ADVERTISEMENT

ಬದ್ದತೆ ಮರೆತ ಕಿಂಗ್‌ಫಿಷರ್: ನೌಕರರ ಪಾಲಿಗೆ ಕತ್ತಲೆ ದೀಪಾವಳಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2012, 9:40 IST
Last Updated 13 ನವೆಂಬರ್ 2012, 9:40 IST
ಬದ್ದತೆ ಮರೆತ ಕಿಂಗ್‌ಫಿಷರ್: ನೌಕರರ ಪಾಲಿಗೆ ಕತ್ತಲೆ ದೀಪಾವಳಿ
ಬದ್ದತೆ ಮರೆತ ಕಿಂಗ್‌ಫಿಷರ್: ನೌಕರರ ಪಾಲಿಗೆ ಕತ್ತಲೆ ದೀಪಾವಳಿ   

ಮುಂಬೈ (ಪಿಟಿಐ): ಆರ್ಥಿಕವಾಗಿ ದಿವಾಳಿಯೆದ್ದಿರುವ ಕಿಂಗ್‌ಫಿಷರ್ ಏರ್‌ಲೈನ್ಸ್ ಸಂಸ್ಥೆಯ ತನ್ನ ಸುಮಾರು 3000 ಸಿಬ್ಬಂದಿಗೆ ದೀಪಾವಳಿ ಹಬ್ಬದ ಒಳಗಾಗಿ ಬಾಕಿ ವೇತನ ಪಾವತಿಸುವುದಾಗಿ ನೀಡಿದ್ದ ಮಾತು ತಪ್ಪಿರುವ ಕಾರಣ ಬೆಳಕಿನ ಹಬ್ಬ ಇದೀಗ ಸಂಸ್ಥೆಯ ನೌಕರರ ಪಾಲಿಕೆ ಕತ್ತಲೆಯ ಹಬ್ಬವಾಗಿದೆ.
 
ಇದೇ ವೇಳೆ ಸಂಸ್ಥೆಯು `3000 ಸಿಬ್ಬಂದಿಯು ನಿರ್ದೇಶಕ ವಿಜಯ ಮಲ್ಯ ಅವರಿಂದ ವೇತನದ ಹೊರತಾಗಿಯೂ ದೀಪಾವಳಿ ಕೊಡುಗೆ ಪಡೆಯಲಿದ್ದಾರೆ~ ಎಂದು ಹೇಳಿದೆ ಎಂದು ಮೂಲಗಳು ತಿಳಿಸಿವೆ.

`ಇದೊಂದು ಕತ್ತಲೆಯ ದೀಪಾವಳಿ ನಮಗೆ. ವೇತನ ಬಾಕಿ ಪಾವತಿಸುವ ತನ್ನ ಬದ್ದತೆಯಲ್ಲಿ ಆಡಳಿತ ಮಂಡಳಿಯು ಮತ್ತೊಮ್ಮೆ ಸೋತಿದೆ. ಕಳೆದ ತಡರಾತ್ರಿವರೆಗೂ ನಮ್ಮ ಖಾತೆಗಳಿಗೆ ವೇತನ ಪಾವತಿಯಾಗಿಲ್ಲ. ಆದಾಗ್ಯೂ, ಆಡಳಿತ ಮಂಡಳಿಯು ಹಬ್ಬಕ್ಕೆ ನಮ್ಮ ವೇತನ ಬಾಕಿ ಚುಕ್ತಾ ಮಾಡುವುದಾಗಿ ಹೇಳಿದೆ~ ಎಂದು ಮೂಲಗಳು ಹೇಳಿವೆ.

ಈ ನಡುವೆ ಏರ್‌ಲೈನ್ಸ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸಂಜಯ್ ಅಗರವಾಲ್ ಮೂರು ತಿಂಗಳ ಬಾಕಿ ವೇತನವನ್ನು ದೀಪಾವಳಿ ಹಬ್ಬದೊಳಗಡೆ ಪಾವತಿಸುವುದಾಗಿ ಮನವೊಲಿಸಿದ ಹಿನ್ನಲೆಯಲ್ಲಿ ಸಿಬ್ಬಂದಿ ಪ್ರತಿಭಟನೆ ಕೈ ಬಿಟ್ಟಿದ್ದರು.
 
ಈ ಕುರಿತಂತೆ ಪ್ರತಿಕ್ರಿಯೆ ಪಡೆಯಲು ಏರ್‌ಲೈನ್ಸ್ ಸಂಸ್ಥೆಗೆ ಸಂಪರ್ಕಿಸಿದರೆ ವಕ್ತಾರರು ಲಭ್ಯವಾಗುತ್ತಿಲ್ಲ.

ವೇತನ ಬಾಕಿ ಪಾವತಿಸುವಂತೆ ಆಗ್ರಹಿಸಿ 250 ಎಂಜಿನಿಯರ್‌ಗಳು ಸೆ. 30ರಿಂದ ಮುಷ್ಕರ ಆರಂಭಿಸಿದ ಬಳಿಕ ಕಿಂಗ್‌ಫಿಷರ್ ಲಾಕೌಟ್ (ಬೀಗಮುದ್ರೆ) ಘೋಷಣೆ ಮಾಡಿ ವಿಮಾನ ಹಾರಾಟ ಸ್ಥಗಿತಗೊಳಿಸಿತ್ತು. ನಂತರ ಪೈಲಟ್‌ಗಳು ಮುಷ್ಕರದಲ್ಲಿ ಸೇರಿಕೊಂಡು ಮೇ ತಿಂಗಳಿನಿಂದ ಬಾಕಿ ಇರುವ ವೇತನ ಪಾವತಿಸುವಂತೆ ಒತ್ತಾಯಪಡಿಸಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕಿಂಗ್‌ಫಿಷರ್, ವಿಮಾನ ಸಂಚಾರವನ್ನು ಅ.1ರಿಂದ ಸಂಪೂರ್ಣವಾಗಿ ಸ್ಥಗಿತಗೊಳಿಸಿತ್ತು.

ಇದನ್ನು ಗಮನಿಸಿದ ಡಿಜಿಸಿಎ ವೈಮಾನಿಕ ಪರವಾನಗಿಯನ್ನು ಏಕೆ ಅಮಾನತು ಮಾಡಬಾರದೆಂದು ವಿವರಣೆ ಕೇಳಿ `ಕಿಂಗ್‌ಫಿಷರ್~ಗೆ ನೋಟಿಸ್ ನೀಡಿತ್ತು. ಆದರೆ ಸಮರ್ಪಕ ಉತ್ತರ ಬಾರದ ಹಿನ್ನೆಲೆಯಲ್ಲಿ ಡಿಜಿಸಿಎ ಅಕ್ಟೋಬರ್ 20 ರಂದು ಕಿಂಗ್‌ಫಿಷರ್ ಹಾರಾಟ ಪರವಾನಗಿಯನ್ನು ಅಮಾನತುಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.