಲಿ’

ಕೇಂದ್ರ ಸರ್ಕಾರದ ಘೋಷಣೆಗೆ ಗ್ರೀನ್‌ಪೀಸ್ ಇಂಡಿಯಾ ಪ್ರತಿಕ್ರಿಯೆ

ಪಿಟಿಐ
Published 10 ಜೂನ್ 2018, 19:32 IST
Last Updated 10 ಜೂನ್ 2018, 19:32 IST

ನವದೆಹಲಿ: ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಉತ್ಪಾದನೆಯಾಗುವ ಪ್ಲಾಸ್ಟಿಕ್ ತ್ಯಾಜ್ಯಗಳಿಗೆ ಆ ಸಂಸ್ಥೆಗಳನ್ನೇ ಹೊಣೆ ಮಾಡಬೇಕು ಹಾಗೂ ಈ ಸಂಬಂಧದ ಕಾನೂನುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಗ್ರೀನ್‌ಪೀಸ್ ಇಂಡಿಯಾ ಸಂಸ್ಥೆಯು ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

ಒಂದೇ ಬಾರಿ ಬಳಕೆಗೆ ಯೋಗ್ಯವಾಗಿರು‌ವಂತಹ ಪ್ಲಾಸ್ಟಿಕ್‌ ಅನ್ನು 2022ರ ವೇಳೆಗೆ ದೇಶದಾದ್ಯಂತ ನಿರ್ಮೂಲಗೊಳಿಸುವುದಾಗಿ ಕೇಂದ್ರ ಸರ್ಕಾರ ಈ ಬಾರಿಯ ಪರಿಸರ ದಿನಾಚರಣೆ ವೇಳೆ ಘೋಷಿಸಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಸಂಸ್ಥೆಯ ಪರಿಸರ ಮತ್ತು ಇಂಧನ ವಿಭಾಗದ ನಂದಿಕೇಶ್ ಶಿವಲಿಂಗಮ್, ‘ಪ್ಲಾಸ್ಟಿಕ್ ಮುಕ್ತ ಭಾರತದ ಕುರಿತು ಸರ್ಕಾರ ಗಂಭೀರವಾಗಿದ್ದರೆ, ಹಿಂದಿನಂತೆ ಕೇವಲ ಕಾನೂನುಗಳನ್ನು ರೂಪಿಸಿ ಅವುಗಳನ್ನು ಕಡೆಗಣಿಸಲು ಸಾಧ್ಯವಿಲ್ಲ. ಸರ್ಕಾರ ಕಾನೂನನ್ನು ಎಷ್ಟು ಸಮರ್ಥವಾಗಿ ಅನುಷ್ಠಾನಗೊಳಿಸುತ್ತದೆ ಎಂದು ಕಾದು ನೋಡಬೇಕಿದೆ’ ಎಂದು ಹೇಳಿದ್ದಾರೆ.

ADVERTISEMENT

ಉತ್ಪಾದನೆ ಕಡಿಮೆಯಾಗಲಿ: ‘ಕಂಪನಿಗಳು ಗಣನೀಯ ಪ್ರಮಾಣದಲ್ಲಿ ಪ್ಲಾಸ್ಟಿಕ್ ಉತ್ಪಾದನೆ ಮ‌ತ್ತು ಅವುಗಳ ಸರಬರಾಜನ್ನು ಕಡಿಮೆ ಮಾಡಬೇಕು. ಪ್ಲಾಸ್ಟಿಕ್‌ ತ್ಯಾಜ್ಯ ವಿಲೇವಾರಿ ಹೊಣೆಗಾರಿಕೆಯನ್ನು ಅವು ಕಟ್ಟಕಡೆಯ ಬಳಕೆದಾರರ ಮೇಲೆ ಹೊರಿಸಬಾರದು’ ಎಂದು ಅವರು ಹೇಳಿದ್ದಾರೆ.

‘ಪರಿಸರ ಸಂರಕ್ಷಣೆ ಒಂದು ದಿನದ ಆಚರಣೆ ಅಥವಾ ಭಾರಿ ಘೋಷಣೆ ಅಲ್ಲ. ಅದು ನಿಯಮಗಳನ್ನು ಮತ್ತಷ್ಟು ಸುಧಾರಿಸುವುದು, ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದು ಹಾಗೂ ಸಾರ್ವಜನಿಕರು ವರ್ಷಪೂರ್ತಿ ಪ್ರಜ್ಞಾವಂತರಾಗಿ ವರ್ತಿಸುವುದು ಎನ್ನುವುದನ್ನು ನಾವು ನೆನಪಿಟ್ಟುಕೊಳ್ಳಬೇಕು’ ಎಂದು ಹೇಳಿದ್ದಾರೆ.

**

‘ಎನ್‌ಸಿಎಪಿ ಅಂತಿಮಗೊಳಿಸಿ’

ರಾಷ್ಟ್ರೀಯ ವಾಯು ಶುದ್ಧೀಕರಣ ಕಾಆರ್ಯಕ್ರಮ (ಎನ್‌ಸಿಎಪಿ) ಕುರಿತು ವಾಯುಮಾಲಿನ್ಯ ತಜ್ಞರು ಹಾಗೂ ಸಂಬಂಧಪಟ್ಟವರು ನೀಡಿದ ಶಿಫಾರಸುಗಳನ್ನು ಸೇರ್ಪಡೆಗೊಳಿಸಿ ಸರ್ಕಾರ ಕರಡನ್ನು ಅಂತಿಮಗೊಳಿಸಬೇಕು. ವಿಶ್ವ ಪರಿಸರ ದಿನಾಚರಣೆಯಂದು ಸರ್ಕಾರ ತೋರಿದ ಸಕ್ರಿಯತೆಯನ್ನು ಸದಾ ಹಾಗೆಯೇ ಉಳಿಸಿಕೊಳ್ಳುತ್ತದೆ ಎಂದು ನಿರೀಕ್ಷಿಸುತ್ತೇವೆ’ ಎಂದು ಶಿವಲಿಂಗಂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.