ADVERTISEMENT

ಬದರಿನಾಥದಲ್ಲಿ ಗುಲ್ಬರ್ಗ ದಂಪತಿ ಸುರಕ್ಷಿತ

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 19:59 IST
Last Updated 20 ಜೂನ್ 2013, 19:59 IST

ಗುಲ್ಬರ್ಗ: ಉತ್ತರಾಖಂಡದ ಬದರಿನಾಥದಲ್ಲಿ ಅಪಾಯಕ್ಕೆ ಸಿಲುಕಿದ್ದ ಗುಲ್ಬರ್ಗದ ಕೇದಾರನಾಥ- ಸುಜಾತಾ ಜಾಜೀ ದಂಪತಿಯನ್ನು ಭಾರತೀಯ ಸೇನೆ ಹೆಲಿಕಾಪ್ಟರ್ ಮೂಲಕ ಗುರುವಾರ ಮಧ್ಯಾಹ್ನ ಸುರಕ್ಷಿತ ಸ್ಥಳಕ್ಕೆ ತಲುಪಿಸಿದೆ.

`ಜೂ. 16ರ ಸಂಜೆಯಿಂದಲೇ ಮೊಬೈಲ್ ಸಂಪರ್ಕ ಕಡಿತಗೊಂಡಿತ್ತು. ಇದರಿಂದ ಗಾಬರಿಯಾಗಿ ರಜೆ ಹಾಕಿ ಗುಲ್ಬರ್ಗಕ್ಕೆ ತಲುಪಿದೆ' ಎಂದು ಕೇರಳದಲ್ಲಿ ಉದ್ಯೋಗಿಯಾಗಿರುವ ಅವರ ಪುತ್ರ ಕೃಷ್ಣ ಜಾಜೀ ಅವರನ್ನು ಸಂಪರ್ಕಿಸಿದ `ಪ್ರಜಾವಾಣಿ'ಗೆ ತಿಳಿಸಿದರು.

`ಮೊಬೈಲ್, ಇಂಟರ್‌ನೆಟ್ ಮೂಲಕ ಸತತ ಪ್ರಯತ್ನಿಸಿದರೂ ಸಂಪರ್ಕ ಸಾಧ್ಯವಾಗಲಿಲ್ಲ. ಗುರುವಾರ ಮಧ್ಯಾಹ್ನವಷ್ಟೇ ಸಂಪರ್ಕ ಸಾಧ್ಯವಾಯಿತು. ಬದರಿನಾಥದಿಂದ ಹರಿದ್ವಾರ ಮಾರ್ಗದ ಜೋಶಿ ಮಠವನ್ನು ಸುರಕ್ಷಿತವಾಗಿ ತಲುಪಿರುವ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಭಾರತೀಯ ಸೇನೆಯವರು ಹೆಲಿಕಾಪ್ಟರ್ ಮೂಲಕ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ' ಎಂದು ಕೃಷ್ಣಾ ಜಾಜೀ ತಿಳಿಸಿದರು.

ಪೂರ್ವ ಯೋಜನೆಯಂತೆ ಜೂ. 18ಕ್ಕೆ ಬೆಂಗಳೂರಿಗೆ ವಿಮಾನದಲ್ಲಿ ವಾಪಸ್ ಬರಬೇಕಿತ್ತು. ಆದರೆ ಜೂ. 16ರ ಬೆಳಿಗ್ಗೆ ಬದರಿನಾಥದಲ್ಲಿ ದೇವರ ದರ್ಶನ ಮಾಡಿದ ನಂತರ ಸತತ ಮಳೆ ಸುರಿಯಲಾರಂಭಿಸಿತು.

ಸಂಜೆ ಸಂಪರ್ಕ ಕಡಿತಗೊಂಡಿತು. ತಂದೆ-ತಾಯಿ ಜೊತೆ ಬಾಗಲಕೋಟೆ ಹಾಗೂ ಧಾರವಾಡದ ಆರು ಜನ ಸಂಬಂಧಿಕರಿದ್ದಾರೆ. ಎಲ್ಲರೂ ಸುರಕ್ಷಿತವಾಗಿದ್ದು, ಶನಿವಾರ ಬದರಿನಾಥದಿಂದ ಹೊರಡಲಿದ್ದಾರೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.