ADVERTISEMENT

ಫೆ.17:ಚೆನ್ನೈಯಲ್ಲಿ ಅಮೆರಿಕ ವಿವಿ ಮೇಳ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 18:10 IST
Last Updated 14 ಫೆಬ್ರುವರಿ 2011, 18:10 IST

ಚೆನ್ನೈ:ಅಮೆರಿಕದಲ್ಲಿ ಉನ್ನತ ವ್ಯಾಸಂಗ ಅವಕಾಶಗಳ ಬಗ್ಗೆ ಭಾರತೀಯ ವಿದ್ಯಾರ್ಥಿಗಳಿಗೆ ಪರಿಚಯಿಸುವುದಕ್ಕಾಗಿ  ಅಮೆರಿಕ-ಭಾರತ ಶೈಕ್ಷಣಿಕ ಪ್ರತಿಷ್ಠಾನದ (ಯುಎಸ್‌ಐಇಎಫ್) ಆಶ್ರಯದಲ್ಲಿ ಫೆ. 17ರಂದು ಇಲ್ಲಿನ ತಾಜ್ ಕೋರಮಂಡಲ್ ಹೋಟೆಲ್‌ನಲ್ಲಿ ಲಿಂಡೆನ್ ಅಮೆರಿಕ ವಿಶ್ವವಿದ್ಯಾಲಯ ಮೇಳ (ಲಿಂಡೆನ್ ಯು.ಎಸ್.ಯೂನಿವರ್ಸಿಟಿ ಫೇರ್) ನಡೆಯಲಿದೆ.

ಅಂದು ಸಂಜೆ 5ರಿಂದ 8ರ ತನಕ ಈ ಮೇಳ ನಡೆಯಲಿದ್ದು, ಅಮೆರಿಕದ 17 ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.  ಅಮೆರಿಕದಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಮಾಡಲು ಬಯಸುವ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಇಲ್ಲಿನ ಅಮೆರಿಕ ಕಾನ್ಸುಲೇಟ್ ಕಚೇರಿಯ ಪ್ರಕಟಣೆ ತಿಳಿಸಿದೆ.

ಮೇಳದಲ್ಲಿ ಯುಎಸ್‌ಐಇಎಫ್ ಮತ್ತು ರಾಜತಾಂತ್ರಿಕ ವಿಭಾಗಗಳ ಮಳಿಗೆಗಳು ಇರುತ್ತವೆ. ಉನ್ನತ ವ್ಯಾಸಂಗ ಮತ್ತು ವೀಸಾಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಇಲ್ಲಿ ಮಾಹಿತಿ ಪಡೆಯಬಹುದು. ವಿವಿಧ ವಿವಿಗಳ ನೇಮಕಾತಿ ಅಧಿಕಾರಿಗಳು ಸಹ ಅಲ್ಲಿ ಇರುವುದರಿಂದ ಅಮೆರಿಕದಲ್ಲಿ ವ್ಯಾಸಂಗ ಮಾಡುವುದಕ್ಕೆ ಸಂಬಂಧಿಸಿದ ವಿಚಾರ ತಿಳಿದುಕೊಳ್ಳಲು ಸಾಧ್ಯವಾಗಲಿದೆ. ಮೇಳದಲ್ಲಿ ಪಾಲ್ಗೊಳ್ಳುವ ವಿವಿ ವಿವರಕ್ಕೆ http://www.lindentours.com ಗೆ ಭೇಟಿ ನೀಡಬಹುದು.

1950ರಲ್ಲಿ ಸ್ಥಾಪನೆಯಾದ ಯುಎಸ್‌ಐಇಎಫ್ ಎರಡೂ ದೇಶಗಳ ನಡುವಿನ ಜನರ ನಡುವೆ ಹೆಚ್ಚಿನ ತಿಳಿವಳಿಕೆಗೆ ಸಹಾಯ ಮಾಡುತ್ತಿದೆ. ಅಮೆರಿಕ ಸರ್ಕಾರವು ಶಿಕ್ಷಣ ಮತ್ತು ಸಾಂಸ್ಕೃತಿಕ ವಿನಿಮಯಕ್ಕಾಗಿ ಸ್ಥಾಪಿಸಿರುವ ಫುಲ್‌ಬ್ರೈಟ್ ಕಾರ್ಯಕ್ರಮಗಳ ರೂಪದಲ್ಲೂ ಪ್ರತಿಷ್ಠಾನದ ಕಾರ್ಯಗಳು ನಡೆಯುತ್ತಿವೆ. ಈ ಪ್ರತಿಷ್ಠಾನವು ಅಮೆರಿಕ ಮತ್ತು ಭಾರತೀಯ ವಿದ್ಯಾರ್ಥಿಗಳಿಗೆ, ಬೋಧಕರಿಗೆ, ವೃತ್ತಿಪರರಿಗೆ ಫುಲ್‌ಬ್ರೈಟ್-ನೆಹರು ಮತ್ತು ಇತರ ಫುಲ್‌ಬ್ರೈಟ್ ಫೆಲೋಶಿಪ್‌ಗಳನ್ನು ನೀಡುತ್ತಿದೆ ಹಾಗೂ ವಿದ್ವಾಂಸರಿಗೆ ಹಲವು ರೀತಿಯಲ್ಲಿ ನೆರವಾಗುತ್ತಿದೆ. ಅಮೆರಿಕದಲ್ಲಿ ಉನ್ನತ ಶಿಕ್ಷಣ ಅವಕಾಶಗಳನ್ನು ಪರಿಚಯಿಸುವ ಹೊಣೆಗಾರಿಕೆಯೂ ಪ್ರತಿಷ್ಠಾನದ  ಮೇಲಿದೆ. ಇನ್ನಷ್ಟು ಮಾಹಿತಿಗೆ www.us-ief.org.in ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.