ADVERTISEMENT

ಬಡ್ತಿ ಮೀಸಲಾತಿ: ಯಥಾಸ್ಥಿತಿಗೆ ‘ಸುಪ್ರೀಂ’ ನಕಾರ

25ರೊಳಗೆ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧವಾಗಲಿ

ಪಿಟಿಐ
Published 2 ಏಪ್ರಿಲ್ 2018, 19:47 IST
Last Updated 2 ಏಪ್ರಿಲ್ 2018, 19:47 IST
ಬಡ್ತಿ ಮೀಸಲಾತಿ: ಯಥಾಸ್ಥಿತಿಗೆ ‘ಸುಪ್ರೀಂ’ ನಕಾರ
ಬಡ್ತಿ ಮೀಸಲಾತಿ: ಯಥಾಸ್ಥಿತಿಗೆ ‘ಸುಪ್ರೀಂ’ ನಕಾರ   

ನವದೆಹಲಿ: ‘ಬಡ್ತಿ ಮೀಸಲಾತಿ ವಿಧಾನ ಅನುಸರಿಸುವ 2002ರ ಕಾಯ್ದೆ ರದ್ದತಿ ಆದೇಶ ಪಾಲಿಸುವ ನಿಟ್ಟಿನಲ್ಲಿ, ಒಂದು ತಿಂಗಳೊಳಗೆ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಸೋಮವಾರ ಮತ್ತೆ ಸೂಚಿಸಿರುವ ಸುಪ್ರೀಂ ಕೋರ್ಟ್‌, ಈ ಪ್ರಕರಣ ಕುರಿತು ಯಥಾಸ್ಥಿತಿ ಮುಂದುವರಿಸಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಟಿಸಿಎಲ್‌ ಅಧಿಕಾರಿ ಆರ್‌.ಟಿ. ಚಂದ್ರಮೌಳಿ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಮದನ್‌ ಬಿ. ಲೋಕೂರ್‌ ನೇತೃತ್ವದ ಪ್ರತ್ಯೇಕ ಪೀಠ ಕಳೆದ ಫೆಬ್ರುವರಿ 19ರಂದು ನೀಡಿದ್ದ ಯಥಾಸ್ಥಿತಿ ಮುಂದುವರಿಕೆ ಆದೇಶವನ್ನು ಮಾರ್ಚ್‌ 20ರಂದು ಮಾರ್ಪಾಡು ಮಾಡಲಾಗಿದೆ ಎಂದು ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯಲ್‌ ಹಾಗೂ ಯು.ಯು. ಲಲಿತ್‌ ಅವರನ್ನು ಒಳಗೊಂಡ ಪೀಠ ತಿಳಿಸಿತು.

‘ಬಡ್ತಿ ಮೀಸಲಾತಿ ಪದ್ಧತಿ ವಿರೋಧಿಸಿ ಬಿ.ಕೆ. ಪವಿತ್ರಾ ಮತ್ತಿತರರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ 2017ರ ಫೆಬ್ರುವರಿ 9ರಂದು ನಾವು ತೀರ್ಪು ನೀಡಿದ್ದೇವೆ. ಆ ಆದೇಶವನ್ನು ಪಾಲಿಸಲೇಬೇಕು’ ಎಂದು ನ್ಯಾಯಪೀಠ ಹೇಳಿತು.

ADVERTISEMENT

ಬಿ.ಕೆ. ಪವಿತ್ರಾ ಅವರ ಅರ್ಜಿ ಕುರಿತು ನೀಡಲಾದ ತೀರ್ಪಿಗೆ ಸಂಬಂಧಿಸಿದಂತೆ ಉಂಟಾಗಿರುವ ಬೆಳವಣಿಗೆಗಳನ್ನು ಆಧರಿಸಿ ಸಲ್ಲಿಕೆಯಾಗಿರುವ ಎಲ್ಲ ಮೇಲ್ಮನವಿಯ ವಿಚಾರಣೆಯನ್ನು ಮೂಲ ಪೀಠಕ್ಕೆ ವರ್ಗಾಯಿಸಿದ್ದರಿಂದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಗೋಯಲ್‌, ಪರಿಷ್ಕೃತ ಜ್ಯೇಷ್ಠತಾ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಿರುವುದರಿಂದ ಒಂದು ತಿಂಗಳೊಳಗೆ ಕೋರ್ಟ್‌ ತೀರ್ಪಿನ ಅನುಷ್ಠಾನಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳಲೇಬೇಕು ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.