ADVERTISEMENT

ಬಡ್ತಿ ಮೀಸಲಾತಿ ಮಸೂದೆ: ಸಂಸತ್ತಿನಲ್ಲಿ ಕೋಲಾಹಲ, ಕಲಾಪ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 9:35 IST
Last Updated 17 ಡಿಸೆಂಬರ್ 2012, 9:35 IST

ನವದೆಹಲಿ (ಐಎಎನ್ಎಸ್): ಸರ್ಕಾರಿ ಹುದ್ದೆಗಳ ಬಡ್ತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಕಲ್ಪಿಸುವ ಮಸೂದೆ ಮತ್ತು ಅಲ್ಪಸಂಖ್ಯಾತರಿಗೆ ಸಂಬಂಧಿಸಿದಂತೆ ಸಾಚಾರ್ ಸಮಿತಿ ವರದಿಯ ಅನುಷ್ಠಾನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಸಮಾಜವಾದಿ ಪಕ್ಷದ (ಎಸ್ಪಿ)  ಸದಸ್ಯರು ತೀವ್ರ ಪ್ರತಿಭಟನೆ ನಡೆಸಿದ ಪರಿಣಾಮವಾಗಿ ಸಂಸತ್ತಿನ ಉಭಯ ಸದನಗಳಲ್ಲಿ ಸೋಮವಾರ ಕಲಾಪಗಳು ಅಸ್ತವ್ಯಸ್ತಗೊಂಡವು.

ರಾಜ್ಯಸಭೆಯಲ್ಲಿ ವಿವಾದಾತ್ಮಕ ಮೀಸಲಾತಿ ಮಸೂದೆಯನ್ನು ಮತಕ್ಕೆ ಹಾಕುವ ಮುನ್ನ ಎಸ್ ಪಿ ಸದಸ್ಯ ರಾಮ್ ಗೋಪಾಲ ಯಾದವ್ ಅವರು ಮುಸ್ಲಿಮರಿಗೆ ಮೀಸಲಾಗಿ ಒದಗಿಸಲು ಶಿಫಾರಸು ಮಾಡಿದ್ದ ಸಾಚಾರ್ ಸಮಿತಿ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸುವಂತೆ ಯಾದವ್ ಅವರಿಗೆ ಸೂಚಿಸಿದ ಸಭಾಪತಿ ಹಮೀದ್ ಅನ್ಸಾರಿ ಅವರು ಪ್ರಶ್ನೋತ್ತರ ವೇಳೆ ಸುಗಮವಾಗಿ ಸಾಗಬೇಕು ಎಂದು ಹೇಳಿದರು.

ಆದರೆ ಸಮಾಜವಾದಿ ಪಕ್ಷದ ನರೇಶ ಅಗರ್ ವಾಲ್ ಅವರು ಪಕ್ಷದ ಸದಸ್ಯರಿಗೆ ಸಭಾಧ್ಯಕ್ಷರ ಪೀಠದ ಮುಂಭಾಗಕ್ಕೆ ತೆರಳಿ ಪ್ರತಿಭಟನೆ ನಡೆಸುವಂತೆ ನಿರ್ದೇಶಿಸಿದರು. ಪರಿಣಾಮವಾಗಿ ಸಭಾಪತಿಯವರು ಸದನವನ್ನು ಅರ್ಧಗಂಟೆ ಕಾಲ ಮುಂದೂಡಿದರು.

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ನೇತೃತ್ವದಲ್ಲಿ ಸಮಾಜವಾದಿ ಪಕ್ಷದ ಸದಸ್ಯರು ಸರ್ಕಾರಿ ಹುದ್ದೆಗಳಲ್ಲಿ ಬಡ್ತಿ ಮೀಸಲಾತಿ ವಿಚಾರವನ್ನು ಪ್ರಸ್ತಾಪಿಸಿದಾಗ ಲೋಕಸಭೆಯಲ್ಲೂ  ಇಂತಹುದೇ ದೃಶ್ಯ ಕಂಡು ಬಂದಿತು.

ಸಮಾಜವಾದಿ ಪಕ್ಷದ ಸದಸ್ಯರು ಪ್ರಶ್ನೋತ್ತರ ವೇಳೆಯಲ್ಲಿ  ಮಸೂದೆ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಭಾಧ್ಯಕ್ಷರ ಪೀಠದ ಮುಂಭಾಗಕ್ಕೆ ಧಾವಿಸಿದರು. ಲೋಕಸಭಾಧ್ಯಕ್ಷೆ ಮೀರಾ ಕುಮಾರ್ ಅವರು ಶಾಂತಿ ಕಾಯ್ದುಕೊಳ್ಳುವಂತೆ ಸಮಾಜವಾದಿ ಪಕ್ಷಕ್ಕೆ ಮನವಿ ಮಾಡಿದರು. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಲು ಅವಕಾಶ ನೀಡುವುದಾಗಿ ಅವರು ಹೇಳಿದರು.

ಸಂಸದೀಯ ವ್ಯವಹಾರಗಳ ಸಚಿವ ಕಮಲನಾಥ್ ಅವರೂ ಸಮಾಜವಾದಿ ಪಕ್ಷದ ಸದಸ್ಯರನ್ನು ಸಮಾಧಾನಿಸಲು ಯತ್ನಿಸಿದರು. ಆದರೆ ಪ್ರತಿಭಟನೆ ಮುಂದುವರಿಯಿತು. ಕಡೆಗೆ ಸಭಾಧ್ಯಕ್ಷರು ಸದನವನ್ನು ಮೊದಲು 11.30 ಗಂಟೆಗವರೆಗೂ ನಂತರ ಮಧ್ಯಾಹ್ನದವರೆಗೂ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.