ADVERTISEMENT

ಬಂದೂಕು ಪರಿಶೀಲನೆಗೆ ಸಹಕಾರ: ಇಟಲಿ ಭರವಸೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 19:30 IST
Last Updated 23 ಫೆಬ್ರುವರಿ 2012, 19:30 IST

ಕೊಚ್ಚಿ (ಪಿಟಿಐ): ಹಡಗಿನ ಸಿಬ್ಬಂದಿ ಮೀನುಗಾರರ ಹತ್ಯೆಗೆ ಬಳಸಿದ್ದಾರೆ ಎನ್ನಲಾದ ಬಂದೂಕುಗಳ ಪರಿಶೀಲನೆಗೆ ಇಟಲಿ ಸರ್ಕಾರವು ಷರತ್ತಿನ ಸಹಕಾರ ನೀಡಲು ಒಪ್ಪಿಕೊಂಡಿದೆ.

`ನಮ್ಮ ಸಮಕ್ಷಮದಲ್ಲೇ ಬಂದೂಕಿನ ಪರೀಕ್ಷೆ ಮಾಡಿದರೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ, ಇದರಿಂದ ನ್ಯಾಯ ಸಿಗಬಹುದು ಎಂಬ ಭರವಸೆ ಇದೆ~ ಎಂದು ಇಟಲಿಯ ವಿದೇಶಾಂಗ ಖಾತೆಯ ಉಪ ಸಚಿವ ಸ್ಟೆಫನ್ ಡೆ ಮಿಸ್ತುರಾ ಅವರು ತಿಳಿಸಿದ್ದಾರೆ.

ಇಬ್ಬರು ಮೀನುಗಾರರ ಹತ್ಯೆಗೆ ಬಳಸಲಾದ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಳ್ಳಲು ಇಟಲಿಯ ಎನ್‌ರಿಕಾ ಲೆಕ್ಸಿ ಹಡಗನ್ನು ಶೋಧಿಸುವಂತೆ ಕೊಲ್ಲಂ ನ್ಯಾಯಾಲಯವು  ಪೊಲೀಸರಿಗೆ ಈಚೆಗೆ ಆದೇಶಿಸಿದೆ.

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಅತಿಥಿ ಗೃಹದಲ್ಲಿ ಬಂಧನದಲ್ಲಿರುವ ಇಟಲಿಯ ಹಡಗಿನ ಇಬ್ಬರು ಸಿಬ್ಬಂದಿಯನ್ನು ಭೇಟಿ ಮಾಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಮಿಸ್ತುರಾ ಅವರು, `ಘಟನೆಯು ಅಂತರರಾಷ್ಟ್ರೀಯ ಜಲ ಗಡಿಯಲ್ಲಿ ನಡೆದಿದೆ ಎಂಬ ತಮ್ಮ ಮೊದಲಿನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ~ ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಇಟಲಿಯ ಭಾರತದ ರಾಯಭಾರಿ ಗಿಯಾಕೊಮೊ ಸ್ಯಾನ್‌ಫೆಲಿಕ್ ಸಹ ಜತೆಯಲ್ಲಿ ಇದ್ದರು.

ಮಿಸ್ತುರಾ ಅವರು ಬುಧವಾರ ರಾತ್ರಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರನ್ನು ಕೊಟ್ಟಾಯಂನಲ್ಲಿ ಭೇಟಿ ಮಾಡಿ ಚರ್ಚಿಸಿದರು. ಆದರೆ ಎರಡೂ ಕಡೆಯವರೂ ತಂತಮ್ಮ ನಿಲುವಿಗೆ ಅಂಟಿಕೊಂಡರು ಎನ್ನಲಾಗಿದೆ.

ಈ ಮಧ್ಯೆ ಬಂಧಿತ ಹಡಗಿನ ಸಿಬ್ಬಂದಿಯ ಪೊಲೀಸ್ ವಶದ ಅವಧಿ ಗುರುವಾರ ಮಾ.1ರವರೆಗೆ ವಿಸ್ತರಿಸಲಾಗಿದೆ.
ಇಬ್ಬರು ಸಿಬ್ಬಂದಿಯ ವಿರುದ್ಧ ಮೀನುಗಾರರ ಕೊಲೆ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೋರಿ ಇಟಲಿ ಸರ್ಕಾರದ ಪರ ಸಲ್ಲಿಸಲಾಗಿರುವ ಅರ್ಜಿಯನ್ನು ಕೇರಳ ಹೈಕೋರ್ಟ್ ವಿಚಾರಣೆಗೆ ಅಂಗೀಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.